ಈ ಪುಟವನ್ನು ಪ್ರಕಟಿಸಲಾಗಿದೆ

ತಪ್ಪು ಎಣಿಕೆ

೫೫

ಜೀಪಿನ ಸದ್ದು ಕೇಳಿ ನಾಗಪ್ಪ ಕಂಗಾಲಾದ. ಮಂತ್ರವಾದಿಯ ಕೆಲಸ ಮುಗಿಯುತ್ತ ಬ೦ದಿತ್ತು. ಇವತ್ತೇ ಬಂದುಬಿಡಬೇಕೆ ಸಾಹೇಬರು ? ಇದೆಂಥ ಕ್ರೂರ ಆಟ ದೈವದ್ದು !
"ನಿನ್ನ ಕಥೆ ಮುಗೀತು ನಾಗಪ್ಪ,” ಎಂದಿತು ಅವನ ಒಳಮನಸ್ಸು.
" ಛೆ!” ಎಂದ ಆತ, ಕೆಟ್ಟ ಯೋಚನೆಗಳನ್ನೆಲ್ಲ ಝಾಡಿಸಿ.
ಭಯಭಕ್ತಿಗಳನ್ನು ಪ್ರದರ್ಶಿಸುತ್ತ ಸಾಹೇಬರನ್ನು ಅವನು ಇದಿರ್ಗೊಂಡ.
ಪತ್ನಿ ಕಾಣಿಸಲಿಲ್ಲವೆಂದು ಉಮಾಪತಿ ಕೇಳಿದರು :
"ಎಲ್ಲಿ ಅಮ್ಮಾವ್ರು ?"
"ಅವರಿಗೆ–ಅಮ್ಮಾವ್ರಿಗೆ ...”
“ಏನೋ ಅದು ?”
"ರೂಮ್ನಾಗವ್ರೆ... ಇಂಗಾಯ್ತು ಬುದ್ದಿ....ಅದು—"
ನಾಗಪ್ಪನ ಎದೆಗುಂಡಿಗೆ ತೀವ್ರವಾಗಿ ಹೊಡೆದುಕೊಂಡಿತು. ಉಮಾಪತಿಯೂ ಗಾಬರಿಯಾದರು. ಜವಾನನ ವಿವರಣೆಗೆ ಕಾಯದೆ ಒಳಕ್ಕೆ ಧಾವಿಸಿದರು. ಗಂಡ ಬಂದುದು ಅಮ್ಮಾವರಿಗೆ ಮಲ್ಲಿಯಿಂದ ತಿಳಿದಿತ್ತು.
ಒಳಬಂದ ಪ್ರಾಣಪ್ರಿಯನನ್ನು ಇದಿರ್ಗೊಳ್ಳಲೆಂದು ಏಳುವುದಕ್ಕೂ ವೀಣಾ ಅಸಮರ್ಥರಾದರು. ಗಂಟಲೊಣಗಿ ಮಾತು ಹೊರಬರಲಿಲ್ಲ. ಕಂಬನಿ ಮಿಡಿಯುವ ಶಕ್ತಿಯೂ ಅವರಿಗಿರಲಿಲ್ಲ. ನಿದ್ದೆ ಕೆಟ್ಟಿದ್ದ ಮೂರು ಹಗಲು ಮೂರು ಇರುಳುಗಳ ಬಳಿಕ ಅವರು ಪ್ರೇತವಾಗಿದ್ದರು.
ದೀನ ನೋಟದಿಂದ ಗಂಡನನ್ನು ಅವರು ದಿಟ್ಟಿಸಿದರು.
 ಉಮಾಪತಿ, ಕೊಠಡಿಯ ಬಾಗಿಲನ್ನು ಮುಚ್ಚಿದರು.
ಅವರ ತೋಳತೆಕ್ಕೆಯಲ್ಲಿ ವೀಣಾ ನಿಧಾನವಾಗಿ ಚೇತರಿಸಿಕೊಂಡರು. ಬಿಕುತ್ತ ಬಿಕ್ಕುತ್ತ ನಡೆದುದೆಲ್ಲವನ್ನೂ ಗಂಡನಿಗೆ ಅವರು ತಿಳಿಸಿದರು.
"ನಾನು ಸತ್ತೇಹೋಗ್ತಿದ್ದೆ . . . ಅ೦ತೂ ಬಂದಿರಿ . . . ನಾಗಪ್ಪ ಇಲ್ದಿದ್ರೆ ನನ್ನ ಅವಸಾನ ಆಗ್ತಿತ್ತು... ಅಯ್ಯೋ..."
ದಿಙ್ಮೂಢರಾಗಿ ಕುಳಿತ ಉಮಾಪತಿ ಅನೇಕ ಸಾರಿ ನಿಟ್ಟುಸಿರು ಬಿಟ್ಟು ಬಳಿಕ, ಮೆಲ್ಲನೆದ್ದು, ಬಾಗಿಲಿನ ಅಗಣಿಯನ್ನು ತೆಗೆದು, ಬಂಗಲೆಯ ಹಿಂಭಾಗಕ್ಕೆ ನಡೆದರು.