ಈ ಪುಟವನ್ನು ಪ್ರಕಟಿಸಲಾಗಿದೆ



೯೨

ಪರಂತಪವಿಜಯ




ಹಿಂದಕ್ಕೆ ಬರಲಿಲ್ಲ. ಆತನು ಬರಲಿಲ್ಲವೆಂದು ನಿಟ್ಟುಸಿರು ಬಿಡುತ ಶೋಕಪರವಶಳಾಗಿರುವ ಕಾಮಮೋಹಿನಿಯನ್ನು, ಸತ್ಯಶರ್ಮನನ್ನು ನೋಡಿ “ಇಲ್ಲಿಗೂ ರತ್ನಾಕರಕ್ಕೂ ಬಹಳ ದೂರವಿರುವುದು. ನಿನ್ನ ಗಂಡನು ಇದನ್ನು ತಿಳಿದುಕೊಳ್ಳದೆ, ಜಾಗ್ರತೆಯಾಗಿ ಬರುವುದಾಗಿ ಹೇಳಿಹೋದನು. ಜಾಗ್ರತೆಯಾಗಿ ಬರುವನು. ದುಃಖವನ್ನು ಸಮಾಧಾನವಾಡಿಕೊ” ಎಂದು ಹೇಳಿ, ಸಮಾಧಾನಪಡಿಸುವುದಕ್ಕೆ ಪ್ರಯತ್ನ ಮಾಡಿದನು.
ಕಾಮಮೋಹಿನಿ -ವಿಚಾರ ಪಡದೆ ಇರುವುದು ಅಸಾಧ್ಯ. ನನ್ನ ಗಂಡನಿಗೆ ಏನೋ ಒಂದು ವಿಪತ್ತು ಸಂಭವಿಸಿರಬಹುದು. ಹಾಗಿಲ್ಲದ ಪಕ್ಷದಲ್ಲಿ ಇಷ್ಟು ಸಾವಕಾಶವಾಗುತ್ತಿರಲಿಲ್ಲ. ನಾನು ಬಹಳ ನಿರ್ಭಾಗ್ಯಳು. ಏನೋ ಪಾಪಶೇಷದ ಫಲವನ್ನು ಅನುಭವಿಸತಕ್ಕ ಕಾಲವು ನನಗೆ ಬಂದಿರುವಂತೆ ಕಾಣುತ್ತದೆ.
ಸತ್ಯಶರ್ಮ - ಎಲಾ ಪ್ರಿಯಳಾದ ಮಗುವೆ! ಈ ಶೋಕಾತಿಶಯದಿಂದ ಪರಿತಪಿಸಬೇಡ ಸ್ವಲ್ಪ ನಿಧಾನಿಸಿಕೋ, ಆತನು ಬಾರದೆ ಹೋದ ಪಕ್ಷದಲ್ಲಿ, ನಾನೇ ಹೋಗಿ ಅವನನ್ನು ಕರೆದುಕೊಂಡು ಬರುತ್ತೇನೆ.
ಕಾಮಮೋಹಿನಿ- ಎಲೈ ತಂದೆಯೇ! ನನ್ನ ಗಂಡನು ಒಂದು ವೇಳೆ ಹಿಂದಿರುಗಿ ಬಾರದೆ ಇದ್ದರೆ, ನನ್ನನ್ನು ನಿನ್ನ ಮಗಳೆಂದು ತಿಳಿದುಕೊಂಡು ನೀನೇ ಕಾಪಾಡಬೇಕು. ನೀನೇ ನನ್ನ ತಂದೆ, ಈಕೆಯೇ ನನ್ನ ತಾಯಿ. ನನ್ನ ಗಂಡನು ಕೊಟ್ಟಿರತಕ್ಕ ಈ ದ್ರವ್ಯವನ್ನು ಇಟ್ಟುಕೊಂಡು, ನನ್ನನ್ನು ಮಾನದಿಂದ ಕಾಪಾಡಬೇಕು.
ಸತ್ಯಶರ್ಮ-ಎಲೌ ಪತಿವ್ರತಾ ಶಿರೋಮಣಿಯೇ! ಇಂಥ ಕೆಟ್ಟ ಯೋಚನೆಗಳನ್ನು ಏತಕ್ಕೆ ಮಾಡುತ್ತೀಯೆ ? ನಿನ್ನ ಗಂಡನು ಶೀಘ್ರದಲ್ಲಿಯೇ ಬರುವನು. ಆತನು ಹಾಗೆ ಬಾರದಿದ್ದರೆ, ನಾನೆ ಹೋಗಿ ಅವನನ್ನು ಕರೆದು ಕೊಂಡು ಬರುವ ಪ್ರಯತ್ನವನ್ನು ಮಾಡುವೆನು. ಕ್ಲೇಶಪಡಬೇಡ.
  ಈ ವುಪದೇಶದಿಂದ, ಕಾಮಮೋಹಿನಿಯು ನಾಲ್ಕು ಘಂಟೆಯ ವರೆಗೂ ಸಮಾಧಾನವನ್ನು ವಹಿಸಿದಳು. ಪರಂತಪನು ಬರಲಿಲ್ಲ. ಅವಳ ಶೋಕವು ಇಮ್ಮಡಿಯಾಯಿತು. ಉಪಶಮನದ ಮಾತುಗಳು ಪ್ರಯೋಜನಕರವಾಗಲಿಲ್ಲ. ಹೊಸದಾಗಿ ಪಂಜರದಲ್ಲಿ ಕೂಡಲ್ಪಟ್ಟ ಪಕ್ಷಿಯಂತಿದ್ದಳು.