ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

83

“ತೂಗಿಸಿ ನೋಡಿಲ್ಲವಮ್ಮ.”
ಹಾಗೆ ಹೇಳಿದಾಗ ಸುನಂದೆಯ ಮುಖ ವಿವರ್ಣವಾಯಿತು. ಪ್ರಶ್ನೆ ಕೇಳಿದವ
ಳಿಗೂ ನಿಜಸ್ಥಿತಿಯ ಅರಿವಾಗಿ, ತಾನು ಹಾಗೆ ಕೇಳಬಾರದಿತ್ತು ಎನಿಸಿತು. ಆದರೆ,
ಮಾಡಿದ್ದ ಪ್ರಸ್ತಾಪವನ್ನು ಮರೆಸುವುದಕ್ಕೋ ಎಂಬಂತೆ, ಒಂದೇ ಸಮನೆ ಬೇಗ
ಬೇಗನೆ ಆಕೆ ಅಂದಳು:
“ಬಹಳ ದಿವಸದಿಂದ ನಿಮ್ಮನ್ನ ಮಾತನಾಡಿಸಬೇಕೂಂತ ಇದ್ದೆ. ನೀವು
ಮಾತನಾಡ್ತೀರೋ ಇಲ್ಲವೋಂತ ಸಂಶಯವಿತ್ತು. ಇವತ್ತು ನಿಮ್ಮ ಮಗುವಿನಿಂದಾಗಿ
ಸಾಧ್ಯವಾಯ್ತು. ನನ್ನ ಹೆಸರು ಕುಸುಮ್. ನಿಮ್ಮ ಹೆಸರು?”
“ಸುನಂದಾ ಅಂತ.”
“ಪರಿಚಯವಾದದ್ದು ಬಹಳ ಸಂತೋಷ.”
ಒಂದು ಇಂಗ್ಲಿಷ್ ಪದವನ್ನೂ ಬೆರೆಸದೆ ಪ್ರಯಾಸ ಪಟ್ಟು ಆಕೆ ಮಾತನಾಡು
ತ್ತಿದ್ದಳು. ತನಗೆ ಇಂಗ್ಲಿಷ್ ತಿಳಿಯದೆಂದು ಹಾಗೆ ಮಾಡುತ್ತಿರಬಹುದು-ಎಂದು
ಸುನಂದೆಗೆ ಅನಿಸಿತು.
“ನಿಮ್ಮ ಮಗೂಗೆ ಏನು ಹೆಸರಿಟ್ಟಿದ್ದೀರ್ರೀ?”
“ಸರಸ್ವತೀಂತ.”
“ಸರಸ್ವತಿ-ಸರಸ್ವತಿ”
-ಎಂದು ಆಕೆ ಮಗುವನ್ನು ಆಡಿಸಿ ತಾಯಿಗೆ ಕೊಟ್ಟಳು. ಪೊಟ್ಟಣವನ್ನೂ
ಎತ್ತಿ ಸುನಂದೆಯ ಕೈಗೆ ತುರುಕಿದಳು.
“ಛೆ! ಛೆ! ಇದೇನು ಮಾಡ್ತಿದೀರಾ?”
“ಮಗೂಗೆ. ಅದರಲ್ಲಿ ತಪ್ಪೇನು? ತಗೊಳ್ಳಿ.”
ಸುನಂದೆ ಸುಮ್ಮನಿರಬೇಕಾಯಿತು.
ಕುಸುಮ ಕೇಳಿದಳು:
“ನಿಮ್ಮ ಮನೇಲಿ ಬೇರೆ ಹೆಂಗಸರು ಯಾರೂ ಇಲ್ಲಾಂತ ಕಾಣುತ್ತೆ."
“ಇಲ್ಲ.”
“ಪಕ್ಕದ ಮನೆಯವರು ಎಲ್ಲಿಗೆ ಹೋಗಿದ್ದಾರೆ?”
“ಸಿನಿಮಾಕ್ಕೆ ಹೋದರು.”
“ಓ! ಅವರ ಹೆಸರು?”
“ರಾಧಮ್ಮ ಅಂತ.”
“ಆಗಲಿ ಸುನಂದಮ್ಮ. ಇವತ್ತಿಗಿಷ್ಟು ಸಾಕು... ಹಗಲು ಹೊತ್ತು ಒಬ್ಬರೇ.
ಇರ್ತೀರಲ್ಲ- ನಮ್ಮನೆಗೆ ಬನ್ನಿ.”
ಆ ಮನೆಗಳಲ್ಲಿ ರೇಡಿಯೋ ಇರಲಿಲ್ಲವೆಂದು ಕುಸುಮಳಿಗೆ ಗೊತ್ತಿತ್ತು. 'ನಮ್ಮ
ನೇಲಿ ರೇಡಿಯೋ ಇದೆ, ಸಂಗೀತ ಕೇಳಬಹುದು' ಎಂದು ಹೇಳುವುದರಲ್ಲಿದ್ದಳು ಆಕೆ.