೨೪
ಕಾರ್ಯಗಳನ್ನೆಲ್ಲ ಅವನಿಗೆ ರಹಸ್ಯವಾಗಿ ಹೇಳಿ, ಮೊದಲಿದ್ದಂತೆಯೇ ಆ ಬಾಗಿಲುಗಳನ್ನೆಲ್ಲ ಭದ್ರಪಡಿಸಿ, ಆ ಬೀಗದಕೈಯನ್ನು ಕಾವಲುಗಾರನ ಜೇಬಿನಲ್ಲಿಯೇ ಹಾಕಿ, ತನ್ನಲ್ಲಿದ್ದ ೧೦ ವರಹಗಳನ್ನು ಅವನ ಬಟ್ಟೆಯಲ್ಲಿ ಕಟ್ಟಿ, ಆತನ ಕ್ಷಮೆಯನ್ನು ಕೇಳಿಕೊಂಡು, ಅಧಿಕಾರಿಗಳಿಂದ ಅವನಿಗೆ ಯಾವ ತೊಂದರೆಯೂ ಬಾರದಿರಲೆಂದು ಅವನ ಕಟ್ಟುಗಳನ್ನು ಬಿಚ್ಚದೆ, ಮಂಜೀರಕನೊಡನೆ ಮಾಧವನಿದ್ದ ಸ್ಥಳಕ್ಕೆ ಹೊರಟುಬಂದು, ಮಂಜೀರಕನಿಗೆ ವೇಷಾಂತರವನ್ನು ಹಾಕಿ 'ನೀನು ಕಲ್ಯಾಣನಗರಕ್ಕೆ ಹೋಗಿ ಅಲ್ಲಿರು. ನಾನು ಕೂಡಲೆ ಅಲ್ಲಿಗೆ ಬರುವೆನು' ಎಂದು ಹೇಳಿ, ಕಳುಹಿಸಿದನು. ಮಾಧವನು ಆಗತಾನೆ ಎಚ್ಚರಗೊಂಡು, ಅರ್ಥಪರನನ್ನೂ ಪರಂತಪನನ್ನೂ ಸಮೀಪಕ್ಕೆ ಕರೆದು, ತನ್ನ ಹಾಸುಗೆಯ ಬಳಿಯಲ್ಲಿ ಕುಳ್ಳಿರಿಸಿಕೊಂಡು, ಜೀವಾನಂದನನ್ನು ನೋಡಿ 'ಅಯ್ಯಾ! ಮಿತ್ರನೆ ! ನೀನು ಮಾಡಿದ ಪರಮೋಪಕಾರಕ್ಕಾಗಿ ನಾನು ಬಹಳ ಕೃತಜ್ಞನಾಗಿರುವೆನು.' ಎಂದು ಹೇಳಿ, ತನ್ನ ಕತ್ತಿನಲ್ಲಿ ಹಾಕಿಕೊಂಡಿದ್ದ ಮುತ್ತಿನ ಸರವನ್ನು ತೆಗೆದು ಅವನ ಕೈಯಲ್ಲಿ ಕೊಟ್ಟು, 'ನಿನಗೆ ವಾಗ್ದಾನ ಮಾಡಿದ್ದುದಕ್ಕಿಂತ ಹೆಚ್ಚಾದ ದ್ರವ್ಯವನ್ನು ನಿನಗೆ ಕೊಟ್ಟಿರುವೆನು. ಈವೊಂದೊಂದು ಮುತ್ತನ್ನು ವಿಕ್ರಯಿಸಿಕೊಂಡರೂ, ನಿನಗೆ ಜೀವಾವಧಿ ರಾಜಭೋಗಗಳನ್ನು ಅನುಭವಿಸುವುದಕ್ಕೆ ಬೇಕಾದಷ್ಟು ದ್ರವ್ಯ ಲಭಿಸುವುದು. ಇನ್ನು ಮೇಲೆ ನೀನು ಸ್ವತಂತ್ರ ನಾಗಿ ಜೀವಿಸಿಕೊಳ್ಳಬಹುದು. ಇದುವರೆಗಿನಂತೆ ನೀನು ಜೀವನಾರ್ಥವಾಗಿ ಶ್ರಮಪಡಬೇಕಾದುದಿಲ್ಲ. ನಿನ್ನಿಂದ ನನಗೆ ಆಗಬೇಕಾದ ಕೆಲಸವಿನ್ನೊಂದಿರುವುದು. ಅದನ್ನು ನೆರವೇರಿಸಿಕೊಡುವುದಾಗಿ ನೀನು ವಾಗ್ದಾನ ಮಾಡಿದರೆ ಹೇಳುತ್ತೇನೆ.' ಎಂದನು.
ಜೀವಾನಂದ-ಅಯ್ಯಾ ! ನೀನು ನನಗೆ ಮಾಡಿರುವ ಉಪಕಾರಕ್ಕೆ, ನಾನು ಯಾವ ಕೆಲಸವನ್ನು ಮಾಡಿದರೆತಾನೆ ಸಾಕಾಗುವುದು ? ಜೀವನಾರ್ಥವಾಗಿ ಅಹೋರಾತ್ರಿಗಳಲ್ಲಿಯೂ ಶ್ರಮಪಡುತ್ತಿದ್ದ ನನಗೆ ಸುಖವಾದ ಬೇವಿಕೆಯನ್ನು ಕಲ್ಪಿಸಿದ ನಿನಗೆ, ನಾನೆಂದಿಗೂ ತಕ್ಕ ಪ್ರತ್ಯುಪಕಾರಮಾಡಲಾರೆನು, ನನ್ನ ಕೈಯಲ್ಲಿ ಸಾಧ್ಯವಾದುವುಗಳನ್ನೆಲ್ಲ ಶಿರಸಾ ವಹಿಸಿ ಮಾಡುವೆನು, ಹೇಳು.