ಈ ಪುಟವನ್ನು ಪ್ರಕಟಿಸಲಾಗಿದೆ
|| ಶ್ರೀಃ ||

ಪರಂತಪ ವಿಜಯ

ಅಧ್ಯಾಯ . ೧.

ಈ ಭರತಖಂಡದ ಈಶಾನ್ಯ ಭಾಗದಲ್ಲಿ ಗಂಧರ್ವಪುರಿಯೆಂಬ ಒಂದು ಪಟ್ಟಣವಿರುವುದು. ಇದು, ದ್ಯೂತ ಪಾನ ವ್ಯಭಿಚಾರ ಮೊದಲಾದ ದುರ್ವೃತ್ತಿಗಳಿಗೆ ಮುಖ್ಯಸ್ಥಾನವಾಗಿದ್ದಿತು. ಇದರಲ್ಲಿ ಚೌರ್ಯ ಮೊದಲಾದ ದುರ್ವೃತ್ತಿಗಳಿಂದ ದ್ರವ್ಯವನ್ನಾರ್ಜಿಸಿ, ಅದನ್ನು ದ್ಯೂತ ವ್ಯಭಿಚಾರಗಳಲ್ಲಿ ಕಳೆಯತಕ್ಕವರು ಅನೇಕರಿದ್ದರು. ಇಲ್ಲಿನ ದ್ಯೂತಶಾಲೆಗಳು, ವಿಶಾಲವಾದ ಅರಮನೆಗಳಂತೆ ಕಾಣಿಸುತಿದ್ದುವು. ಈ ದ್ಯೂತಶಾಲೆಗಳಲ್ಲಿ, ಪ್ರತಿಕ್ಷಣದಲ್ಲಿಯೂ ಕೋಟ್ಯಂತರ ದ್ರವ್ಯಗಳು ಒಬ್ಬರಿಂದೊಬ್ಬರಿಗೆ ಸೇರುತಿದ್ದುವು. ಭಾಗ್ಯಲಕ್ಷ್ಮಿಯು ಅತಿ ಚಂಚಲೆ ಯೆಂಬುದಕ್ಕೆ ದೃಷ್ಟಾಂತಗಳು, ಈ ಪಟ್ಟಣದಲ್ಲಿ ವಿಶೇಷವಾಗಿ ಸಿಕ್ಕುತಿದ್ದುವು. ಈ ಪಟ್ಟಣದ ಮಧ್ಯ ಭಾಗದಲ್ಲಿ ಅತಿ ವಿಸ್ತಾರವಾಗಿಯೂ ಅತ್ಯುನ್ನತವಾದ ಉಪ್ಪರಿಗೆಗಳಿಂದ ಶೋಭಿತವಾಗಿಯೂ ಇದ್ದ ಒಂದಾ ನೊಂದು ಮನೆಯು, ಇಲ್ಲಿನ ದ್ಯೂತಶಾಲೆಗಳಲ್ಲೆಲ್ಲ ಪ್ರಧಾನವೆನ್ನಿಸಿಕೊಂಡಿದ್ದಿತು. ಈ ಗೃಹಕ್ಕೆ, ದುರ್ಲಲಿತನೆಂಬ ಒಬ್ಬ ಯಜಮಾನನಿದ್ದನು. ಇವನು, ತನ್ನ ಮನೆಯಲ್ಲಿ ದ್ಯೂತವಾಡಿ ಗೆದ್ದವರು ಗೆದ್ದ ಹಣದಲ್ಲಿ ತನಗೆ ಇಪ್ಪತ್ತರಲ್ಲೊಂದು ಪಾಲನ್ನು ಕೊಡಬೇಕೆಂದು ನಿರ್ಣಯಿಸಿದ್ದನು. ಈ ರೀತಿ