ಸುಮಿತ್ರ-ಎಲೈ ಶಂಬರನೆ ! ನಿನ್ನ ಕೋಪವನ್ನು ಸಮಾಧಾನಮಾಡಿಕೊ. ಈ ವಿಷಯದಲ್ಲಿ ಪರಂತಪನು ನಿರಪರಾಧಿಯೆಂದು ತೋರುತ್ತದೆ.
ಶಂಬರ-ಅದು ಹೇಗೆ ?
ಸುಮಿತ್ರ-ಕಾಮಮೋಹಿನಿಯು, ನಿನ್ನನ್ನು ವಿವಾಹಮಾಡಿಕೊಳ್ಳುವುದಿಲ್ಲವೆಂದು, ನನಗೂ ಒಂದು ಕಾಗದವನ್ನು ಬರೆದಿರುತ್ತಾಳೆ. ಈ ಯೆರಡು ಕಾಗದಗಳೂ ನನ್ನ ಬಳಿಗೆ ಬಂದಕೂಡಲೆ, ನನ್ನ ಕಾಗದವನ್ನು ಓದಿ ನೋಡಿ ಕೊಂಡು, ಕಾಮಮೋಹಿನಿಯನ್ನು ಎಲ್ಲೆಲ್ಲಿಯೂ ಹುಡುಕಿದೆನು. ಎಲ್ಲಿಯೂ ಕಾಣದೆ ಇದ್ದುದರಿಂದ, ಪರಂತಪನ ವಿಷಯದಲ್ಲಿ ನನಗೂ ಅನುಮಾನಹುಟ್ಟಿತು. ಆದರೆ, ಮನೆಗೆ ಬಂದು ನೋಡುವಲ್ಲಿ, ಅವನು ಅತಿಥಿಗಳ ಜತೆಯಲ್ಲಿ ವಿನೋದವಾಗಿ ಸಲ್ಲಾಸ ಮಾಡುತ್ತಿದ್ದನು. ಈ ದುರಾಲೋಚನೆಗೆ ಸೇರಿದ್ದರೆ ಇವನೂ ಇವಳ ಜತೆಯಲ್ಲಿ ಹೊರಟುಹೋಗುತ್ತಿರಲಿಲ್ಲವೆ?
ಶಂಬರ-ಕಾಮಮೋಹಿನಿನ್ನು ಸಂಕೇತಮಾಡಿ ಯಾವುದಾದರೂ ಒಂದು ಸ್ಥಳಕ್ಕೆ ಕಳುಹಿಸಿ, ಈ ರೀತಿಯಲ್ಲಿ ಅಭಿನಯಿಸುತಿರಕೂಡದೋ?
ಸುಮಿತ್ರ-ಹಾಗೆ ಇದ್ದರೂ ಇರಬಹುದು; ಆದಾಗ್ಯೂ, ಈಗ ಅವನು ಬಹುಜನ ಅತಿಥಿಗಳ ಮಧ್ಯದಲ್ಲಿ ಇದ್ದಾನೆ. ಈ ಕಾಲದಲ್ಲಿ ದುಡುಕುವುದು ಸರಿಯಲ್ಲ. ಇದಲ್ಲದೆ, ಕಾಮಮೋಹಿನಿಯ ಪತ್ತೆಗಾಗಿ ಚಾರರನ್ನು ಕಳುಹಿಸಿದ್ದೇನೆ. ಜಾಗ್ರತೆಯಲ್ಲಿಯೇ ಅವಳನ್ನು ಬರಮಾಡಿ, ನಿನ್ನ ವಿಷಯದಲ್ಲಿ ಪ್ರಸನ್ನಳಾಗುವಂತೆ ಮಾಡುತ್ತೇನೆ. ನೀನು ದುಡುಕದಿರು.
ಅವನ ಪಿಸ್ತೂಲನ್ನೂ ಇತರ ಆಯುಧಗಳನ್ನೂ ಒಂದು ಕೊಠಡಿಯಲ್ಲಿ ಹಾಕಿ, ಅದಕ್ಕೆ ಬೀಗ ಹಾಕಿಕೊಂಡು, ಮುಂದಿನ ಕೆಲಸಗಳಿಗೆ ಪ್ರಯತ್ನ ಮಾಡುವುದಾಗಿ ಹೇಳಿ ಹೊರಟು ಹೋದನು. ಆದರೂ, ಶಂಬರನು ಉನ್ಮತ್ತ ಪ್ರಲಾಪವನ್ನು ಮಾಡುತ್ತ, ಹಾಗೆಯೇ ರೇಗುತ್ತ, ಪರಂತಪನನ್ನು ಬೈಯುತ್ತ ಹುಚ್ಚನಂತೆ ನಡೆಯುವುದಕ್ಕೆ ಉಪಕ್ರಮಿಸಿದನು. ಕೂಡಲೆ, ಸುಮಿತ್ರನು ಕೆಲವು ಜನ ಭೃತ್ಯರನ್ನು ಕರೆದು, ಅವನನ್ನು ಹೊರಗೆ ಬಿಡ ಕೂಡದೆಂದು ಏಕಾಂತವಾಗಿ ಅವರಿಗೆ ಹೇಳಿ, ತಾನು ತನ್ನ ಕೊಠಡಿಗೆ ಹೋಗಿ, ಪರಂತಪನಿಗೆ ಒಂದು ಚೀಟಿಯನ್ನು ಬರೆದು ಕಳುಹಿಸಿದನು. ಕೂಡಲೇ ಪರಂತವನು ಇವನ ಕೊಠಡಿಗೆ ಬಂದನು.