ಈ ಪುಟವನ್ನು ಪ್ರಕಟಿಸಲಾಗಿದೆ

58

ಕನಸು

“ಅಷ್ಟೇ ತಾನೆ? ಎಂಟು ದಿವಸ ಸ್ನಾನ ಮಾಡದೇ ಇದ್ದರೆ ನೀನೂ ಹಾಗೆಯೇ
ಕೊಳಕನಾಗ್ತೀಯಾ.”
ಆಕೆ ಸುನಂದೆಯತ್ತ ತಿರುಗಿ ಮಗುವಿನತ್ತ ಕೈ ಚಾಚಿದರು:
“ಬಾ ಸರಸ್ವತಿ...ಬಾ....”
ಮಗು ಬಂತು.
“ನನ್ಚಿನ್ನ....ನನ್ಕಂದ....”
—ಎಂದು ರಾಧಮ್ಮ 'ಗಿಲಿಗಿಲಿ' ಮಾಡಿ ಮಗುವನ್ನು ನಗಿಸಿದರು; ಅದರ ಮೇಲೆ
ಮುತ್ತಿನ ಮಳೆಗರೆದರು.
ಆ ಬಳಿಕ ರಾಧಮ್ಮನೆಂದರು:
“ಇದೇನಿದು, ಅಂಗಳದಲ್ಲೇ ನಿಂತಿದೀವಲ್ಲಾ? ಒಂದೋ ನಮ್ಮನೆಗೆ ನಡೀರಿ—
ಇಲ್ದಿದ್ರೆ ನಿಮ್ಮಲ್ಲಿಗೆ.”
“ಬನ್ನಿ ನಮ್ಮನೇಗೇ"
—ಎಂದು ಸುನಂದಾ ಮನೆಯತ್ತ ತಿರುಗಿದಳು.
“ಎಲ್ಲಿಗೂ ಹೋಗ್ಬೇಡ ಶ್ಯಾಮೂ. ಮನೇಲೆ ಇರು. ಬಂದ್ಬಿಟ್ಟೆ...”
—ಎಂದು ರಾಧಮ್ಮ ಮಗನಿಗೆ ಆದೇಶವಿತ್ತು, ಸರಸ್ವತಿಯನ್ನೆತ್ತಿಕೊಂಡು
ಸುನಂದೆಯ ಹಿಂದೆ ಬಂದರು.

****

ಏಳು ದಿನಗಳಾಗಿದ್ದುವು ಆ ರಾತ್ರಿ ಕಳೆದು. ಮೂಳೆ ಮುರಿಯುವಂತೆ ದೊರೆತ
ಹೊಡೆತದಿಂದ ಸುನಂದೆಯ ಮೈ ಉಕ್ಕಾಗಿತ್ತು, ಹೃದಯ ಕಲ್ಲಾಗಿತ್ತು.
ಮಾರನೆ ದಿನ ರಾಧಮ್ಮ ತಾವಾಗಿಯೇ ಬಂದಾಗ ಸುನಂದಾ ಹೇಳಿದ್ದಳು:
“ನೀವಿನ್ನು ನಮ್ಮ ಮನೆಗೆ ಬರೋದೇ ಇಲ್ಲಾ೦ತಿದ್ದೆ.”
ರಾಧಮ್ಮ ಪ್ರಯತ್ನ ಪೂರ್ವಕವಾಗಿ ನಕ್ಕು ನುಡಿದಿದ್ದರು:
“ಯಾಕಮ್ಮ, ನಿಮ್ಮ ಯಜಮಾನರು ಕೋಪಿಸ್ಕೋತಾರೆ ಅಂತ್ಲೆ? 'ಪಕ್ಕದ
ಮನೆಯವರಿಗೆ ಪ್ರವೇಶವಿಲ್ಲ' ಅಂತ ಬೋರ್ಡೇನೂ ಹಾಕಿಲ್ವಲ್ಲಾ!”
“ಅವರು ಅಂದದ್ದನ್ನೆಲ್ಲ ಮನಸ್ಸಿಗೆ ಹಚ್ಕೋಬೇಡಿ ರಾಧಮ್ಮ.”
“ಏನಾದರೂ ಅಂದಿದ್ರೆ ಆತ? ಎಲ್ಲಿ—ಏನಂದರು? ನನಗೇನೂ ನೆನಪಿಲ್ವಲ್ಲ!”
ಸುನಂದಾ, ಕಂಠ ಬಿಗಿದು ಬಂದು ಸುಮ್ಮನಾದಾಗ, ಮೃದು ಧ್ವನಿಯಲ್ಲಿ
ರಾಧಮ್ಮ ಕೇಳಿದ್ದರು:
“ತುಂಬಾ ನೋವಾಯ್ತೆ ಸುನಂದಾ?”
—ಎಡವಿ ಬಿದ್ದ ಮಗುವಿಗೆ, 'ಕಾಲಿಗೆ ಗಾಯವಾಯ್ತೇನೇ?' ಎಂದು ತಾಯಿ
ಕೇಳಿದ ಹಾಗೆ.
ಉತ್ತರವಾಗಿ ಸುನಂದಾ ಒಂದು ನಿಮಿಷ ಅತ್ತಿದ್ದಳು, ಒಂದೇ ನಿಮಿಷ.