ಈ ಪುಟವನ್ನು ಪ್ರಕಟಿಸಲಾಗಿದೆ



16

ಕನಸು

ಮರುಕ್ಷಣ ಆಕೆಗೆ, 'ಇವರೇನು ಮಗು ಕೆಟ್ಟುಹೋದರೆ? ಎಂಥ ಗಂಡಸುತನ! ಇಸ್ಸಿ !'
ಎನಿಸುತಿತ್ತು.
ಇನ್ನೊಬ್ಬ ಹೆಣ್ಣಿನ ಬಾಹುಗಳು ಅವರ ಕೊರಳನ್ನು ಸುತ್ತುವರಿದಿರಬಹುದೆಂಬ
ಶಂಕೆ. ಅದು ದುಸ್ಸಹವಾದುದು. ಹಾಗಿದ್ದರೆ, ತನ್ನ ದಾಂಪತ್ಯಸುಖ ಮಣ್ಣುಗೂಡಿ
ದಂತೆಯೇ. ಹಾಗಾಗುವ ವಿಷಯ ಎಷ್ಟೋ ಕಾದಂಬರಿಗಳಲ್ಲಿ ಸುನಂದಾ ಓದಿದ್ದಳು;
ಸಿನಿಮಾಗಳಲ್ಲೂ ಕಂಡಿದ್ದಳು. ಅಂತಹ ಘೋರ ಆಪತ್ತು ತನಗೇ ಸಂಭವಿಸುವು
ದೆಂದರೆ? 'ಹಾಗಾಗಬಾರದು' ಎನ್ನುವ ಆಕೆಯ ಅಂತರ್ಯದ ಆಸೆ, 'ಹಾಗಿರಲಾರದು'
ಎನ್ನುವ ಭರವಸೆಯನ್ನು ಬಹಿರಂಗವಾಗಿ ಆಕೆಗೆ ಪದೇ ಪದೇ ಕೊಡುತ್ತಿತ್ತು.

****

ಹಾಸಿಗೆಯ ಮೇಲುರುಳಿಕೊಂಡು ಸುನಂದಾ ತಾರಸಿಯನ್ನೆ ದಿಟ್ಟಿಸಿದಳು.
ವಿದ್ಯುದ್ದೀಪದ ಮಂದಪ್ರಕಾಶದಲ್ಲಿ ಬಿಳಿಯ ತಾರಸಿ ಛಾವಣಿ ಹಳದಿಯಾಗಿ ತೋರು
ತ್ತಿತ್ತು. ತಾರಸಿಯಿಂದ ಇಳಿದು ಬಂದಿದ್ದ ದೊಡ್ಡ ಕೊಕ್ಕೆ ಮೊಳೆಗಳು ಎರಡು.
ಅವುಗಳಿಗೆ ತೊಟ್ಟಿಲನ್ನು ಕಟ್ಟಿದ್ದರು.
ಸುನಂದಾ ಅಂದುಕೊಂಡಳು:
'ಎಷ್ಟೊಂದು ಮುಂದಾಲೋಚನೆ ಮನೆ ಕಟ್ಟಿಸುವವರಿಗೆ! ಮನೆಯಲ್ಲಿ ವಾಸ
ಮಾಡುವವರಿಗೆ ಮಕ್ಕಳಾಗಿಯೇ ಆಗುತ್ತವೆಂಬ ನಂಬಿಕೆ ಅವರದು. ಅದಕ್ಕಾಗಿ
ಮುಂದಾಗಿಯೇ ತೊಟ್ಟಿಲು ತೂಗಲು ಏರ್ಪಾಟು!'
ಅಲ್ಲದೆ, ಮನೆ ತುಂಬಾ ಮಕ್ಕಳಾಗಲಿ-ಎಂಬ ಮಾತು ಸುಮ್ಮನೆ ಬಂತೆ?
ಮನೆ ತುಂಬಾ ಮಕ್ಕಳು!
ಸದ್ಯಃ ತನ್ನ ಪಾಲಿಗೆ ಹಾಗೆ ಆಗದಿದ್ದರೆ ಸಾಕು. ಒಂದನ್ನು ಪಡೆದು ಅನುಭವಿಸು
ತ್ತಿರುವ ಸುಖವೇ ಸಾಲದೆ?
ಗಂಡ ಹೆಂಡತಿ ಅನ್ಯೋನ್ಯವಾಗಿ ಬಾಳ್ವೆ ನಡೆಸುವ, ಮಕ್ಕಳನ್ನು ಬೆಳೆಸಿ ದೊಡ್ಡವ
ರಾಗಿ ಮಾಡುವ, ವೃದ್ಧಾಪ್ಯದಲ್ಲಿ ಪ್ರೀತಿಯ ಮಕ್ಕಳ ಸಂಪಾದನೆಯ ಮೇಲೆಯೇ
ಜೀವನ ಸಾಗಿಸುವ ಕಲ್ಪನೆಯೆಲ್ಲ ಎಷ್ಟು ಸುಂದರ!
ತಮ್ಮ ಮಟ್ಟಿಗೂ ಅಂತಹ ಸಂಸಾರಸುಖ ಲಭ್ಯವಾಗುವ ಸಾಧ್ಯತೆ....
ಎಷ್ಟು ಸಾರೆ ಹಾಗೆ ಯೋಚಿಸಿ ಏನು ಫಲ?...
ಯಾಕಾದರೂ ಪೀಡಿಸುತ್ತವೊ ಈ ಹಾಳು ಯೋಚನೆಗಳು?
ನಿದ್ದೆಯಾದರೂ ಬಂದಿದ್ದರೆ-
ಬಲು ಹಿಂದೆ ಚಿಕ್ಕವಳಾಗಿದ್ದಾಗ, ತಂಗಿಯೂ ಆಕೆಯೂ ಒಂದೇ ಹಾಸಿಗೆಯ
ಮೇಲೆ ಮಲಗಿದ್ದಾಗ, ಬಹಳ ಹೊತ್ತು ಅವರು ಮಾತಾಡುತ್ತಲೇ ಇದ್ದರೆ, ಅವರ
ತಂದೆ ಅನ್ನುತ್ತಿದ್ದರು:
“ಮಲಕೊಳ್ರೇ ಇನ್ನು.”