ಅರ್ಥಪರ-ಇದು ಸಾಧ್ಯವಲ್ಲ. ಇದಕ್ಕೆ ಮಾತ್ರ, ನಾನು ಪ್ರಯತ್ನಿಸಿದರೆ ನನ್ನ ತಲೆ ಹೋಗುವುದು,
ಶಂಬರ- ಅದೂ ಬೇಡ. ಅವನನ್ನು ಹಿಡಿದುತಂದು ಸೆರೆಯಲ್ಲಿಟ್ಟು ನಾನಾವಿಧವಾದ ಹಿಂಸೆಯನ್ನುಂಟುಮಾಡಿ ಕಾಮಮೋಹಿನಿಯನ್ನೂ ಆ ವಿವಾಹದ ಕರಾರನ್ನೂ ಸ್ವಾಧೀನಪಡಿಸಿಕೊ. ಇದನ್ನು ನೋಡಲಾರದೆ, ಅವನು ತಾನಾಗಿಯೇ ಸಾಯುವನು. ಅವನು ಸಾಯದೆ ಇದ್ದರೆ ಅವನನ್ನು ಕೊಂದುಬಿಡು.
ಅರ್ಥಪರ- ಪ್ರಾಣಹಿಂಸೆಗೆ ಮಾತ್ರ ಎಂದಿಗೂ ನಾನು ಒಪ್ಪತಕ್ಕವನಲ್ಲ. ಅವನನ್ನು ಉಪಾಯದಿಂದ ಹಿಡಿದು ಯಾವಜ್ಜೀವವೂ ಸೆರೆಯಲ್ಲಿಡುತ್ತೇನೆ. ಮಾಧವನ ಉಯಿಲನ್ನು ಅಪಹರಿಸಿ ರತ್ನಾಕರವನ್ನು ನಿನ್ನ ಸ್ವಾಧೀನಕ್ಕೆ ಬರುವಂತೆಯೂ ಮಾಡುತ್ತೇನೆ. ಕಾಮಮೋಹಿನಿಗೆ ಪರಂತಪನು ಸತ್ತನೆಂದು ಪ್ರತ್ಯಯವನ್ನುಂಟುಮಾಡಿ, ಅವಳಿಗೆ ಪುನಃ ನಿನ್ನೊಡನೆ ವಿವಾಹವಾಗುವಂತೆಯೂ ಮಾಡಬಹುದು. ಇಷ್ಟಲ್ಲದೆ, ಪ್ರಾಣಹಿಂಸೆಗೆ ಪ್ರಯತ್ನ ಪಡುವ ಪಕ್ಷದಲ್ಲಿ, ನಿನ್ನ ಸಹವಾಸವೇ ನನಗೆ ಬೇಡ. ಇದು ನಿನಗೆ ಅಭಿಮತವಲ್ಲದಿದ್ದರೆ, ನೀನು ಕೊಟ್ಟಿರುವ ಆಭರಣಗಳನ್ನೆಲ್ಲ ಹಿಂದಿರುಗಿ ಕೊಟ್ಟು ಬಿಡುವೆನು.
ಇದನ್ನು ಕೇಳಿ ಶಂಬರನು ಭಗ್ನಮನೋರಥನಾದುದಲ್ಲದೆ, ತನ್ನ ಪ್ರಯತ್ನವನ್ನು ಹೊರಪಡಿಸುವನೋ ಏನೋ ಎಂದು ಬಹಳ ಭೀತಿಯನ್ನು ಹೊಂದಿ, ಈ ಕೊಲೆಯ ವಿಷಯವಾಗಿ ಈತನೊಡನೆ ಪ್ರಸ್ತಾಪ ಮಾಡಬಾರದಾಗಿತ್ತೆಂದು ಕೊಂಡು, ಮುಂದೆ ತನ್ನ ಯಾವ ಕೊಲೆಯ ವಿಷಯವಾದ ಪ್ರಯತ್ನವನ್ನೂ ಇವನೊಡನೆ ಹೇಳಬಾರದೆಂದು ನಿಷ್ಕರ್ಷಿಸಿಕೊಂಡನು.
ಅರ್ಥಪರ- ಅಯ್ಯಾ! ಇದೇನು ಯೋಚಿಸುತ್ತಿರುವೆ?
ಶಂಬರ- ಏನೂ ಇಲ್ಲ; ನೀನು ಹೇಳಿದಂತೆಯೇ ಮಾಡುವುದು ಯುಕ್ತ, ಪರಂತಪನನ್ನು ಕೊಲ್ಲುವುದಕ್ಕಿಂತ ಸೆರೆಯಲ್ಲಿಡುವುದೇ ಮೇಲು. ಇನ್ನು ಮುಂದೆ ನಿನ್ನ ಇಷ್ಟದಂತೆ ನಡೆಸೋಣ, ಮಾಧವನ ಉಯಿಲಿನ ವಿಷಯದಲ್ಲಿ ಹೇಗೆ ಮಾಡೋಣ ?
ಪುಟ:ಪರಂತಪ ವಿಜಯ ೨.djvu/೮೮
ಈ ಪುಟವನ್ನು ಪ್ರಕಟಿಸಲಾಗಿದೆ
೭೮
ಪರಂತಪ ವಿಜಯ