ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ‌ ೧೭೧

       ಗೋವಿಂದ ಅವರ ಪಕ್ಕದಲ್ಲಿ ನಿಂತ. ಮೋಹನರಾಯರ ಮಗನೂ ಪಡಸಾಲೆಗೆ ಬಂದ.
           ಮಣಿಗಂಟುಗಳನ್ನು ಹಿಡಿದುಕೊಂಡ ಕೈಗಳಿಗೆ ಭಾಗೀರಥಿ ಕಚ್ಚಿದಳು. ಗೋಪಾಲ 
       ಹೆಂಡತಿಯ ಚಂಡಿಕೆಯನ್ನು ಹಿಡಿದ. ಎದೆಯ ಮೇಲಿನ ಸೆರಗಂತೂ ಎಂದೋ ಬಿದ್ದು ಹೋಗಿತ್ತು.
           ಅಂತೂ ಶ್ರಿಪಾದನನ್ನು ದೊಡ್ಡಮ್ಮ ಬಿಡಿಸಿಕೊಂಡರು. 
           ಗೋಪಾಲನೂ  ಶ್ರಿನಿವಾಸಯ್ಯನವರೂ  ಭಾಗೀರಥಿಯನ್ನು   ದರದರನೆ ಎಳೆದು 
       ಕೊಠಡಿಯೊಳಕ್ಕೆ ಸೇರಿಸಿದರು. 
           "ಹೊರಗಿನಿಂದ ಕೊಂಡಿ ಹಾಕ್ಕೊಳ್ಲೇ ಅಮ್ಮ?” ಎಂದು ಶ್ರಿನಿವಾಸಯ್ಯ ತಾಯಿಯನ್ನು 
       ಕೇಳಿದರು. 
           ಶ್ರಿಪಾದನನ್ನು ಎತ್ತಿಕೊಂಡಿದ್ದ ದೊಡ್ಡಮ್ಮ, ತಮ್ಮ ಒಣಗಿದ್ದ ಕಣ್ಡುಗಳನ್ನೊಮ್ಮೆ 
       ಭದ್ರವಾಗಿ ಮುಚ್ಚಿ, ಹಿಂಡಿ, ಕಣ್ಣೀರಿನಎರಡು ಬಿಂದುಗಳನ್ನು ಕೆಳಕ್ಕೆ ಕೊಡವಿ, “ಬೇಡ 
       ಒಳಗಿಂದ ಅವಳು ಚಿಲಕ ಹಾಕ್ಕೊಂಡ್ಬಿಟ್ರೆ ಆ ಮೇಲೆ ತೆಗೆಸೋದು ಕಷ್ಟ. ಬಾಗಿಲ್ಹತ್ರ ಸ್ವಲ್ಪ 
       ಹೊತ್ತು ಕೂತಿರಿ. ನಾನೀಗ ಬಂದ್ಬಿಡ್ತೀನಿ," ಎಂದರು.
           ಗೋಪಾಲ ಮಗುವನ್ನೆತ್ತಿಕೊಂಡ. 
           ದೊಡ್ಡಮ್ಮ ಎದ್ದುನಿಂತರು.  ಪಡಸಾಲೆಯ ದೀಪದ ಪ್ರಭೆಯಲ್ಲಿ, ಅವರ ನೆರಳು 
       ಗೋಡೆಯ ಮೇಲೆ ನೀಳವಾಗಿ ಕಂಡಿತು.
           ಶಾಂತವಾದ ದೃಢವಾದ ಸ್ವರದಲ್ಲಿ ಅವರೆಂದರು: 
           "ಲಾಟೀನು ಬೇಕಲ್ಲ..." 
           ಬೀರ ತಂದಿಟ್ಟುದು ಜಗಲಿಯಲ್ಲಿತ್ತು. ಗೋವಿಂದ ಅದನ್ನು ತಂದ. 
           ಅತಿಥಿಗಳ ಹೊರತಾಗಿ ಉಳಿದವರೆಲ್ಲ ಬಲ್ಲರು ದೊಡ್ಡಮ್ಮ ಹೊರಟುದು ಎಲ್ಲಿಗೆ 
       ಎಂಬುದನ್ನು
           "ನಾನೂ ಬರಲೆ ದೊಡ್ಡಮ್ಮ ?" ಗೋವಿಂದ ಕೇಳಿದ. 
           "ಬೇಡ,"ಎಂದು ನುಡಿದು ದೊಡ್ಡಮ್ಮ ಲಾಟೀನಿನೊಡನೆ ಅಂಗಳಕ್ಕಿಳಿದು, ಮನೆಯನ್ನು 
       ಬಳಸಿ, ಹಿತ್ತಿಲಲ್ಲಿ ದೂರ ದೂರ ಹೋದರು.
           "ದೊಡ್ಡಮ್ಮ ಔಷಧಿ ತರ್ತಾರೆ," ಎಂದ ಗೋವಿಂದ, ಅತಿಥಿಗಳ ಕಡೆ ನೋಡಿ. 
           "ಪಾಪ ! ಎಂಥ ಸದ್ಗುಣಿ ! ನೋಡಿ, ಇದ್ದಕ್ಕಿದ್ದ ಹಾಗೆ-" ಎಂದು ಆರಂಭಿಸಿದರು 
           ವಿಷ್ಣುಮೂರ್ತಿ. 
           "ಹಿಸ್ಟೀರಿಯಾ, ನಗರದಲ್ಲಿ ಇದು ಸರ್ವೆಸಾಮಾನ್ಯ," ಎಂದರು ಮೋಹನರಾಯರು. 
           [ವಾಸ್ತವವಾಗಿ, ಜಗಲಿಯ ಮೂಲೆಯಲ್ಲಿ ಇಬ್ಬರೇ ನಿಂತುಕೊಂಡು ಅವರು ಆಗಲೆ 
       ಮಾತನಾಡಿದ್ದು ಆ ವಿಷಯವನ್ನೇ. ವಿಘ್ನೇಶ್ವರ ಭವನದಿಂದ ಅವರು ಮರಳಿ, ಗೋಪಾಲ 
       ಮನೆಯಿಂದ ಹೊರ ಹೋದ ಸ್ವಲ್ಪ ಹೊತ್ತಿನಲ್ಲೇ ಭಾಗೀರಥಿ ತನ್ನ ಕೊಠಡಿಯಿಂದ ಗಟ್ಟಿಯಾಗಿ 
       ಕೂಗಾಡತೊಡಗಿದ್ದಳು:
           "ಟಾಂಗಾ ಸವಾರಿ ಮಾಡಿ ಬಂದ್ರೋ ? ನಿಮ್ಮದೇನೊ ಟಾಂಗಾ? ಹೋಟ್ಲಿನ 
       ಯಜಮಾನಿಯೊ ನೀನು ? ಓ ಹೊಹೊ– ದೊರೆಸಾನೀನೊ ?"
           ಪಡಸಾಲೆಯಲ್ಲಿ ರತ್ನಗಂಬಳಿಯ ಮೇಲೆ ಕುಳಿತಿದ್ದವರು ಒಂದು ಕ್ಷಣ ಸ್ತಬ್ಧವಾದರು