ಈ ಪುಟವನ್ನು ಪ್ರಕಟಿಸಲಾಗಿದೆ

88

ಕನಸು

—ಎಂದು ಅವರು ಉಗುಳು ನುಂಗುತ್ತ ಅಂದರು.
ಆ ಬಳಿಕ, ಕುಡಿಯುವ ಚಟ-
“ಕುಡಿಯೋದು ಮಾತ್ರಾನೊ? ಹೊಡಿಯೊಲ್ವೊ?”
ಅದಕ್ಕೆ ಉತ್ತರ, ಒಂದೇಸಲ ಬಿಕ್ಕಿದ ಅಳು.
“ಸೂಳೇಮನೆಗೂ ಹೋಗ್ತಾನೆ ಅನ್ನು.”
ಈಗ ಸುನಂದಾ ಎಚ್ಚರಗೊಂಡಳು.
“ಇಲ್ಲವಪ್ಪಾ, ಅದಿಲ್ಲವಪ್ಪಾ—"
“ನನಗೆ ಹೇಳ್ತೀಯೇ ನೀನು? ಗಂಡಸರ ವಿಷಯ ನನಗೆ ಹೇಳ್ಕೊಡ್ತೀ
ಯೇನಮ್ಮ?"
"ಅಷ್ಟೂ ನನಗೆ ಗೊತ್ತಾಗಲ್ವೆ ಅಪ್ಪಾ?”
“ಅದೇನು ಗೊತ್ತಾಗುತ್ತೊ? ಅಂತೂ ಇಲ್ಲಿ ತನಕ ಬಂತು ನಮ್ಮ ರಾಮಾಯಣ.
ಹೂಂ....ನನಗೂ ಬರೀದೆ, ನೀನೂ ಏನೂ ಮಾಡ್ದೆ, ಒಟ್ಟು ಹಾಳಾಗಿ ಹೋಯ್ತು.”
ಒಂದು ಕ್ಷಣ, ತಂದೆಗೆ ತಾನು ಬರೆಯದೆ ಇದ್ದುದು ತಪ್ಪಾಯಿತೇನೋ ಎನ್ನಿ
ಸಿತು ಸುನಂದೆಗೆ. ....ಆದರೆ, ಬರೆದು ತಿಳಿಸಿದ್ದರೂ ಅವರು ಬಂದು ಏನು ಮಾಡು
ವುದು ಸಾಧ್ಯವಿತ್ತು?
“ಮಗೂಗೋಸ್ಕರ ಸಹಿಸ್ಕೊಂಡೆ ಅಪ್ಪಾ....ನಮ್ಮ ಸಂಸಾರದ ವಿಷಯ ಬೀದಿ
ಮಾತಾಗ್ಬಾರದು, ನಾನು ಹುಟ್ಟಿದ ಮನೆಗೆ ಕೆಟ್ಟ ಹೆಸರು ಬರಬಾರದು, ಆಂತ
ಸಹಿಸ್ಕೊಂಡೆ.”
ಅಳಿಯನ ಮೇಲಿನ ಸಿಟ್ಟಿನಿಂದ ಹಲ್ಲು ಕಡಿಯುತ್ತಿದ್ದ ಆಕೆಯ ತಂದೆ, ಮಗಳ
ಈ ಮಾತು ಕೇಳಿ ಅಪ್ರತಿಭರಾದರು. ಏನೂ ತಿಳಿಯದ ಹುಡುಗಿಯಾಗಿರಲಿಲ್ಲ ಆ
ಮಗಳು. ಲೋಕಾನುಭವ ಸಂಸ್ಕಾರ, ಆ ಮಾತಿಗೆ ಹಿನ್ನೆಲೆಯಾಗಿದ್ದುವು.
ಮಗಳು ಒಪ್ಪಿಸಿದ ವೃತ್ತಾಂತವನ್ನೆಲ್ಲ ಕೇಳಿ ಅವರ ಹೃದಯ ಭಾರವಾಯಿತು.
“ಎಲ್ಲಾ ನಮ್ಮ ಕರ್ಮ”
—ಎಂದು ಅಸಹಾಯತೆಯಿಂದ ಅವರು ಬಿಸುಸುಯ್ದರು.
ತಂದೆಗೆ ಇಷ್ಟೆಲ್ಲ ಹೇಳಿದ ಮೇಲೆ ಸುನಂದೆಯ ಹೃದಯ ಹಗುರವಾಯಿತು.
ತಂದೆಗೆ ಆಕೆ ಕಾಫಿ ಕೊಟ್ಟಳು. ಎಚ್ಚರಗೊಂಡು ತಾಯಿಯನ್ನು ಹುಡುಕುತ್ತ ಅಂಬೆ
ಗಾಲಿಡುತ್ತ ಅಡುಗೆಮನೆಗೆ ಬಂದ ಮಗಳನ್ನು, 'ತಾತ ಬಂದಿದಾರೆ ಕಣೇ' ಎಂದು,
ತನ್ನ ತಂದೆಯ ವಶಕ್ಕೊಪ್ಪಿಸಿದಳು. ರೈಲು ಪ್ರಯಾಣದಿಂದ ಬಳಲಿ ಬಂದಿದ್ದವರಿಗೆ
ಸ್ನಾನಕ್ಕಾಗಿ ಸಿದ್ಧತೆಮಾಡಿದಳು.
....ಊಟ ಸೇರದೆ ಇದ್ದರೂ ಮಗಳು ಪ್ರೀತಿಯಿಟ್ಟು, ಬಡಿಸಿದುದನ್ನು ಅವರು
ನಿರಾಕರಿಸಲಿಲ್ಲ.
ಅವರು ಬಂದ ಮುಖ್ಯ ಕೆಲಸ ಹಾಗೆಯೇ ಉಳಿದಿತ್ತು. ಮಗಳಿಗೆ ಅವರೆಂದರು: