ಕಾವಲುಗಾರ- ನೀನು ಹೇಳುವುದು ನಿಜ. ನಾಡಿದ್ದು ಬೆಳಗ್ಗೆ ಎಂಟು ಘಂಟೆಯೊಳಗಾಗಿ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಮಗಳನ್ನು ಒಪ್ಪಿಸದಿದ್ದ ಪಕ್ಷದಲ್ಲಿ, ಪ್ರಥಮತಃ ತಂದೆಯ ಶಿರಶ್ಛೇದನವನ್ನು ಮಾಡಿ ಅನಂತರ ಕಾಮಮೋಹಿನಿಯನ್ನು ಕೆಡಿಸಿ, ತರುವಾಯ ಅವಳ ಶಿರಶ್ಛೇದನವನ್ನೂ ಮಾಡಬೇಕೆಂದು, ಈ ದುರಾತ್ಮನು ಸಂಕಲ್ಪ ಮಾಡಿದ್ದಾನೆ. ಶೀಘ್ರದಲ್ಲಿಯೇ ನೀನು ಇವನನ್ನು ವಧಿಸದಿದ್ದರೆ, ಕಾಮಮೋಹಿನಿಗೂ ಅವಳ ತಂದೆಗೂ ಮಾನಹಾನಿ ಪ್ರಾಣಹಾನಿಗಳು ತಪ್ಪುವುದಿಲ್ಲ.
ಪರಂತಪ - ಈ ಗುಹೆಯಿಂದ ಆಚೆಗೆ ಹೋಗುವುದಕ್ಕೆ ಮಾರ್ಗವನ್ನು ತೋರಿಸು. ಈ ಚಂಡಾಲನಾದ ಶಂಬರನ ಶರೀರವನ್ನು, ದುಷ್ಟಮೃಗಗಳಿಗೂ ಪಕ್ಷಿಗಳಿಗೂ ಆಹಾರವನ್ನಾಗಿ ಮಾಡುವೆನು.
ಕಾವಲುಗಾರ- ಆತುರಪಡಬೇಡ. ಈ ಕಾಗದಗಳನ್ನು ತೆಗೆದುಕೊ. ಇದೇ ಮಾಧವನ ಉಯಿಲು. ಇದರ ಪ್ರಕಾರ, ಈ ರತ್ನಾಕರಕ್ಕೆ ನೀನು ಹಕ್ಕುದಾರನು, ಇದನ್ನು ಅರ್ಥಪರನು ರಿಜಿಸ್ಟ್ರೇಷನ್ ಆಫೀಸಿನಿಂದ ಅಪಹರಿಸಿಕೊಂಡು ಬಂದು ಶಂಬರನಿಗೆ ಕೊಟ್ಟು, ಪ್ರತಿಫಲವನ್ನು ನಿರೀಕ್ಷಿಸುತ್ತಿರುವನು. ಈ ಯೆರಡನೆಯ ಕಾಗದವು, ಸುಮಿತ್ರನ ಉಯಿಲು. ಇದರಲ್ಲಿ ಸುಮಿತ್ರನು ಕಲಾವತಿಯನ್ನು ಮದುವೆ ಮಾಡಿಕೊಂಡವರಿಗೆ ತನ್ನ ಆಸ್ತಿಯನ್ನೆಲ್ಲ ಕೊಡುವುದಾಗಿ ಬರೆದಿರುವನು. ಇದನ್ನೂ ಕಲಾವತಿಯಿಂದ ಈ ದುರಾತ್ಮನು ಅಪಹರಿಸಿದನು. ಇದನ್ನು ಅಪಹರಿಸಿ ಇದಕ್ಕೆ ಹಕ್ಕುದಾರ೪ಾದ ಕಲಾವತಿಗೆ ಕೊಡಬೇಕೆಂದು ನಾನು ಪ್ರಯತ್ನ ಮಾಡಿದೆನು. ಇದನ್ನು ನೋಡಿ, ಶಂಬರನು ನನ್ನನ್ನು ಗುಂಡಿನಿಂದ ಹೊಡೆದನು. ಇನ್ನು ವಿಶೇಷ ಮಾತನಾಡುವುದಕ್ಕೆ ನನಗೆ ಶಕ್ತಿಯಿಲ್ಲ. ಈ ದುರ್ಗವನ್ನು ಬಿಟ್ಟು ಆಚೆಗೆ ಹೋಗುವುದಕ್ಕೆ ನಿನಗೆ ದಾರಿಯನ್ನು ತೋರಿಸಿ, ಅನಂತರ ಹಿಂದಿರುಗಿ ಬಂದು ನಾನು ಈ ದೇಹವನ್ನು ಬಿಡುವೆನು. ಈ ಶಂಬರನ ಕಡೆಯ ಐದು ಜನ ಕಾವಲುಗಾರರು ಈ ರತ್ನಾಕರದಲ್ಲಿರುವರು. ಅವರು ಬಹಳ ದುಷ್ಟರು. ಪಾಪಕೃತ್ಯಗಳನ್ನು ಮಾಡುವುದರಲ್ಲಿ ಅವರು ಶಂಬರನಿಗೆ ಸಮಾನರಾದವರು. ಶತ್ರುನಿಗ್ರಹವನ್ನು ಮಾಡುವುದರಲ್ಲಿ ನೀನು ಬಹಳ ಜಾಗರೂಕನಾಗಿರಬೇಕು. ಹಾಗಿಲ್ಲದ ಪಕ್ಷದಲ್ಲಿ ನಿನ್ನ ಪ್ರಾಣಕ್ಕೆ ಅಪಾಯ ಬರುವುದು.
ಪುಟ:ಪರಂತಪ ವಿಜಯ ೨.djvu/೧೩೧
ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಾಯ ೧೫
೧೨೧