ಮುಖ್ಯವಾಗಿ ಭಾರತೀಯ ವರ್ತಕರು ತೆಗೆದುಕೊಂಡು ಹೋಗಿ ವ್ಯಾಪಾರ ಮಾಡುತ್ತಿದ್ದ ವಸ್ತುಗಳು.
ಇಂಡಿಯದ ಅಥವ ಉತ್ತರ ಭಾರತದ ಯುದ್ಧೋಪಯುಕ್ತ ಶಸ್ತ್ರಾಸ್ತ್ರಗಳು ತುಂಬ ಹೆಸರಾಗಿದ್ದವು. ಅದರಲ್ಲೂ ಅದರ ಉಕ್ಕು, ಕತ್ತಿ, ಕಠಾರಿಗಳು ಬಹಳ ಪ್ರಸಿದ್ಧಿ, ಕ್ರಿಸ್ತಪೂರ್ವ ಐದನೆಯ ಶತಮಾನದಲ್ಲಿ ಭಾರತೀಯರ ಒಂದು ದೊಡ್ಡ ಸೈನ್ಯ-ಆಶ್ವ ಮತ್ತು ಪದಾತಿದಳ ಪಾರ್ಸಿ ಸೇನೆಯೊಂದಿಗೆ ಗ್ರೀಸಿಗೆ ಹೋಗಿತ್ತು. ಅಲೆಕ್ಸಾಂಡರ್ ಪರ್ಷಿಯಾದೇಶದ ಮೇಲೆ ದಂಡೆತ್ತಿ ಬಂದಾಗ ಯುದ್ದಕ್ಕೆ ಬೇಕಾದ ಕತ್ತಿಗಳು ಮತ್ತು ಇತರ ಆಯುಧಗಳನ್ನು ಪಾರಸೀಕರು ಇಂಡಿಯಾದಿಂದ ಬಹುಬೇಗ ತರಿಸಿಕೊಂಡರೆಂದು 'ಷಹನಾಮ' ಎಂಬ ಫಿರ್ದೋಸಿಯ ಪ್ರಸಿದ್ದ ಪಾರ್ಸಿ ಮಹಾಕಾವ್ಯದಲ್ಲಿ ಹೇಳಿದೆ. ಇಸ್ಲಾ೦ಪೂರ್ವದ ಅರಬ್ಬಿ ಭಾಷೆಯಲ್ಲಿ ಕತ್ತಿಗೆ 'ಮುಹನ್ನದ್' ಎಂದು ಕರೆದಿದೆ. ಅಂದರೆ 'ಹಿಂದ್' ನಿಂದ ಅಥವ ಇಂಡಿಯಾದಿಂದ ಬಂದದ್ದು ಎಂದು. ಈಗಲೂ ಈ ಶಬ್ದ ಬಳಕೆಯಲ್ಲಿದೆ.
ಕಬ್ಬಿಣದ ಉಪಯೋಗದಲ್ಲಿ ಪ್ರಾಚೀನಭಾರತ ಬಹಳ ಶೋಧನೆ ನಡೆಸಿ ಮುಂದುವರಿದಿದ್ದಂತೆ ಕಾಣುತ್ತದೆ. ಇಂದಿನ ವಿಜ್ಞಾನಿಗಳನ್ನೆಲ್ಲ ಬೆರಗುಗೊಳಿಸಿರುವ ಒಂದು ಪ್ರಸಿದ್ದ ಕಬ್ಬಿಣದ ಕಂಬ ದೆಹಲಿಯ ಬಳಿ ಇದೆ. ತುಕ್ಕು ಹಿಡಿಯದೆ, ಗಾಳಿ ಮರಗಳ ಹೊಡೆತಕ್ಕೆ ಸಿಕ್ಕದಂತೆ ಇರಬೇಕಾದರೆ ಅದನ್ನು ಹೇಗೆ ಮಾಡಿರಬೇಕೆಂದು ಇನ್ನೂ ಕಂಡು ಹಿಡಿಯಲಾಗಿಲ್ಲ. ಅದರಮೇಲಿನ ಲಿಪಿ ಕ್ರಿಸ್ತಶಕ ನಾಲ್ಕರಿಂದ ಏಳನೆಯ ಶತಮಾನದವರೆಗೆ ಆಳಿದ ಗುಪ್ತರ ಕಾಲದ ಲಿಪಿಯಲ್ಲಿದೆ. ಕೆಲವು ವಿದ್ವಾಂಸರು ಲಿಪಿ ಈಚೆಗೆ ಬರೆದಿರಬೇಕು, ಸ್ತಂಭ ಇನ್ನೂ ಪುರಾತನ ಕಾಲದ್ದಿರಬೇಕು ಎಂದು ಹೇಳುತ್ತಾರೆ.
ಸೈನಿಕದೃಷ್ಟಿಯಿಂದ ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದ ಅಲೆಕ್ಸಾಂಡರನ ಭಾರತದಮೇಲಿನ ದಂಡಯಾತ್ರೆ ಒಂದು ಅಲ್ಪ ವಿಷಯ. ಅದು ಒಂದು ಗಡಿನಾಡಿನ ದಂಡಯಾತ್ರೆ ಮಾತ್ರ. ಅದರಿಂದ ಅವನಿಗೆ ಯಾವ ಲಾಭವೂ ದೊರೆಯಲಿಲ್ಲ. ಗಡಿನಾಡಿನ ಒಬ್ಬ ನಾಯಕನೇ ಆತನನ್ನು ಯಶಸ್ವಿಯಾಗಿ ತಡೆಗಟ್ಟಿದ್ದರಿಂದ ಭಾರತದಮೇಲೆ ದಂಡೆತ್ತಿ ಬರಲು ಬಹಳ ಹಿಂದು ಮುಂದು ನೋಡಬೇಕಾಯಿತು. ಗಡಿನಾಡಿನ ಒಬ್ಬ ನಾಯಕನೇ ಇಷ್ಟು ಬಲಿಷ್ಟನಾದರೆ ದಕ್ಷಿಣದಲ್ಲಿದ್ದ ಮಹಾರಾಷ್ಟ್ರಗಳ ಶಕ್ತಿ ಎಷ್ಟಿರ ಬೇಕು? ಪ್ರಾಯಶಃ ಅವನ ಸೈನ್ಯ ಮುಂದುವರಿಯಲು ನಿರಾಕರಿಸಿ ಹಿಂದಿರುಗಲು ಕಾರಣ ಇದೇ ಇರಬೇಕು.
ಭಾರತದ ಸೈನ್ಯಶಕ್ತಿಯ ನಿಜವಾದ ಪ್ರದರ್ಶನವು ಅಲೆಕ್ಸಾಂಡರನು ಹಿಂತಿರುಗಿ ಸತ್ತು ಹೋದ ಸ್ವಲ್ಪ ದಿನಗಳಲ್ಲೇ ಸೆಲ್ಯೂಕಸ್ ಇನ್ನೊಂದು ದಂಡಯಾತ್ರೆ ಬಂದಾಗ ನಡೆಯಿತು. ಚಂದ್ರಗುಪ್ತನಿಂದ ಅವನಿಗೆ ಸೋಲಾಗಿ ಪಲಾಯನಮಾಡಬೇಕಾಯಿತು. ಯಾವ ಸೈನ್ಯಕ್ಕೂ ಇಲ್ಲದ ವಿಶೇಷ ಶಕ್ತಿಯೊಂದು ಭಾರತೀಯ ಸೈನ್ಯಕ್ಕಿತ್ತು. ಇಂದಿನ ಕಾಲದ 'ಟ್ಯಾಂಕ್'ಗಳಿಗೆ ಹೋಲಿಸಬಹುದಾದ ಪಳಗಿದ ಆನೆಗಳ ಸೈನ್ಯ, ಕ್ರಿಸ್ತಪೂರ್ವ ೩೦೨ರಲ್ಲಿ ಏಷ್ಯ ಮೈನರ್‌ನಲ್ಲಿ ಆ೦ಟಗೋನಸ್ ಮೇಲೆದಂಡೆತ್ತಿ ಹೋದಾಗ ಸೆಲ್ಯೂಕಸ್ ನಿಕೇಟರ್ ಇಂತಹ ೫೦೦ ಆನೆಗಳನ್ನು ತೆಗೆದುಕೊಂಡು ಹೋಗಿದ್ದ. ಯುದ್ಧ ಇತಿಹಾಸ ಕಾರರು ಈ ಆನೆಗಳೇ ಯುದ್ದದ ಇತಿಹಾಸಕ್ಕೆ ಮುಖ್ಯ ಕಾರಣವೆಂದೂ, ಯುದ್ದದಲ್ಲಿ ಆಂಟಿಗೋನಸ್ ಮಡಿದು ಅವನ ಮಗ ಡೆಮಿಟ್ರಿಯಸ್ ಪಲಾಯನಮಾಡಲು ಸಹಾಯಕವಾದುವೆಂದೂ ಬರೆಯುತ್ತಾರೆ.
ಆನೆಗಳ ಶಿಕ್ಷಣ, ಕುದುರೆ ಸಾಕುವಿಕೆ ಮುಂತಾದ ವಿಷಯಗಳ ಮೇಲೆ ದೊಡ್ಡ ದೊಡ್ಡ ಗ್ರಂಥಗಳಿವೆ. ಒಂದೊಂದಕ್ಕೂ ಶಾಸ್ತ್ರ ಎಂದಿದ್ದಾರೆ, ಈಗ ಶಾಸ್ತ್ರ ಎಂದರೆ ಧರ್ಮಗ್ರಂಥ ಅಥವ ಪವಿತ್ರ ಗ್ರಂಥ ಎಂಬ ಅರ್ಥವಿದೆ; ಆದರೆ ಮೊದಲು ನಾಟ್ಯದಿಂದ ಮೊದಲುಗೊಂಡು ಗಣಿತದವರೆಗೆ ಎಲ್ಲ ಜ್ಞಾನ ಮತ್ತು ವಿಜ್ಞಾನಗಳಿಗೂ ಯಾವ ಭೇದವಿಲ್ಲದೆ ಉಪಯೋಗಿಸುತ್ತಿದ್ದರು. ನಿಜವಾಗಿ ನೋಡಿದರೆ ವೈದಿಕ ಮತ್ತು ಲೌಕಿಕ ಜ್ಞಾನಕ್ಕೆ ಯಾವ ಭೇದವೂ ಇರಲಿಲ್ಲ. ಒಂದರಲ್ಲೊಂದು ಪ್ರವೇಶಿಸುತ್ತಿದ್ದವು. ಜೀವನೋಪಯುಕ್ತ ಜ್ಞಾನವೆಲ್ಲದರಲ್ಲೂ ಸಂಶೋಧನೆ ನಡೆಯುತ್ತಿತ್ತು.
ಭಾರತದಲ್ಲಿ ಬರವಣಿಗೆ ಬಹಳ ಹಿಂದೆಯೇ ತಿಳಿದಿತ್ತು. ನವಶಿಲಾಯುಗದ ಮಡಕೆಗಳಮೇಲೆ ಬ್ರಾಹ್ಮಲಿಪಿಯ ಅಕ್ಷರಗಳಿವೆ. ಮೊಹೆಂಜೋದಾರೋದಲ್ಲಿ ದೊರೆತ ಲಿಪಿಯನ್ನು ಇನ್ನೂ