ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

85

ಮನುಷ್ಯರೂ ಬರಲಿಲ್ಲ. ಕುಡಿದ ಗಂಡನೇ ಕೈ ಸೋತು ಸುಮ್ಮನಾಗಿ, ಸೌದೆಯನ್ನೆ
ಸೆದು, ಹೆಂಡತಿಯನ್ನು ಗಟ್ಟಿಯಾಗಿ ಬಯ್ಯುತ್ತ ಬೀದಿಗಿಳಿದು ಹೊರಟು ಹೋದ.
ಆಕೆಯೂ ಬಹಳ ಹೊತ್ತು ಆತನನ್ನು ಶಪಿಸುತ್ತ ಕೂಗಾಡಿದಳು. ಅವರ ಹೆಣ್ಣು
ಮಗು, ಹೆದರಿ ಅವಿತಿದ್ದ ಮೂಲೆಯಿಂದ ಹೊರಬರಲೇ ಇಲ್ಲ.
ಮೈಯ ರಕ್ತ ಸಂಚಾರವೆಲ್ಲ ಸ್ವಲ್ಪ ಹೊತ್ತು ಹೆಪ್ಪು ಕಟ್ಟಿದಂತಾಯಿತು
ಸುನಂದೆಗೆ.

೧೩

ಒಂದು ಬೆಳಗ್ಗೆ ಇದ್ದಕ್ಕಿದ್ದಂತೆ ಸುನಂದೆಯ ತಂದೆ ಬಂದಿಳಿದರು. ಆಫೀಸಿಗೆ
ಹೊರಡುವ ಸನ್ನಾಹದಲ್ಲಿದ್ದ ಪುಟ್ಟಣ್ಣ. ಮಾವನನ್ನು ಕಂಡವನೇ ಹುಬ್ಬು ಗಂಟಿಕ್ಕಿದ.
ಅವರು ಅಂತಹ ಸ್ವಾಗತವನ್ನು ನಿರೀಕ್ಷಿಸಿರಲಿಲ್ಲ. ಆದರೂ ಹಿರಿಯನಾದ
ತನ್ನ ಮೇಲೆಯೇ ಹೆಚ್ಚಿನ ಜವಾಬ್ದಾರಿ ಎಂದು ಭಾವಿಸಿ, ಅಳಿಯನನ್ನು ನೋಡಿ
ಮುಗುಳ್ನಕ್ಕರು.
“ಚೆನ್ನಾಗಿದೀರೇನಪ್ಪ?”
—ಎಂದು ಅವರೇ ಅಳಿಯ ದೇವರನ್ನು ಕೇಳಿದರು.
“ಹೂಂ”
—ಎಂದು ತುಟಿ ತೆರೆಯದೆಯೇ ಸ್ವರ ಹೊರಡಿಸಿದ ಪುಟ್ಟಣ್ಣ.
ಮಾವ ಈಗ ಯಾಕೆ ಬಂದಿರಬಹುದು? ಎಂಬ ಪ್ರಶ್ನೆಗೆ ಆತನ ಮನಸ್ಸಿನಲ್ಲಿ
ದೊರೆತ ಉತ್ತರೆ ಒಂದೇ:
ಸುನಂದಾ ಕಾಗದ ಬರೆದು ತನ್ನ ಮೇಲೆ ಚಾಡಿ ಹೇಳಿ ಕರೆಸಿಕೊಂಡಿರಬೇಕು.
ಹಿಂದೆಯೇ, ಆಕೆ ತಂದೆಗೆ ಕಾಗದ ಬರೆದಿರಬಹುದೆಂಬ ಬಗ್ಗೆ ಆತನಿಗೆ ಸಂದೇಹ
ವಿರಲಿಲ್ಲ. ಉತ್ತರವೇನಾದರೂ ಬಂದಿದೆಯೇನೋ ಎಂದು ಆತ ಹುಡುಕಿಯೂ ಇದ್ದ.
ಆದರೆ ಯಾವುದೂ ದೊರೆತಿರಲಿಲ್ಲ. ಅಂತೂ ಮಾವ ಇಷ್ಟು ತಡವಾಗಿ ಬಂದುದು
ಸ್ವಲ್ಪ ಮಟ್ಟಿಗೆ ಆಶ್ಚರ್ಯವೇ ಆಗಿತ್ತು.
ಆತನಿಗೆ ತನ್ನ ಹೆಂಡತಿಯ ತಂದೆಯನ್ನು ಅವಮಾನಿಸುವ ಮನಸ್ಸಾಯಿತು.
“ಬೆಳಗ್ಗಿನ ರೈಲಲ್ಲಿ ಬಂದಿರಾ?”
'ಬಂದಿರಾ ಮಾವ?' ಎಂದು ಕೇಳಿರಲಿಲ್ಲ. ಅದನ್ನು ಆತನ ಮಾವ ಗಮನಿಸಿ
ಅಂದರು:
“ಹೌದು. ಈಗ ತಾನೇ ಬಂದೆ.”