ಈ ಪುಟವನ್ನು ಪ್ರಕಟಿಸಲಾಗಿದೆ

94

ಕನಸು

ಸುನಂದಾ ಏನು ತಪ್ಪು ಮಾಡಿದರೂ ಕ್ಷಮಿಸಿ. ನೀವೇ ತನ್ನ ಪರದೈವ ಅಂತ ಆಕೆ
ನಂಬಿದ್ದಾಳೆ. ಅಲ್ಲದೆ ಆ ಎಳೇ ಮಗುವಂತೂ ನಿಮ್ಮ ಪ್ರೀತಿಯ ಪೋಷಣೆಯಿಂದಲ್ಲವೆ
ಬೆಳೀಬೇಕು? ಎಲ್ಲರೂ ಸುಖವಾಗಿರಿ. ದೇವರು ನಿಮಗೆ ಒಳ್ಳೇದು ಮಾಡಲಿ.”
ಅವರ ಕಣ್ಣು ಮಂಜಾಯಿತು. ಹೊದ್ದುಕೊಂಡಿದ್ದ ಶಾಲಿನಿಂದ ಕಣ್ಣುಗಳನ್ನು
ಒತ್ತಿಕೊಳ್ಳಲು ಬಯಸಿದರೂ ಅಳಿಯನೆದುರು ಹಾಗೆ ಮಾಡಬಾರದೆಂದು ಸುಮ್ಮ
ನಿದ್ದರು.
ಪುಟ್ಟಣ್ಣ ಬಲಕ್ಕೆ ತಿರುಗಿ ಹೊರಟೇ ಹೋದ. ಹೋದಾಗ ಅವನಾಡಿದು
ದೊಂದೇ ಮಾತು:
“ಬರ್ತೀನಿ.”
ಆಗಲೂ 'ಬರ್ತೀನಿ ಮಾವ' ಎನ್ನಲಿಲ್ಲ. ಆ ರೀತಿಯ ಆತನ ವರ್ತನೆಯಿಂದ
ತುಂಬಾ ನೊಂದುಕೊಂಡು, ಸುನಂದೆಯ ತಂದೆ ಉಗುಳು ನುಂಗಿದರು.
...ಅವರು ಹಾದಿ ಜ್ಞಾಪಿಸಿಕೊಂಡು ಮಾರ್ಕೆಟಿನ ಕಡೆಗೆ ನಡೆದರು. ಅದನ್ನು
ತಲಪಿದಾಗ ಮಾತ್ರ ಏನನ್ನೂ ಕೊಳ್ಳಲು ಅವರಿಗೆ ಮನಸಾಗಲಿಲ್ಲ. ಊರಿಗೇನಾದರೂ
ಒಯ್ಯಬೇಕೆಂದು ಅವರು ಬರುತ್ತ ಯೋಚಿಸಿದ್ದರೂ ಈಗ ಸುಮ್ಮನಾದರು. ಕೊನೆಯ
ದಾಗಿ ಸುನಂದೆಯನ್ನು ಕಾಣುವ ಕೆಲಸ ಉಳಿದಿತ್ತು. ಸುನಂದೆಯ ಮಗುವಿಗಾಗಿ
ಬೆಣ್ಣೆ ಬಿಸ್ಕತ್ತು ಕೊಂಡರು. ಚಿಕ್ಕವಳಾಗಿದ್ದಾಗಿಂದಲೂ ಸಂಪಿಗೆ ಹೂ ಎಂದರೆ ಸುನಂದೆಗೆ
ಬಹಳ ಇಷ್ಟ. ಅದನ್ನು ಕೊಳ್ಳೋಣವೆನಿಸಿತು. ಆದರೆ, ಈ ವಿರಸದ ವಾತಾವರಣ
ದಲ್ಲಿ ಅದನ್ನೊಯ್ದು ಕೊಟ್ಟರೆ ಪುಟ್ಟಣ್ಣನಿಗೆ ಅದು ಒಪ್ಪಿಗೆಯಾಗದೇ ಹೋಗಬಹು
ದೆಂದು ಭಾವಿಸಿ, ಕೊಳ್ಳಲಿಲ್ಲ.

****

ತಂದೆಯೂ ಗಂಡನೂ ಜತೆಯಲ್ಲೇ ಬರಬಹುದೆಂದು ನಿರೀಕ್ಷಿಸುತ್ತ ಸುನಂದಾ
ಬಾಗಿಲಲ್ಲೆ ನಿಂತಿದ್ದಳು. ತಂದೆಯೊಬ್ಬರನ್ನೇ ಕಂಡಾಗ ಆಕೆಗೆ ನಿರಾಶೆಯಾಯಿತು.
'ಅವರು ಬರಲಿಲ್ವಾ?' ಎಂದು ಕೇಳಬೇಕೆಂದಿದ್ದಳು ಸುನಂದಾ. ಪ್ರಾಯಶಃ
ತನ್ನ ಗಂಡ ಕಾಣಲು ಸಿಗಲೇ ಇಲ್ಲವೇನೋ_ಎಂಬ ಶಂಕೆ ತಲೆದೋರಿ, ಸುಮ್ಮ
ನಾದಳು.
ವಿಜಯಾಳ ಮದುವೆಯ ವಿಷಯ ಏನಾಯಿತೆಂದು ತಿಳಿಯಬಯಸಿ ಆಕೆ
ಕೇಳಿದಳು:
“ಬಂದ ಕೆಲಸ ಆಯ್ತಾ?”
“ಇಲ್ಲ ಸುಂದಾ. ಅದು ನಮಗೆ ಸರಿಹೋಗುವಂಥ ಸಂಬಂಧವಲ್ಲ..."
_ಎಂದು ಹೇಳುತ್ತಾ ಅವರು ಕೊಠಡಿಯಲ್ಲಿದ್ದ ಕುರ್ಚಿಯ ಮೇಲೆ ಕುಳಿತು,
ಮಗುವನ್ನು ನೋಡಿ, ತಾನು ನಕ್ಕು ಅದನ್ನು ನಗಿಸಲೆತ್ನಿಸಿದರು. ಮೊಮ್ಮಗಳನ್ನು
ಕರೆದು ತೊಡೆಯ ಮೇಲೆ ಕುಳ್ಳಿರಿಸಿಕೊಂಡು, ತಾವು ತಂದಿದ್ದ ಬಿಸ್ಕತ್ತುಗಳಲ್ಲಿ ಒಂದನ್ನು