ಈ ಪುಟವನ್ನು ಪ್ರಕಟಿಸಲಾಗಿದೆ

14

ಕನಸು

ಹೋಗುತ್ತಿದ್ದಳು.
ಆಗ ತನಗೆ ಆತ್ಮೀಯವೆನಿಸಿದ್ದ ಜೀವದ ಸುಖಸ್ಪರ್ಶ ಈಗ ಇಲ್ಲ. ಅಂತಹ
ನಿದ್ದೆಯೂ ಇಲ್ಲವೀಗ.
ಯಾಕೆ ಹೀಗಾಯಿತು? ಏನಾಗಿ ಹೋಯಿತು?
ಒಂದು ಸಂದೇಹ ಸುನಂದೆಯನ್ನು ಬಹಳ ದಿನದಿಂದ ಬಾಧಿಸುತಲಿತ್ತು:
ತಾನು ಬಾಣಂತಿತನದ ಸಂಭ್ರಮದಲ್ಲಿದ್ದಾಗ, ತನ್ನ ಸಾಮೀಪ್ಯವಿಲ್ಲದೇ ಇದ್ದಾಗ,
ಬೇರೆ ಯಾವಳಾದರೂ ಹೆಣ್ಣು-ಬೆಲೆವೆಣ್ಣು-ಆತನನ್ನು ಬಲೆಯಲ್ಲಿ ಕೆಡವಿರಬಹುದೆ?
ಇದ್ದರೂ ಇರಬಹುದು-ಎನ್ನುತ್ತಿತ್ತು ಮನಸ್ಸು.
ಗಂಡು ಜೀವಕ್ಕೆ ಚಪಲ ಜಾಸ್ತಿ-ಎನ್ನುವ ವಾಡಿಕೆಯ ಮಾತನ್ನು ಒಳಗಿನಿಂದಲೆ
ಮನಸ್ಸು ಆಡುತ್ತಿತ್ತು.
ತಾನು ತವರಿಗೆ ಹೋದಾಗ ಪ್ರೀತಿಯ ಕಾಗದಗಳನ್ನು ಗಂಡ ಬರೆಯಬಹು
ದೆಂದು ಸುನಂದಾ ನಿರೀಕ್ಷಿಸಿದ್ದಳು. ಆ ನಿರೀಕ್ಷೆಯೂ ಸುಳ್ಳಾಯಿತು, ಇತರ ಎಲ್ಲಾ
ನಿರೀಕ್ಷೆಗಳ ಹಾಗೆ. ಹೆರಿಗೆಯ ಸಮಯದಲ್ಲೆಲ್ಲ ಆತ ರಜಾ ಪಡೆದು ಬಂದು ತನ್ನ
ಬಳಿಯಲ್ಲೆ ಇರಬಹುದೆಂದು ಸುನಂದಾ ಆಸೆಕಟ್ಟಿಕೊಂಡಿದ್ದಳು. ಅದೂ ಈಡೇರದೆ
ಹೋಯಿತು. ಗಂಡಸರಿಗೆಲ್ಲ ಗಂಡು ಮಗುವೇ ಇಷ್ಟ ಎಂದು ಆಗಲೇ ಮನವರಿಕೆ
ಯಾಗಿದ್ದ ಸುನಂದಾ 'ಮಗು ಗಂಡಾಗಲಿ ದೇವರೇ' ಎಂದು ಹರಕೆ ಹೊತ್ತಳು.
ದೇವರು ಆ ಹರಕೆಯ ಲಂಚಕ್ಕೆ ಮನಸೋಲಲಿಲ್ಲ. ಹೆಣ್ಣು ಹುಟ್ಟಿತು. ಆಕೆಯ
ತಂದೆಯೇನೋ ಸುಖಪ್ರಸವದ ಶುಭವಾರ್ತೆ ತಿಳಿಸಿ ಅಳಿಯ ದೇವರಿಗೆ ಕಾಗದಬರೆದರು.
ಆದರೆ ಸುನಂದಾ ಅಳುಕಿಯೇ ಇದ್ದಳು. ಗಂಡನ ಪಾಲಿಗೆ ಇದು ಶುಭವಾರ್ತೆಯಾಗುವು
ದುಂಟೆ? ಎಂಬ ಶಂಕೆ ಅವಳನ್ನು ಬಾಧಿಸುತ್ತಲೇ ಇತ್ತು. ಮಗುವನ್ನು ನೋಡುವ
ಆತುರವಾದರೂ ಗಂಡನಿಗಿರಬಹುದೆಂದು ಆಕೆ ಭಾವಿಸಿದ್ದಳು. ಆದರೆ ಆತನಿಗೆ ಆ
ಆತುರವೂ ಇರಲಿಲ್ಲ. “ರಜಾ ಇಲ್ಲ, ಬರುವುದಿಲ್ಲ” - ಎಂದು ಬರೆದ. ದಿನಗಳುರುಳಿ
ಸುನಂದಾ ಎದ್ದು ಓಡಾಡತೊಡಗಿದಳು. “ಕರೆದುಕೊಂಡು ಹೋಗಿ” ಎಂದು ಆಕೆಯೇ
ಸ್ವತಃ ಬರೆದಳು. ಉತ್ತರ ಬಂದುದು ಆಕೆಯ ತಂದೆಗೆ: “ನನಗೆ ಬಿಡುವಿಲ್ಲ. ನೀವೇ
ಕರೆದುತಂದು ಬಿಟ್ಟು ಹೋಗುವಿರೆಂದು ನಂಬಿದ್ದೇನೆ.” ಸುನಂದಾ, ಕಾಗದ ಬಂದ ಆ
ಕ್ಷಣವೇ ಹೊರಟುನಿಂತಳು. ಮಾರನೆಯ ದಿನದ ಒಳ್ಳೆಯ ಘಳಿಗೆಯವರೆಗೆ ತಂದೆ,
ಬಲು ಪ್ರಯಾಸಪಟ್ಟು ಮಗಳ ಪ್ರವಾಸವನ್ನು ತಡೆಹಿಡಿದರು.
ಮರುದಿನ ಒಳ್ಳೆಯ ಘಳಿಗೆಯಲ್ಲೇ ಆಕೆ ಗಂಡನ ಮನೆಗೆ ಮಗುವಿನೊಡನೆ
ಹೊರಟು ಬಂದುದಾಯಿತು.
ಹಾಗೆ ಸುಮುಹೂರ್ತ ನೋಡಿ ಬಂದಿದ್ದರೂ ಪ್ರಯೋಜನವೇನೂ ಆಗಲಿಲ್ಲ.
ಮಗುವನ್ನು ಎತ್ತಿ ಆಡಿಸಲು ಮೊದಮೊದಲು ಗಂಡ ಉತ್ಸಾಹ ತೋರಿದ್ದ.
ಆಗ, “ನಿಮ್ಮ ಕೈಲಾಗಲ್ಲ. ಸುಮ್ಸುಮ್ನೆ ಅಳಿಸ್ಬೇಡಿ ಮಗೂನ” ಎಂದಿದ್ದಳು ಸುನಂದಾ,