ಕಲಾವತಿ- ನೀನು ಪರಮನೀಚನು. ನಾನು ನಿನ್ನ ಮಾತನ್ನು ಕೇಳತಕ್ಕವಳಲ್ಲ. ಈ ಕಾಗದ ಪತ್ರಗಳನ್ನು ಕೊಟ್ಟು ಇಲ್ಲಿಂದ ತೆರಳಿದರೆ ಸರಿ; ಇಲ್ಲ ದ ಪಕ್ಷದಲ್ಲಿ, ನನ್ನ ಕೆಲಸವನ್ನು ನಾನು ಮಾಡುವೆನು.
ಶಂಬರ -ಎಲೈ ನೀಚಳೇ! ಕಾಗದಗಳು ನಿನ್ನವಲ್ಲ; ಅವು ನನ್ನವು.
ಕಲಾವತಿ -ಸಾಮಾನ್ಯರಾದ ಕಳ್ಳರು ತಾವು ಅಪಹರಿಸಿದ ಪದಾರ್ಥಗಳನ್ನು ತಮ್ಮವೆಂದು ಹೇಳಿಕೊಳ್ಳುವುದು ಅಪೂರ್ವ, ನೀನು ಸಾಮಾನ್ಯನಾದ ಕಳ್ಳನಲ್ಲ; ನಿನ್ನನ್ನು ಚೋರಶಿಖಾಮಣಿಯೆಂದೇ ಹೇಳಬಹುದು. ವ್ಯರ್ಥವಾದ ಮಾತುಗಳನ್ನು ಏತಕ್ಕೆ ಆಡುವೆ? ಆ ಕಾಗದಗಳನ್ನು ಕೆಳಗೆ ಹಾಕಿದರೆ ಸರಿ; ಸಾವಕಾಶ ಮಾಡಿದರೆ, ಪಿಸ್ತೂಲನ್ನು ಹಾರಿಸಿ ನಿನ್ನನ್ನು ಈ ಕ್ಷಣದಲ್ಲಿಯೇ ಯಮಪುರಿಗೆ ಕಳುಹಿಸುವೆನು.
ಇವಳ ಸ್ಥೈರ್ಯವನ್ನು ನೋಡಿ, ಸಾವಕಾಶ ಮಾಡಿದರೆ ಕೊಲ್ಲುವಳೆಂದು ತಿಳಿದುಕೊಂಡು, ಶಂಬರನು ಕಾಗದ ಪತ್ರಗಳನ್ನು ಅವಳ ಕಾಲಿನ ಬಳಿಯಲ್ಲಿಟ್ಟು, ವಿನೀತನಾಗಿ ಹೊರಟು ಹೋಗುವಂತೆ ಅಭಿನಯಿಸಿದನು. ಕಲಾವತಿಯು ಪಿಸ್ತೂಲನ್ನು ಒಂದು ಕೈಯಲ್ಲಿಟ್ಟುಕೊಂಡು, ಮತ್ತೊಂದು ಕೈಯಲ್ಲಿ ಆ ಕಾಗದಗಳನ್ನು ತೆಗೆದುಕೊಂಡು, ಅವುಗಳು ಯಾವ ವಿಷಯವಾದ ಕಾಗದಗಳೋ ಎಂದು ನೋಡುತಿದ್ದಳು.
ಶಂಬರ- ಕಲಾವತಿ! ಇನ್ನಾದರೂ ಕೋಪವನ್ನು ಬಿಡು. ನಿನ್ನ ತಂದೆಯು ಉಯಿಲಿನಲ್ಲಿ ನನಗೆ ಯಾವ ಆಸ್ತಿಯನ್ನು ಕೊಟ್ಟಿರುತ್ತಾನೆ?
ಕಲಾವತಿ- ನಿನಗೆ ಆಸ್ತಿಯೆಲ್ಲಿಯದು? ನೀನು ಉಲ್ಲಂಘಿಸಿರತಕ್ಕ ಷರತ್ತನ್ನು ನೆರವೇರಿಸಿದ ಪಕ್ಷದಲ್ಲಿ, ಎಲ್ಲಾ ಆಸ್ತಿಯನ್ನೂ ನಿನಗೇ ಬಿಟ್ಟಿರುತ್ತಾನೆ.
ಶಂಬರ-ಅದು ಯಾವ ಷರತ್ತು ?
ಕಲಾವತಿ-ದುರಾತ್ಮರಿಗೆ, ಆಡಿದ ಮಾತೂ, ಮಾಡಿದ ಪ್ರತಿಜ್ಞೆಗಳೂ ಎಂದಿಗೂ ಜ್ಞಾಪಕವಿರುವುದಿಲ್ಲ.
ಶಂಬರ-ನಿನ್ನನ್ನು ಮದುವೆಮಾಡಿಕೊಂಡರೆ ತನ್ನ ಆಸ್ತಿಗೆ ನಾನು ಅರ್ಹನೆಂದು ಬರೆದಿರುತ್ತಾನೋ ?