ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಾಯ ೧೬
೧೨೫

ಹೋದನು. ಅಲ್ಲಿ ಶಂಬರನ ಗುಂಡಿನ ಏಟನ್ನು ತಿಂದು ಅವನಿಗೆ ಪ್ರತೀಕಾರ ಮಾಡುವುದಕ್ಕೋಸ್ಕರ ಪರಂತಪನ ಬಂಧಮೋಕ್ಷವನ್ನು ಮಾಡಿದ ರತ್ನಾಕರದ ಕಾವಲುಗಾರನು, ಇನ್ನೂ ನರಳುತ್ತ ಮಲಗಿದ್ದನು. ಅವನಿಗೆ ಶೈತ್ಯೋಪಚಾರಗಳನ್ನು ಮಾಡಿ, ಶಂಬರನಿಗೆ ನರಕ ಪ್ರವೇಶಕಾಲವು ಸಂಭವಿಸಿರುವುದೆಂದು ಅವನಿಗೆ ಹೇಳಲು, ಅವನು ಯಾತನೆಯಿಂದ ಕಷ್ಟಪಡುತ್ತಿದ್ದಾಗ್ಯೂ ಎದ್ದು ಕುಳಿತುಕೊಂಡು, ಮಂಜೀರಕಾದಿಗಳನ್ನು ನೋಡಿ, "ನೀವೆಲ್ಲರೂ ಸಮರ್ಥರಾಗಿ ಕಾಣುತ್ತೀರಿ. ಇಲ್ಲಿ ಆಯುಧ ಪಾಣಿಗಳಾದ ದುರಾತ್ಮರು ಐದು ಜನಗಳಿರುತ್ತಾರೆ. ಅವರು ಬಹಳ ಸಮರ್ಥರು. ಆಯುಧವಿಲ್ಲದೆ ನಿಮ್ಮೆಲ್ಲರನ್ನೂ ತೀರಿಸಿಕೊಳ್ಳುವುದಕ್ಕೆ ಅವರಲ್ಲಿ ಒಬ್ಬನೇ ಸಾಕಾಗಿರುವನಲ್ಲ!" ಎನ್ನಲು, ಅವರೆಲ್ಲರೂ ತಮ್ಮ ಪಿಸ್ತೂಲು ವಗೈರೆಗಳನ್ನು ತೋರಿಸಿದರು. ಅದರಿಂದ ಸಂತುಷ್ಟನಾಗಿ, ಅವನು ಚೇತರಿಸಿಕೊಂಡು ಎದ್ದು, ಅವರಿಗೆ ಆ ಕಟ್ಟಡದ ಮಾರ್ಗಗಳನ್ನೆಲ್ಲ ಸುಲಭವಾಗಿ ತಿಳಿಯುವಂತೆ ತೋರಿಸಿದನು.
ಇಷ್ಟರಲ್ಲಿಯೇ, ಸಮರಸಿಂಹನ ಭಾರಿ ಕುದುರೆ ಕಟ್ಟಲ್ಪಟ್ಟ ಒಂದು ಸಾರೋಟಿನಲ್ಲಿ ತನ್ನ ಮುಖ್ಯ ಭೃತ್ಯರೊಳಗೆ ಇಬ್ಬರಿಗೆ ಒಳ್ಳೆ ದಿರಸನ್ನು ಹಾಕಿ ತನ್ನ ಜತೆಯಲ್ಲಿ ಕೂರಿಸಿಕೊ೦ಡು, ತಾನೂ ವೇಷಧಾರಿಯಾಗಿ, ನೂರಾರು ಜನ ಬೇದಿರಸಿನಲ್ಲಿರತಕ್ಕವರಿಂದ ಪರಿವೃತನಾಗಿ, ರತ್ನಾಕರವನ್ನು ಪ್ರವೇಶಿಸಿದನು. ಆಗ ಶಂಬರನಿಗೆ ಯಾರೋ ದೊಡ್ಡ ಮನುಷ್ಯರು ಬಂದಿರುವರೆಂಬುದಾಗಿ ಅಲ್ಲಿನ ಕಾವಲುಗಾರನು ತಿಳಿಸಲು, ಶಂಬರನು "ಬಂದಿರ ತಕ್ಕವನು ಯಾರೋ ತಿಳಿದುಕೊಂಡು ಬಾ” ಎಂದು ಅರ್ಥಪರನನ್ನು ಕಳುಹಿಸಿದನು. ಆಗ ಅರ್ಥಪರನು ಬಂದು ಸಮರಸಿಂಹನನ್ನು ನೋಡಿ, "ಅಯ್ಯಾ! ನೀನು ಯಾರು?" ಎಂದು ಕೇಳಿದನು.
ಸಮರಸಿಂಹ- ನಾನು ಸಿಂಧು ದೇಶದ ನಿವಾಸಿಯಾದ ಕಳಿಂಗನು.
ಅರ್ಥಪರ- ನಿನ್ನ ಕಸಬು ಏನು ?
ಸಮರಸಿಂಹ- ನಾನು ಆ ದೇಶದಲ್ಲಿ ಲಾಯರರಾಗಿರುವೆನು.
ಅರ್ಥ ಪರ- ಇಲ್ಲಿ ಏನು ಕೆಲಸವಾಗಿ ಬಂದಿದ್ದೀಯೆ ?
ಸಮರಸಿಂಹ- ಈ ದುರ್ಗಕ್ಕೆ ರತ್ನಾಕರವೆಂದು ಹೆಸರೋ?