ಈ ಪುಟವನ್ನು ಪ್ರಕಟಿಸಲಾಗಿದೆ

410

ಸೇತುವೆ

ಸುನಂದೆಯೂ ಬಾಗಿಲ ಬಳಿ ನಿಂತು ಅದನ್ನು ಕೇಳಿದಳು.
ಅವರು ಶಿರಸಿ ಕಡೆಯ ಜನ. ಮನೆಮಾತು ಕೊಂಕಣಿ. ಆಕೆಯನ್ನು ಕೈಹಿಡಿದು
ಈ ಊರಿಗೆ ತಂದವರು ತುಂಬಾ ಆಸ್ತಿವಂತರಾಗಿದ್ದರು. ನಾಲ್ಕರು ಜಿಲ್ಲೆಗಳಲ್ಲಿ
ಅವರಿಗೆ ಜಮೀನಿತ್ತು. ಇದು ಎರಡನೆ ಸಂಬಂಧ. ಇಂದಿರೆ ಎಂಟು ವರ್ಷದವಳಿದ್ದಾಗ
ಅವರು ತೀರಿಕೊಂಡರು. ಬ್ಯಾಂಕಿನಲ್ಲಿ ಆಕೆಯ ಮತ್ತು ಮಗಳ ಹೆಸರಲ್ಲಿ ಹತ್ತು
ಸಾವಿರ ನಗದು ಹಣ, ಸಮಿಪದಲ್ಲೆ ಹಳ್ಳಿಯಲ್ಲಿ ಇಪ್ಪತ್ತು ಎಕರೆ ಹೊಲ........ .ಆ
ಪುಣ್ಯಾತ್ಮ ಇವರನ್ನು ಅನಾಥರಾಗಿ ಮಾಡಿಹೋಗಿರಲಿಲ್ಲ. ಆದರೂ ಹೆಣ್ಣು ಹೆಂಗಸ
ರಷ್ಟೆ ಒಂದು ಮನೆಯಲ್ಲಿದ್ದು ಮಾನವಾಗಿ ಬಾಳುವುದು ಸುಲಭವೆ? ಸುಲಭವಲ್ಲದು
ದನ್ನೇ ಆಕೆ ಸಾಧಿಸಿದರು. ಶಿರಸಿಗೆ ವಾಪಸು ಹೋಗುವುದಕ್ಕಂತೂ ಅವರು ಇಷ್ಟ
ಪಡಲಿಲ್ಲ. ಗತ ಜೀವನದ ಗೋರಿಯನ್ನು ಅಗೆದು ಆ ಮೂಳೆಗಳ ಮುಖ ನೋಡು
ವುದು ಆಕೆಗೆ ಮನಸ್ಸಾಗಲಿಲ್ಲ.
"ನನಗೆ ಇನ್ನೇನಾಗ್ಬೇಕು ಹೇಳಿ? ಒಳ್ಳೆಯ ವರ ನೋಡಿ ಇಂದಿರೆಯನ್ನು ಆತನ
ಕೈಯಲ್ಲಿಟ್ಟರೆ ನನ್ನ ಕೆಲಸವಾಯ್ತು."
ಮಾತುಗಳು ಶಾಂತವಾಗಿ ಸಾವಧಾನವಾಗಿ ಹೊರಬಂದಿದ್ದುವು. ಉದ್ವೇಗ
ವಿರಲಿಲ್ಲ. ರೋದನವಿರಲಿಲ್ಲ. ಆದರೂ ಕೊನೆಯಲ್ಲಿ ಆ ಕಣ್ಣುಗಳು ಹೌದೋ
ಅಲ್ಲವೋ ಎನ್ನುವಂತೆ ಹನಿಯೂಡಿದುವು.
ಜಯದೇವನೆಂದ:
"ನೀವು ಯಾವ ಯೋಚ್ನೇನೂ ಮಾಡ್ಬೇಡಿ. ಎಲ್ಲಾ ಸರಿ ಹೋಗುತ್ತೆ."
ಸ್ಪಷ್ಟವಾಗಿ ಗೊತ್ತಾದುದೇನೋ ಆ ದಿನವೇ. ಆದರೂ ಆ ಸಂಸಾರದ ವಿಷಯ
ಅಲ್ಪ ಸ್ವಲ್ಪ ಅತ ಹಿಂದೆಯೇ ತಿಳಿದಿದ್ದ.
ಸುನಂದೆಗೆ ಹಾಗಲ್ಲ. ಮೊದಲ ಸಾರೆ ಕೇಳಿದ ಆ ಕಥೆಯಿಂದ ಆಕೆಗೆ ತುಂಬಾ
ಸಂಕಟವೆನಿಸಿತು. ಬೇರೊಂದು ಜೀವಕ್ಕಾಗಿ ತೋರುವ ಯಾತನೆ ಪ್ರೀತಿಯಾಗಿ
 ಮಾರ್ಪಟ್ಟಿತು.
ಇಂದಿರಾ ಹೊರ ಬಂದ ಬಳಿಕ, "ಇನ್ನು ಹೊರಡೋಣ್ವೆ?" ಎಂದು ಜಯ
ದೇವ ಸುನಂದೆಯನ್ನು ಕೇಳಿದ
ಇಂದಿರೆಯ ತಾಯಿ ಒಪ್ಪಲಿಲ್ಲ.
“ಬಿಸಿಲು ಕಡಮೆಯಾಗ್ಲಿ. ಕಾಫಿ ಕುಡ್ಕೊಂಡು ಹೋಗುವಿರಂತೆ," ಎಂದಳು.
ಅವಕುಂಠನವತಿಯಾಗಿ ವಿರಾಜಿಸಿದ್ದಳು ವೀಣಾ-ಹಜಾರದೊಂದು ಮೂಲೆಯಲ್ಲಿ.
ಬಂದಾಗಲೆ ಅದನ್ನು ಕಂಡಿದ್ದ ಸುನಂದಾ ಹೇಳಿದಳು:
“ಇಂದಿರಾ, ಒಂದೆರಡು ಕೀರ್ತನೆ ಹೇಳ್ರಿ."
"ನನಗ್ಬರೋಲ್ರಿ."
ಇಂದಿರೆಯ ತಾಯಿ ಅಂದರು: