ಈ ಪುಟವನ್ನು ಪ್ರಕಟಿಸಲಾಗಿದೆ



ವಾಚಕ ಮಹಾಶಯ

ನನ್ನ ಮೂರು ಕಾದಂಬರಿಗಳಾದ 'ಪಾಲಿಗೆ ಬಂದ ಪಂಚಾಮೃತ', 'ಏಕಾಂಗಿನಿ' ಮತ್ತು 'ದೀಕ್ಷೆ' ಗಳನ್ನು ಒಟ್ಟಿಗೆ ಒದಗಿಸುತ್ತಿರುವ ಸಂಪುಟ_'ಕನಸು'. (ನಿರಂಜನ: ಮೂವತ್ತು ಸಂಪುಟಗಳಲ್ಲಿ... ಸರಣಿಯಲ್ಲಿ ಇದು ಐದನೆಯದು.)
ಈ ಸಂಪುಟದಲ್ಲಿರುವ ಮೂರೂ ಕಾದಂಬರಿಗಳನ್ನು ವ್ಯಾಪಿಸಿರುವುದು ಅರ್ಥ ಪೂರ್ಣ ಬದುಕಿನ ಕನಸು.

****

'ಪಾಲಿಗೆ ಬಂದ ಪಂಚಾಮೃತ'ದ ನಾಯಿಕೆ, ಸುನಂದಾ. ಅವಳ ಪಾಲಿಗೆ ವಿವಾಹ ಕಬ್ಬಿಣದ ಸಂಕೋಲೆಯಾಯಿತು. ಆದರೆ, ಆಕೆ ಸುಶೀಲೆ, ಸಹನೆಶೀಲೆ. ಬೇರೆಯೇ ಸೂರ್ಯೋದಯವನ್ನು ನಿರೀಕ್ಷಿಸುತ್ತ ಬಹಳ ದಿನ ಕಳೆದಳು. ಆದರೆ ದಟ್ಟೈಸಿದ ಮೋಡಗಳು ಕರಗಲಿಲ್ಲ.
ಸ್ವಾತಂತ್ರ್ಯೋತ್ತರ ಭಾರತ. ಹಿಂದೂ ವಿವಾಹ ಮಸೂದೆ ಲೊಕಸಭೆಯಲ್ಲಿ ಮಂಡಿತವಾಗಿ, ಬಿರುಸಿನ ವಾಗ್ಯುದ್ಧ ನಡೆದು, ಅಂತಿಮ ಒಪ್ಪಿಗೆ ದೊರೆತು, ಮಸೂದೆ ಶಾಸನವಾದ ವರ್ಷ ೧೯೫೫. ಆ ಕಾಲಾವಧಿಗೆ ನಾನು ಸ್ಪಂದಿಸಿದ್ದು, 'ಪಾಲಿಗೆ ಬಂದ ಪಂಚಾಮೃತ' ಮತ್ತು 'ಏಕಾಂಗಿನಿ' ಕಾದಂಬರಿಗಳ ರಚನೆಯ ಮೂಲಕ.
ಸೃಷ್ಟಿ ಕಾರ್ಯ ಮುಗಿದಾಗ ಸುನಂದಾ ನನ್ನಿಂದ ಅನುಕಂಪದ ಉಡುಗೊರೆ ಪಡೆದಳು. ಆಕೆ ಸದಾ ಏಕಾಂಗಿನಿಯಾಗಿ ಇರಬಾರದು ಎನಿಸಿತು. ಈಗಲೂ ಅನಿಸುತ್ತಿದೆ: 'ಅವಳಿಗೆ ಎಂದಾದರೊಂದು ದಿನ ನ್ಯಾಯ ದೊರಕಿಸಿ ಕೊಡಬೇಕು.'

****

ಸುನಂದಾ ಅನುಕಂಪಕ್ಕೆ ಪಾತ್ರಳು. 'ದೀಕ್ಷೆ'ಯ ನಾಯಕ ಮುರಲೀಧರ ಪಾತ್ರನಲ್ಲವೆ?
ಖಂಡಿತ ಹೌದು.
ಮುರಲೀಧರನ ಸುತ್ತ ಮೂರು ಭಾಗಗಳ ಕಾದಂಬರಿ ಹೆಣೆಯಲು ನಾನು ಬಯಸಿದ್ದೆ. ಮೊದಲಿನದು 'ದೀಕ್ಷೆ', ಎರಡನೆಯದು 'ಚಕ್ರವ್ಯೂಹ' ಮತ್ತು ಮೂರೆನೆಯದು 'ಪುಷ್ಪ ಸಮರ್ಪಣೆ'. 'ದೀಕ್ಷೆ'ಯನ್ನು ಓದುಗರಿಗೆ ನೀಡಿದೊಡನೆ ಸ್ವಪ್ನ ಭಂಗವಾಯಿತು...
ನನ್ನ ಈ ಯೋಜನೆಯ ಪರಿಚಯವಿಲ್ಲದವರಿಗೆ 'ದೀಕ್ಷೆ', ಸಾಧಾರಣವಾಗಿ ದುಂಡಗಿರುವ ಕೃತಿಯೇ. ಆದರೆ, 'ಪೂರ್ಣ ದು೦ಡಗಿರುವ' ಎಂಬ ಪದಗಳನ್ನು ಇಲ್ಲಿ ಬಳಸಲಾರೆ.