ಈ ಪುಟವನ್ನು ಪ್ರಕಟಿಸಲಾಗಿದೆ
೯೪
ಭಾರತ ದರ್ಶನ

ಅದೇ ರೀತಿ ಇನ್ನೊಂದು ಕಡೆ ಕಾಲವನ್ನು ಅತಿ ಸೂಕ್ಷ್ಮವಾಗಿ ಅಂದರೆ ಸುಮಾರು ೧/೧೭ ನೆಯ ಸೆಕೆಂಡಿನಷ್ಟರ ವರೆಗೆ ವಿಭಾಗಿಸಿದ್ದರು. ಉದ್ದದಲ್ಲಿ ಅತಿ ಸೂಕ್ಷ್ಮ ಪ್ರಮಾಣವೆಂದರೆ ೧.೩ X ೭-೧೦ ಅಂಗುಲದಷ್ಟಾಗಿತ್ತು. ಈ ಮಹತ್ಸಂಖ್ಯೆಯೂ, ಅಲ್ಪಸಂಖ್ಯೆಯೂ ಕೇವಲ ಊಹಾಪೂರ್ಣವಿದ್ದರೂ ತಾತ್ವಿಕ ಉದ್ದೇಶಗಳಿಗಾಗಿ ಉಪಯೋಗಿಸುತ್ತಿದ್ದರು. ಏನೇ ಆಗಲಿ ಪ್ರಾಚೀನ ಭಾರತೀಯರು ಕಾಲ, ದೇಶಗಳ ವಿಚಾರದಲ್ಲಿ ಇತರ ಯಾವ ಜನಾಂಗಗಳಲ್ಲಿಯೂ ಕಾಣದ ಬೃಹತ್ ಕಲ್ಪನೆಗಳನ್ನು ಇಟ್ಟು ಕೊಂಡು ಇದ್ದರು. ಅವರ ಮಾರ್ಗ ದೊಡ್ಡದು, ಭಾವನೆಗಳೂ ದೊಡ್ಡವು. ಅವರ ಪುರಾಣ ಕತೆಗಳಲ್ಲಿ ಸಹ ಕೋಟ್ಯನುಕೋಟಿ ವರ್ಷಗಳ ಕಾಲದ ಐತಿಹ್ಯ. ಆಧುನಿಕ ಭೂಗರ್ಭಶಾಸ್ತ್ರದ ಕಾಲಗಳಿ೦ದ ಆಗಲಿ ಅಥವ ಖಗೋಳಶಾಸ್ತ್ರದ ದೂರಗಳಿ೦ದ ಆಗಲಿ ಖಂಡಿತವಾಗಿಯೂ ಅವರು ಬೆರಗಾಗುತ್ತಿರಲಿಲ್ಲ. ಈ ಒಂದು ಹಿನ್ನೆಲೆಯಿಂದಲೇ ಡಾರ್ವಿನ್ ತತ್ವ ಅಥವ ಇತರ ಕ್ರಾಂತಿಕಾರಕ ತತ್ವಗಳಿಂದ ಯೂರೋಪ್ ದೇಶದಲ್ಲಿ ಹತ್ತೊಂಭತ್ತನೆಯ ಶತಮಾನದ ಮಧ್ಯಕಾಲದಲ್ಲಾದಂತೆ ಇಂಡಿಯದಲ್ಲಿ ವಿಪ್ಲವಗಳೂ, ಅ೦ತಃಕಲಹಗಳೂ ಆಗಿಲ್ಲ. ಯೂರೋಪಿನ ಜನಮನದ ಕಾಲ ಪರಿಮಿತಿ ಕೆಲವು ಸಾವಿರ ವರ್ಷಗಳನ್ನು ಮೀರಿರಲಿಲ್ಲ.

'ಅರ್ಥಶಾಸ್ತ್ರ'ದಲ್ಲಿ ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದಲ್ಲಿಯೇ ಉತ್ತರ ಹಿಂದೂಸ್ಥಾನದಲ್ಲಿ ಬಳಕೆಯಲ್ಲಿದ್ದ ತೂಕ ಮತ್ತು ಅಳತೆಯ ಪ್ರಮಾಣಗಳನ್ನು ಕೊಟ್ಟಿದೆ. ಪೇಟೆಗಳಲ್ಲಿ ತೂಕಗಳನ್ನು ಬಹಳ ದಕ್ಷತೆಯಿಂದ ಪರೀಕ್ಷಿಸುತ್ತಿದ್ದರು.

ಮಹಾಕಾವ್ಯಗಳ ಕಾಲದಲ್ಲಿ ಪಟ್ಟಣ ಅಥವ ನಗರಗಳಿಂದ ಸ್ವಲ್ಪ ದೂರದಲ್ಲಿ ಸೈನ್ಯ ಶಿಕ್ಷಣವೂ ಸೇರಿ ಎಲ್ಲ ಬಗೆಯ ಶಿಕ್ಷಣ ಮತ್ತು ವಿದ್ಯಾರ್ಜನೆಗಾಗಿ ವಿದ್ಯಾರ್ಥಿಗಳು ಬಂದು ಸೇರುತ್ತಿದ್ದ ಪ್ರಸಿದ್ಧರಾದ ಗುರುಗಳ ಅರಣ್ಯಾಶ್ರಮಗಳ ವಿಶ್ವವಿದ್ಯಾನಿಲಯಗಳಿದ್ದು ಎಂದು ಅನೇಕ ಕಡೆ ಉಲ್ಲೇಖವಿದೆ. ವಿದ್ಯಾರ್ಥಿಗಳು ಇಂದ್ರಿಯನಿಗ್ರಹ ಮತ್ತು ಕ್ರಮಜೀವನವನ್ನು ನಡೆಸಲು ಅನುಕೂಲವಾಗಿರಲೆಂದೂ ಮತ್ತು ನಗರಜೀವನದ ಮೋಹಕ್ಕೆ ಬಲಿಬೀಳದಿರಲೆಂದೂ ಈ ಅರಣ್ಯಾಶ್ರಮಗಳಿಗೆ ಹೆಚ್ಚು ಪುರಸ್ಕಾರವಿತ್ತು. ಯುವಕರು ಕೆಲವು ವರ್ಷಗಳು ಈ ರೀತಿ ಶಿಕ್ಷಣ ಪಡೆದ ಮೇಲೆ ಹಿಂದಿರುಗಿ ಗೃಹಸ್ಥಾಶ್ರಮಿಗಳಾಗಿ, ರಾಷ್ಟಕರಾಗಿ ಜೀವನ ನಡೆಸುತ್ತಿದ್ದರು. ಪ್ರಾಯಶಃ ಈ ಆಶ್ರಮಗಳಲ್ಲಿ ಬಹಳ ಸ್ವಲ್ಪ ಜನರು ಇರುತ್ತಿದ್ದರು; ಆದರೆ ಗುರುವಿನ ಮಹತ್ವದಿಂದ ವಿಶೇಷವಾಗಿ ಶಿಷ್ಯರು ಕಲೆಯುತ್ತ ಇದ್ದರು.

ಕಾಶಿಯ ಅನಾದಿಯಿಂದ ಒಂದು ವಿದ್ಯಾಪೀಠವಾಗಿದೆ; ಬುದ್ಧನ ಕಾಲದಲ್ಲಿಯೇ ಬಹಳ ಪ್ರಸಿದ್ಧವಾದ ಪ್ರಾಚೀನ ಜ್ಞಾನ ಕೇಂದ್ರವೆಂದು ಹೆಸರಾಗಿತ್ತು. ಕಾಶಿನಗರದ ಬಳಿ ಹರಿಣೋದ್ಯಾನ (Deer Park) ದಲ್ಲಿ ಬುದ್ಧನು ತನ್ನ ಮೊದಲ ಉಪದೇಶವನ್ನು ಬೋಧಿಸಿದ್ದು. ಆದರೆ ಆಗಿನ ಕಾಲದಲ್ಲಿ ಮತ್ತು ಈಚೆಗೆ ಭಾರತದ ಇತರ ಕಡೆಗಳಲ್ಲಿ ಇದ್ದ ವಿಶ್ವವಿದ್ಯಾನಿಲಯಗಳ೦ತೆ ಕಾಶಿ ಎಂದೂ ಒಂದು ವಿಶ್ವವಿದ್ಯಾನಿಲಯವಾಗಿ ಇರಲಿಲ್ಲ. ಒಬ್ಬ ಗುರು ಮತ್ತು ಆತನ ಶಿಷ್ಯರು ಈ ರೀತಿ ಅನೇಕ ಪಂಗಡಗಳು ಅಲ್ಲಿದ್ದಂತೆಯೂ, ಈ ಪಂಗಡಗಳ ಮಧ್ಯೆ, ವಾಗ್ಯುದ್ಧವೂ, ವಾದಗಳೂ ನಡೆಯುತ್ತಿದ್ದಂತೆಯೂ ತೋರುತ್ತದೆ.

ಆದರೆ ವಾಯವ್ಯದಲ್ಲಿ, ಈಗಿನ ಪೆಷಾವರ್ ಬಳಿ ಪುರಾತನವೂ, ಸುಪ್ರಸಿದ್ಧವೂ ಆದ ತಕ್ಷಶಿಲ ವಿಶ್ವವಿದ್ಯಾನಿಲಯವಿತ್ತು. ಅದು ವಿಜ್ಞಾನ, ಮುಖ್ಯವಾಗಿ ವೈದ್ಯ ವಿದ್ಯೆ, ಮತ್ತು ಕಲೆಗಳಿಗಾಗಿ ಬಹಳ ಪ್ರಸಿದ್ಧವಿತ್ತು. ಭಾರತದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು, ಅಲ್ಲಿಗೆ ಬರುತ್ತಿದ್ದರು. ಜಾತಕ ಕಥೆಗಳಲ್ಲಿ ಶ್ರೀಮಂತರ ಮಕ್ಕಳು ಮತ್ತು ಬ್ರಾಹ್ಮಣರು ಯಾವ ರಕ್ಷಕರೂ ಇಲ್ಲದೆ ನಿಶ್ಯಸ್ತರಾಗಿ ವಿದ್ಯಾರ್ಜನೆಗಾಗಿ ತಕ್ಷಶಿಲೆಗೆ ಹೋಗುತ್ತಿದ್ದ ನಿದರ್ಶನಗಳಿವೆ. ಬಹಳ ಅನುಕೂಲ ಸ್ಥಾನದಲ್ಲಿದ್ದ ಕಾರಣ ಪ್ರಾಯಶಃ ಮಧ್ಯ ಏಷ್ಯ ಮತ್ತು ಆಫ್ಘಾನಿಸ್ಥಾನದಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದಿರಬೇಕು. ತಕ್ಷಶಿಲ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಎನ್ನುವದು ಒಂದು ಗೌರವ ಮತ್ತು ದೊಡ್ಡ ಪ್ರಶಸ್ತಿಯಾಗಿತ್ತು. ಅಲ್ಲಿಯ ವೈದ್ಯ ಶಾಲೆಯಲ್ಲಿ ಶಿಕ್ಷಣ ಪಡೆದ ವೈದ್ಯರಿಗೆ ಬಹಳ