ಈ ಪುಟವನ್ನು ಪ್ರಕಟಿಸಲಾಗಿದೆ

112

ಕನಸು

ಬರ್ತೀವಿ.”
ಗಾಡಿಯತ್ತ ಓಡಬೇಕೆಂದು ಸುನಂದಾ ಬಯಸಿದಳು. ಆದರೆ ಕಾಲುಗಳು
ಕಂಪಿಸಿ ತಲೆ ಗಿರ್ರೆಂದಿತು.
ಆಕೆ ನೋಡುತ್ತಲೆ ನಿಂತಳು. ಜಟಕಾದಿಂದ ಬೇರೊಬ್ಬನೂ ಇಳಿದ. ಅವ
ರಿಬ್ಬರೂ ಸೇರಿ ಮೂರನೆಯವನನ್ನು ಇಳಿಸಿದರು. ಪುಟ್ಟಣ್ಣ. ಒಬ್ಬೊಬ್ಬರು
ಒಂದೊಂದು ತೋಳಿಗೆ ಆಸರೆಯಾಗಿ ಆತನನ್ನು ಅರ್ಧ ನಡೆಸಿಕೊಂಡು ಅರ್ಧ ಹೊತ್ತು
ಕೊಂಡು ಬಂದರು.
ಒಬ್ಬ ಕೇಳಿದ:
“ಎಲ್ಲಿ ಮಲಗಿಸೋಣ?”
ಸುನಂದಾ ಒಳಕ್ಕೋಡಿ ಕೊಠಡಿಯ ಬಾಗಿಲನ್ನು ಪೂರ್ತಿ ತೆರೆದಳು. ಅವ
ರಿಬ್ಬರೂ ಆತನನ್ನು ಮಂಚದ ಮೇಲೆ ಮಲಗಿಸಿ, ಸಾಮಾನಿನ ಮೂಟೆ ಕೆಳಗಿಟ್ಟವರಂತೆ
ಕೈ ಕೊಡವಿಕೊಂಡರು.
ಮೊದಲು ಮಾತನಾಡಿದವನೇ ಹೇಳಿದ:
“ಬೆಳಗಾಗೋ ಹೊತ್ತಿಗೆ ನಿಮ್ಮ ಯಜಮಾನರು ಹುಷಾರಾಗ್ತಾರೆ. ಯಾವತ್ತೂ
ಅವರಿಗೆ ಹೀಗಾದದ್ದು ಅಂತಲೇ ಇಲ್ಲ. ರುಸ್ತುಂ ಜೀವ. ಇವತ್ತು ಸ್ವಲ್ಪ ಜಾಸ್ತಿ
ಯಾಗ್ಹೋಯ್ತು. ಇಲ್ಲಿ ಬರೋವರೆಗೂ ಗಾಡೀಲಿ ಮಾತಾಡ್ತಾನೇ ಇದ್ರು. ಈಗ
ನಿದ್ದೆ ಬಂದಿದೆ....”
ಆ ಮಾತುಗಳಲ್ಲೂ ತೊದಲಿಕೆ ಇತ್ತು-ಬಲು ಸ್ವಲ್ಪ. ತನ್ನ ಸುಖವನ್ನು ಕಸಿದು
ಕೊಂಡ ಯಮದೂತರು ಅವರೇ ಎಂಬಂತೆ, ಸುನಂದಾ ಕೆಂಗಣ್ಣಿನಿಂದ ಅವರಿಬ್ಬರನ್ನೂ
ನೋಡಿ ಅಂದಳು:
“ನೀವಿನ್ನು ಹೋಗ್ಬಹುದು.”
ಅವರು ಹೊರಟರು. ಅಂಗಳಕ್ಕಿಳಿಯುತ್ತ ಒಬ್ಬ ಹೇಳಿದ:
“ಎಲ್ಲಾ ಹೆಂಗಸರೂ ಒಂದೇ ಥರ. ಹುಷಾರೀಮ್ಮಾ. ಅವರ ಕೋಟಿನ
ಜೇಬೆಲ್ಲ ಈಗ ತನಿಖೆ ಮಾಡ್ಬೇಡಿ. ಹಾಂ!”
ರಾಧಮ್ಮನ ಮನೆಯವರಾಗಲೀ ಕುಸುಮನ ಮನೆಯವರಾಗಲೀ ಎಚ್ಚೆತ್ತ
ರೇನೋ ಎಂದು ಅಂಜುತ್ತ ಸುನಂದಾ ಅತ್ತ ದೃಷ್ಟಿ ಹರಿಸಿದಳು. ಅಲ್ಲೆಲ್ಲೂ ದೀಪ
ವಿರಲಿಲ್ಲ. ಗುಡಿಸಲಿನ ಬಡ ಗಂಡಸು ಮಾತ್ರ ಇದೆಲ್ಲವನ್ನೂ ನೋಡುತ್ತ ಪಕ್ಕದಲ್ಲೆ
ನಿಂತಿದ್ದ.
ಸುನಂದಾ ಧಡಾರನೆ ಬಾಗಿಲು ಮುಚ್ಚಿದಳು. ಒಳ ಬಂದು ಆತನ ಬೂಟ್ಸು
ಬಿಚ್ಚಿದಳು. ಸದ್ದಾಗುವಂತೆ ಉಸಿರಾಡುತ್ತ ಮಲಗಿದ್ದ ಆತನನ್ನು ಬಹಳ ಹೊತ್ತು
ವ್ಯಥೆಯಿಂದ ದಿಟ್ಟಿಸುತ್ತಲೇ ಇದ್ದು, ಬಳಿಕ ದೀಪ ಆರಿಸಿ ತನ್ನ ಹಾಸಿಗೆಯತ್ತ ಹೋಗಿ,
ನಿದ್ದೆಯ ಆವರಣದೊಳಗೆ ಎಲ್ಲವನ್ನೂ ಮರೆಯಲು ಯತ್ನಿಸಿದಳು.