ಈ ಪುಟವನ್ನು ಪ್ರಕಟಿಸಲಾಗಿದೆ



೧೧೪
ಪರಂತಪ ವಿಜಯ

ಯಿಸಿದಕೂಡಲೆ, ನನ್ನ ತಂದೆಯ ಮನಃಕ್ಲೇಶಕ್ಕೆ ಅವಧಿಯು ಉಂಟಾಗಿಯೇ ಆಗುವುದು.
ಶಂಬರ -ಈ ನಿಷ್ಟುರೋಕ್ತಿಗಳನ್ನು ಬಿಡು. ಈಗ ನೀನು ನನ್ನ ಹಸ್ತಗತಳಾಗಿರುವೆ. ನಿನ್ನ ತಂದೆಯೂ ಹಾಗೆಯೇ ಇರುವನು. ಪರಂತಪನು ಯಮಪುರಿಗೆ ಪ್ರಯಾಣ ಮಾಡಿದನು. ಈ ರತ್ನಾಕರ ಮೊದಲಾದುವುಗಳೆಲ್ಲ ನನ್ನ ಸ್ವಾಧೀನವಾಗಿರುವುವು. ಕುಬೇರನ ಸಂಪತ್ತಿಗೆ ಸಮಾನವಾದ ಸಂಪತ್ತುಗಳು ನನ್ನ ಅಧೀನವಾಗಿರುವುವು. ಕಾಲಾಧೀನನಾದ ಪರಂತಪನ ಯೋಚನೆಯನ್ನು ಬಿಡು. ನನ್ನ ಇಷ್ಟಾರ್ಥಪೂರ್ತಿಯನ್ನು ಮಾಡಿದರೆ, ನಿನ್ನ ತಂದೆಯನ್ನು ಕಾರಾಗೃಹದಿಂದ ಬಿಡುಗಡೆ ಮಾಡುವುದಲ್ಲದೆ, ಈ ನನ್ನ ಸಂಪತ್ತಿಗೆಲ್ಲ ನಿನ್ನನ್ನು ಭಾಗಿನಿಯನ್ನಾಗಿ ಮಾಡುವೆನು.
ಕಾಮಮೋಹಿನಿ- ಎಲಾ ಕೊಲೆಪಾತಕನೇ! ಈ ದುಷ್ಟವಚನಗಳನ್ನು ಬಿಡು. ಕಾಮಮೋಹಿನಿಯು ಸ್ವೈರಿಣಿಯಲ್ಲ. ಅವಳು ಮಹಾ ಪತಿವ್ರತೆಯೆಂದು ತಿಳಿದುಕೋ. ಪಾತಿವ್ರತ್ಯ ಭಂಗವನ್ನು ಮಾಡಬೇಕೆಂದು ಪ್ರಯ ತ್ನಿಸಿದ ರಾವಣಾದಿಗಳ ಅವಸ್ಥೆಯೇನಾಯಿತು? ಪರ್ಯಾಲೋಚಿಸು, ರಾವಣನ ಸಂಪತ್ತಿಗಿಂತಲೂ, ಶಕ್ತಿಗಿಂತಲೂ, ನಿನ್ನ ಸಂಪತ್ತೂ ಶಕ್ತಿಯೂ ಹೆಚ್ಚಾಗಿರುವುವೆ? ಈ ದುಷ್ಟ ಸಂಕಲ್ಪವನ್ನು ನೀನು ಇಟ್ಟುಕೊಂಡರೆ, ಅವನಿಗೆ ಆದ ಗತಿಯು ನಿನಗೆ ಎಂದಿಗೂ ತಪ್ಪುವುದಿಲ್ಲ. ನನಗೆ ನಿನ್ನ ಸಂಪತ್ತುಗಳಲ್ಲಿ ಭಾಗವೂ ಬೇಡ; ನನ್ನ ತಂದೆಗೆ ಸ್ವಾತಂತ್ರವನ್ನು ನೀನು ಕೊಡುತ್ತಿ ಯೆಂದು ನಾನು ನಿನ್ನ ಇಷ್ಟಾರ್ಥವನ್ನು ಸಲ್ಲಿಸತಕ್ಕವಳೂ ಅಲ್ಲ.
ಶಂಬರ-ಎಲೇ ಹುಚ್ಚೀ ! ಶ್ರೀರಾಮನು ಬದುಕಿದ್ದುದರಿಂದ, ಅವನು ರಾವಣನನ್ನು ವಧಿಸಿ ಸೀತೆಯ ಪಾತಿವ್ರತ್ಯವನ್ನು ಉಳಿಸಿದನು. ನಿನ್ನ ಪಾತಿವ್ರತ್ಯವನ್ನು ಉಳಿಸುವುದಕ್ಕೆ ಪರಂತಪನು ಜೀವಂತನಾಗಿದ್ದಾನೆಯೇ? ನಿನ್ನ ತಂದೆಯು ನನ್ನ ಹಸ್ತಗತನಾಗಿರುವುದಿಲ್ಲವೇ? ಬಲಾತ್ಕಾರವಾಗಿ ನಾನು ಈಗಲೇ ನಿನ್ನ ಪಾತಿವ್ರತ್ಯಕ್ಕೆ ಭಂಗವನ್ನು ತಂದರೆ, ನನಗೆ ಎದುರು ಯಾರು? ಮೌರ್ಖ್ಯದಿಂದ ಪೂರ್ವಾಪರಗಳನ್ನು ಯೋಚಿಸದೆ ನಡೆದುಕೊಳ್ಳಬೇಡ.