ಈ ಪುಟವನ್ನು ಪ್ರಕಟಿಸಲಾಗಿದೆ

೨೨

ನಾಸ್ತಿಕ ಕೊಟ್ಟ ದೇವರು

ಮಾಲ್ ಗಾಡಿಯೊ೦ದೇ ಅಲ್ಲ. ಮೇಲ್ ಎಕ್ಸ್ ಪ್ರೆಸ್ ಗಾಡಿಗಳೂ ಹಿಂದೆ ಅಲ್ಲಿ ನಿಲ್ಲುತ್ತಿರಲಿಲ್ಲ. ఒಮೆಯ‍‍‍‍ಷ್ಟೇ ವಿಶೇ‍‍‍‍‍ಷ ಸಂದರ್ಶಕರು బంದರೆಂದು ಮೇಲ್ ಗಾಡಿ ನಿಂತುದು, ಆಗಿನ ತಳಿರು ತೋರಣಗಳ ಸಂಭ್ರಮ, ಇಮಾಮ್ ಸಾಬಿಗೆ ನೆನಪಿತ್ತು. ಬಂದಿಳಿದಿದು ಒಬ್ಬ ಆ೦ಗ್ಲ ಉಚ್ಚಾಧಿಕಾರಿ. ಅರಸರಲ್ಲ, ವೈಸರಾಯರೋ ರೆಸಿಡೆಂಟರೋ - ಯಾರೋ ಒಬ್ಬರು. ಇಮಾಮ್ ಆಗಿನ್ನೂ ಮೂವತ್ತು ವರ್ಷಗಳ ಜವ್ವನಿಗ.
ಆಗ ಅವನ ವಯಸ್ಸು ಖಚಿತವಾಗಿ ಅಷ್ಟೇ ಎಂದು ಹೇಳಲು ಯಾವ ಆಧಾರವಿತ್ತು ? ಬೀಬಿ ಮನೆಗೆ ಬಂದ ವರ್ಷ ಅದು. ಎರಡನೆಯ ಬೀಬಿ. ಚೊಚ್ಚಲ ಹೆರಿಗೆಗೆಂದು ತವರುಮನೆಗೆ ಹೋದ ಮೊದಲಿನಾಕೆ ಮರಳಿ ಬಂದಿರಲಿಲ್ಲ. ಪ್ರವಸದ ವೇಳೆ, ಬಸಿರಲ್ಲಿದ್ದ ಜೀವದೊಡನೆ ಆಕೆಯೂ ಅಪ ಮೃತ್ಯುವಿಗೆ ಗುರಿಯಾಗಿದ್ದಳು. ಅದು, ಇಮಾಮ್ ಸಾಬಿಯ ಚಿತ್ತಫಲ ಕದ ಮೇಲೆ ಅಳಿಸಲಾಗದ ಚಿತ್ತನ್ನು ಉಳಿಸಿಹೋದ ಘಟನೆ. ಆ ಯಾತನೆಯನ್ನು ಮೂಲೆಗೊತ್ತಿ ಇನ್ನೊಬ್ಬಳ ಕೈಹಿಡಿಯಲು, ಆರೆಂಟು ವರ್ಷಗಳ ಅವಧಿಯೇ ಅವನಿಗೆ ಬೇಕಾಯಿತು. ಆಗ ಆತನ ಸೋದರಮಾವ అందిದ್ದ :
"ಮೂವತ್ತು ವರ್ಷವಾಯ್ತು ನಿನಗೆ. ಇನ್ನೂ ತಡಮಾಡ್ಬೇಡ".
ಅನಂತರವೂ ದಿನ ತಿಂಗಳು ವರ್ಷಗಳ ಲೆಕ್ಕವಿಡುವ ಗೊಡವೆಗೆ ಇಮಾಮ್ ಸಾಬಿ ಹೋದವನಲ್ಲ. ಗಳಿಸಿದ ದುಡ್ಡನ್ನಷ್ಟು ಹೆಂಡತಿಗೆ ದಿನವೂ ಒಪ್ಪಿಸಿದರಾಯ್ತು ಅವನ ಕೆಲಸ. ಬೀಬಿ ಒಳ್ಳೆಯ ಹೆಂಡತಿ, ಒಳ್ಳೆಯ ತಾಯಿ. ಅವಳು ಹೆತ್ತುದು ಒಟ್ಟು ಐದು ಮಕ್ಕಳನ್ನು. [ಒಂದರ ಅನಂತರ ಒಂದಾಗಿ. ಐದೂ ಗಂಡೇ.] ತಮ್ಮ ವಿವಾಹವಾಗಿ ಎಷ್ಟು ಕಾಲವಾಯಿತು? ಮಕ್ಕಳ ವಯಸ್ಸೆಷ್ಟು– ಎಂಬುದನ್ನೆಲ್ಲ ಕೂಡಿಸಿ ಕಳೆದು ಹೇಳುತ್ತಲಿದ್ದವಳು ఇಮಾಮ್ ಸಾಬಿಯ ಹೆ೦ಡತಿಯೇ.
ಇದೇ ಮೊನ್ನೆ ಆಕೆ ಅಂದಿದ್ದಳು :
"ಈ ಬಕ್ರೀದ್ ಗೆ ನಮ್ಮ ಲಗ್ನ ಆಗಿ ಮೂವತ್ತು ವರ್ಸ ಆಯ್ತೂಂದ್ರ"
ಅವನಿಗೆ ಅಚ್ಚರಿಯಾಗಿತ್ತು.
"ಹಾಂ? ಹೌದಾ?... ಹಾಗಾದರೆ ನನಗೆಷ್ಟು ವರ್ಷ ಈಗ?"
"ನನ್ನ ಕೇಳ್ತೀರಲ್ಲ? ಅರವತ್ತು ಆಗ್ಲಿಲ್ವೇನು?"
"ಹೌದಾ ? ಸರಿ! ಮುದುಕ ಆದೆ ಅನ್ನು!"