ಈ ಪುಟವನ್ನು ಪರಿಶೀಲಿಸಲಾಗಿದೆ

ಹೊಸ ಸಮಸ್ಯೆಗಳು

೨೧೯

ಒಂದೊಂದನ್ನು ಅಲ್ಲಲ್ಲಿ ಕಾಣಬಹುದು. ಪುರಾತನ ಭಾರತೀಯ ಪ್ರಜಾಧಿಪತ್ಯಗಳಂತೆ ಇತರ ದೇಶ ಗಳಲ್ಲೂ ಪ್ರಾಚೀನ ಪ್ರಜಾಪ್ರಭುತ್ವಗಳನ್ನು ನೋಡಬಹುದು. ರಷ್ಯಾ ದೇಶದ ಪ್ರಾಚೀನ 'ಮೀರ್' ಭಾರತೀಯ ಗ್ರಾಮ ಪಂಚಾಯಿತಿಯನ್ನು ಹೋಲುತ್ತದೆ. ಕಸಬನ್ನವಲಂಬಿಸಿ ಜಾತಿಪದ್ಧತಿಯು ಏರ್ಪಾಟಾಯಿತು. ಮಧ್ಯಯುಗದ ಯೂರೋಪಿನಲ್ಲೂ ಅಂತಹ ವರ್ಣಿಸಂಘಗಳಿದ್ದವು. ಚೀನಾ ದೇಶದ ಕುಟುಂಬ ಜೀವನವು ಹಿಂದೂ ಕುಟುಂಬ ಜೀವನದಂತೆಯೇ ಇದೆ. ಇವುಗಳನ್ನೆಲ್ಲ ಹೋಲಿಸಿ ತುಲನಮಾಡಿ ಚರ್ಚಿಸಲು ನನಗೆ ಸಾಮರ್ಥ್ಯವೂ ಇಲ್ಲ; ಆವಶ್ಯಕತೆಯೂ ಇಲ್ಲ. ಒಟ್ಟಿನಲ್ಲಿ ಭಾರತೀಯ ಸಮಾಜ ರಚನೆಯಲ್ಲಿ ಒಂದು ವೈಶಿಷ್ಟವಿತ್ತು; ಅದು ಬೆಳೆದಂತೆ ಆ ವೈಶಿಷ್ಟವೂ ಬೆಳೆಯಿತು.

೭. ಗ್ರಾಮಾಡಳಿತ ಸ್ವಾತಂತ್ರ್ಯ: ಶುಕ್ರನೀತಿಸಾರ

ತುರ್ಕಿ ಜನರ ಮತ್ತು ಆಫ್ಘನರ ದಂಡಯಾತ್ರೆಗೆ ಮುಂಚೆ ಭಾರತೀಯರ ರಾಜನೀತಿ ಏನಿತ್ತು ಎಂಬುದನ್ನು ತಿಳಿಸಲು ಹತ್ತನೆಯ ಶತಮಾನದ ಪುರಾತನ ಗ್ರಂಥ ಒಂದಿದೆ, ಶುಕ್ರಾಚಾರ್ಯನ ರಾಜ ನೀತಿಗ್ರಂಥವಾದ ನೀತಿಸಾರ, ಕೇಂದ್ರಾಡಳಿತ, ನಗರಾಡಳಿತ, ಗ್ರಾಮಾಡಳಿತ ರಾಜನ ಮಂತ್ರಾ ಲೋಚನಾಸಭೆ, ಸರಕಾರದ ವಿವಿಧ ಅಂಗಗಳ ವಿಷಯವನ್ನು ತಿಳಿಸುತ್ತದೆ. ಗ್ರಾಮ ಪಂಚಾಯಿತಿಯ ಚುನಾಯಿತ ಮಂಡಲಿಗೆ ವಿಶೇಷ ಆಡಳಿತ ಅಧಿಕಾರವೂ, ದಂಡನಾಧಿಕಾರವೂ ಇತ್ತು. ರಾಜನ ಕಡೆಯ ಅಧಿಕಾರಿಗಳು ಅವರಿಗೆ ತುಂಬಾ ಗೌರವ ತೋರಿಸುತ್ತಿದ್ದರು. ಜಮೀನು ಹಂಚಿಕೆ, ಬೆಳೆದ ಬೆಳೆಯಿಂದ ತೆರಿಗೆಯನ್ನು ಶೇಖರಿಸುವುದು, ಗ್ರಾಮದ ಪರವಾಗಿ ಸರಕಾರಕ್ಕೆ ಕೊಡಬೇಕಾದ ಭಾಗ ವನ್ನು ಕೊಡುವುದು ಪಂಚಾಯಿತಿಯ ಕೆಲಸವಾಗಿತ್ತು. ಇಂತಹ ಅನೇಕ ಗ್ರಾಮ ಪಂಚಾಯಿತಿಗಳ ಮೇಲೆ ಆಡಳಿತ ವ್ಯವಸ್ಥೆಗೆ ಮತ್ತು ಅವಶ್ಯ ತೋರಿದರೆ ಮಧ್ಯೆ ಪ್ರವೇಶಮಾಡಿ ಸರಿಪಡಿಸಲು ದೊಡ್ಡ ಪಂಚಾಯಿತಿಗಳು ಇರುತ್ತಿದ್ದವು.

ಕೆಲವು ಪ್ರಾಚೀನ ಶಿಲಾಶಾಸನಗಳಿಂದ ಪಂಚಾಯಿತರನ್ನು ಹೇಗೆ ಆರಿಸುತ್ತ ಇದ್ದರು. ಅವರ ಅರ್ಹತೆಗಳೇನು, ಅನರ್ಹತೆಗಳೇನು ಎಂಬುದು ಗೊತ್ತಾಗುತ್ತದೆ. ಪ್ರತಿವರ್ಷವೂ ಅನೇಕ ಸಮಿತಿಗಳನ್ನು ಚುನಾಯಿಸಿ ನೇಮಿಸುತ್ತಿದ್ದರು. ಸ್ತ್ರೀಯರಿಗೂ ಅವುಗಳಲ್ಲಿ ಸ್ಥಾನವಿತ್ತು. ದುರ್ನಡತೆ ಗಾಗಿ ಸದಸ್ಯರನ್ನು ತೆಗೆದು ಹಾಕಬಹುದಾಗಿತ್ತು. ಸಾರ್ವಜನಿಕ ಹಣಕ್ಕೆ ಲೆಕ್ಕ ಕೊಡದಿದ್ದ ಸದಸ್ಯನು ತನ್ನ ಅರ್ಹತೆಯನ್ನು ಕಳೆದುಕೊಳ್ಳುತ್ತಿದ್ದನು. ಬೇಕಾದವರಿಗೆ ಮಾತ್ರ ಕೆಲಸಕೊಡದಂತಿರಲೆಂದು ಸದಸ್ಯರು ತಮ್ಮ ಸಂಬಂಧಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದೆಂಬ ನಿಯಮವಿತ್ತು.

ಈ ಪಂಚಾಯಿತಿಗಳು ತಮ್ಮ ಹಕ್ಕು ಬಾಧ್ಯತೆಗಳ ರಕ್ಷಣೆಯಲ್ಲಿ ಬಹಳ ಜಾಗರೂಕರಿದ್ದರು. ರಾಜನ ಅಪ್ಪಣೆಯಿಲ್ಲದೆ ಯಾವ ಸೈನಿಕನೂ ಗ್ರಾಮದೊಳಗೆ ಪ್ರವೇಶಮಾಡಬಾರದೆಂಬ ನಿಯಮ ವಿತ್ತು. ಅಧಿಕಾರಿಯೊಬ್ಬನ ಮೇಲೆ ಜನರು ದೂರು ತಂದರೆ “ ರಾಜನು ಅಧಿಕಾರಿಯ ಪರ ವಹಿಸ ಬಾರದು, ತನ್ನ ಪ್ರಜೆಗಳ ಪರ ವಹಿಸಬೇಕು ” ಎಂದು ನೀತಿಸಾರ ಹೇಳುತ್ತದೆ. ಅನೇಕರಿಂದ ದೂರು ಬಂದರೆ ಆ ಅಧಿಕಾರಿಯನ್ನು ಕೆಲಸದಿಂದ ನಿವೃತ್ತಿಮಾಡಬೇಕು. "ಅಧಿಕಾರ ಮದದಿಂದ ಉನ್ನತ ನಾಗದವನು ಯಾರು ” ? ತನ್ನ ಪ್ರಜೆಗಳ ಬಹುಮತದ ಇಷ್ಟ ಕ್ಕನುಗುಣವಾಗಿ ದೊರೆಯು ನಡೆಯ ಬೇಕು. “ ಅನೇಕ ಎಳೆಗಳ ಹಗ್ಗವು ಸಿಂಹವನ್ನಾದರೂ ಎಳೆದು ಕಟ್ಟುವಂತೆ ಸಾರ್ವಜನಿಕ ಅಭಿಪ್ರಾ ಯವು ರಾಜನಿಗಿಂತ ದೊಡ್ಡದು.” ಈ ಕೆಲಸಕ್ಕೆ ನೇಮಿಸುವುದರಲ್ಲಿ ಕಾರ್ಯದಕ್ಷತೆ, ನಡತೆ ಮತ್ತು ಬುದ್ದಿ ಶಕ್ತಿಗೆ ಪ್ರಾಧಾನ್ಯ ಕೊಡಬೇಕು- ಜಾತಿ ಅಥವ ಮನೆತನಕ್ಕಲ್ಲ.” “ಬಣ್ಣದಿಂದಲಾಗಲಿ, ವಂಶೀಕರಿಂದಲಾಗಲಿ ಬ್ರಾಹ್ಮಣನ ಗುಣ ಹುಟ್ಟುತ್ತೆಂಬುದು ಸುಳ್ಳು.”

ದೊಡ್ಡ ದೊಡ್ಡ ನಗರಗಳಲ್ಲಿ .ಕುಶಲಕರ್ಮಿಗಳು, ವರ್ತಕರು ಇರುತ್ತಿದ್ದರು. ಉದ್ಯೋಗ ಸಂಘಗಳು, ವಣಿಕ್ ಸಂಘಗಳು, ಧನಕೋಠಿಗಳು ಇರುತ್ತಿದ್ದವು, ಈ ಸಂಘಗಳಿಗೆ ಸಂಪೂರ್ಣ ಆಡಳಿತ ಸ್ವಾತಂತ್ರವಿತ್ತು.