ಭೋಜನಾಲಯದಲ್ಲಿ ಸ್ನಾನಭೋಜನಾದಿಗಳನ್ನು ತೀರಿಸಿಕೊಂಡು, ಸ್ವಲ್ಪ ಹೊತ್ತು ವಿನೋದವಾಗಿ ಮಾತನಾಡುತಿದ್ದು, ವಿಶ್ರಮಾರ್ಥವಾಗಿ ಎಲ್ಲರೂ ಅವರವರ ವಾಸಸ್ಥಾನಗಳಿಗೆ ಹೊರಟುಹೋದರು.
ಅಧ್ಯಾಯ ೯.
ಮಾರನೆಯ ದಿವಸ ಅರುಣೋದಯ ಕಾಲಕ್ಕೆ ಎದ್ದು ಪರಂತಪನು ಸುಮಿತ್ರನ ಉಪವನಕ್ಕೆ ಏಕಾಂತವಾಗಿ ಪ್ರವೇಶಿಸಿ ತಾನು ಅಲ್ಲಿ ಹೂತಿಟ್ಟಿದ್ದ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿರುವಾಗ, ಕಲಾವತಿಯು ಎದುರಿಗೆ ಬಂದಳು.
ಕಲಾವತಿ-ಎಲೈ ಪರಂತಪನೇ! ಇದೇನು - ಇಷ್ಟು ಹೊತ್ತಿಗೆ ಮುಂಚೆ ಇಲ್ಲಿಗೆ ಬಂದಿರುವೆ? ರಾತ್ರಿ ಮನೆಯಲ್ಲಿದ್ದೆಯಾ? ನಿನ್ನನ್ನು ನಾನು ನಿನ್ನೆ ಕಾಣಲೇ ಇಲ್ಲ! ಇದೇನು ಪೆಟ್ಟಿಗೆ?
ಪರಂತಪ- ಇಲ್ಲ. ನೆನ್ನೆ ನಾನು ಇರಲಿಲ್ಲ. ಇದು ನನ್ನ ಕಾಗದ ಪತ್ರಗಳ ಪೆಟ್ಟಿಗೆ, ಇದನ್ನು ನನ್ನ ಮಿತ್ರನೊಬ್ಬನ ಬಳಿಗೆ ತೆಗೆದುಕೊಂಡು ಹೋಗ ಬೇಕಾಗಿರುವುದು.
ಕಲಾವತಿ- ನೆನ್ನೆ ನಿನಗೂ ನನ್ನ ಮಾವನಿಗೂ ಮನಸ್ತಾಪ ನಡೆದು ಅದರ ಮೇಲೆ ನೀನು ಮನೆಯನ್ನು ಬಿಟ್ಟು ಹೊರಟುಹೋದಂತೆ ಕೇಳಿದೆನು. ಇದು ನಿಜವೆ? ಇದಕ್ಕೆ ಕಾರಣವೇನು?
ಪರಂತಪ- ಇನ್ನೇನೂ ಇಲ್ಲ. ಕಾಮಮೋಹಿನಿಯನ್ನು ದುರ್ಬೊಧನೆಯಿಂದ ನನ್ನ ಸ್ವಾಧೀನ ಮಾಡಿಕೊಂಡೆನೆಂದು, ನಿಮ್ಮ ಮಾವನು ನನ್ನ ಮೇಲೆ ದೋಷಾರೋಪಣೆಯನ್ನು ಮಾಡಿದನು. ಇದು ನನಗೆ ವಿಷಾದವನ್ನುಂಟು ಮಾಡಿದ್ದರಿಂದ, ನಾನು ಬೇರೆ ಬಿಡಾರಕ್ಕೆ ಹೊರಟುಹೋದೆನು.
ಕಲಾವತಿ- ಕಾಮಮೋಹಿನಿಯಲ್ಲಿರುವಳು? - ಬಲ್ಲೆಯಾ?
ಪರಂತಪ- ಬಲ್ಲೆನು; ಆದರೆ ಅದು ಈಗ ಹೇಳ ತಕ್ಕುದಲ್ಲ.