ಈ ಪುಟವನ್ನು ಪ್ರಕಟಿಸಲಾಗಿದೆ

೧೬

ಪರಂತಪ ವಿಜಯ

ಅಧ್ಯಾಯ ೩



   ಅಲ್ಲಿದ್ದ ಇತರ ಜನಗಳೆಲ್ಲರೂ ಮಾಧವನಿಗೆ ಸಂಭವಿಸಿದ ಆ ಅಪಾಯವನ್ನು ಕುರಿತು ದುಃಖಿಸುತ್ತಿರುವಷ್ಟರಲ್ಲಿಯೇ, ಪರಂತಸನು ಮಾಧವನ ಬಳಿಗೆ ಬಂದು ಶೈತೋಪಚಾರಗಳನ್ನು ಮಾಡಲು, ಮಾಧವನಿಗೆ ಸ್ವಲ್ಪ ಪ್ರಜ್ಞೆಯುಂಟಾಯಿತು. ಆಗ ಪರಂತಪನು ಇವನಿಗೆ ಬಿದ್ದಿರುವ ಪ್ರಹಾರವನ್ನು ಪರೀಕ್ಷಿಸುತ್ತ, ಸ್ವಲ್ಪ ವಿವರ್ಣವದನನಾಗಿ ಚಿಂತಿಸುತ್ತಿದ್ದನು.
ಮಾಧವ-ಅಯ್ಯಾ ಪರಂತಪನೆ : ಸಂತಾಪಪಡಬೇಡ. ನನಗೆ ಈ ಅವಸ್ಥೆ ಬರಬಹುದೆಂದು ನಾನು ಮೊದಲೇ ತಿಳಿಸಿದ್ದೆನಲ್ಲವೆ ! ನಾನು ಯೋಚಿಸಿದಂತೆಯೇ ದೈವಸಂಕಲ್ಪವೂ ಇದ್ದಿತು. ನಾನು ಇನ್ನು ಬಹಳ ಹೊತ್ತು ಬದುಕಲಾರೆನು. ಪ್ರಾಣೋತ್ಕ್ರಮಣ ಕಾಲವು ಸನ್ನಿಹಿತವಾಯಿತು. ಅದಕ್ಕೆ ಮುಂಚಿತವಾಗಿಯೇ ನಾನು ಮಾಡಬೇಕಾದ ಕಾರ್ಯವು ಬಹಳವಿರುವುದು. ಆದುದರಿಂದ ಈ ಕ್ಷಣದಲ್ಲಿಯೇ ನನ್ನನ್ನು ಆ ಭೋಜನ ಶಾಲೆಯಲ್ಲಿರುವ ನನ್ನ ವಾಸಗೃಹಕ್ಕೆ ಕರೆದುಕೊಂಡು ಹೊಗು.
   ಒಡನೆಯೇ ಪರಂತಪನು ಮಾಧವನನ್ನು ಪಲ್ಲಕ್ಕಿಯಲ್ಲಿ ಮಲಗಿಸಿ ಕೊಂಡು, ಅವನು ತೋರಿಸಿದ್ದ ವಾಸಗೃಹಕ್ಕೆ ಕರೆದುಕೊಂಡು ಹೋಗಿ, ಮಂಚದಮೇಲೆ ಮಲಗಿಸಿದನು.
ಮಾಧವ-ಅಯ್ಯಾ : ಪರಂತಪನೆ : ಆಪತ್ಕಾಲಕ್ಕೆ ಒದಗತಕ್ಕವನೇ ಬಂಧುವು ; ಅವನೇ ಪುತ್ರನು. ಆದುದರಿಂದ, ಪ್ರಕೃತದಲ್ಲಿ ನನಗೆ ನೀನೇ ಸಮಸ್ತ ಬಂಧುವೂ ಆಗಿರುವೆ. ಈಗ ವಿಶೇಷವಾಗಿ ಮಾತನಾಡುವುದಕ್ಕೆ ನನಗೆ ಶಕ್ತಿಯಿಲ್ಲ. ಅದು ಹಾಗಿರಲಿ; ನನಗೆ ಇಂಥ ಅಪಾಯವನ್ನುಂಟು ಮಾಡಿದ ದುರ್ಬುದ್ಧಿಗೆ ತಕ್ಕ ಪ್ರತೀಕಾರವನ್ನು ಮಾಡುವ ಭಾರವು ನಿನಗೆ ಸೇರಿದ್ದು. ನನ್ನನ್ನು ಹೊಡೆದಮೇಲೆ ಅವನು ಏನು ಮಾಡಿದನು ? ಈಗ ಎಲ್ಲಿರುವನು ?