ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೨

೩೩೧

ಸ್ವಾತಂತ್ರ ನಿರಾಕರಿಸಿದಾಗ ಬ್ರಹ್ಮದೇಶದವರ ಒಲವು ಜಪಾನರ ಕಡೆ ತಿರುಗಿ ೧೯೪೨ರಲ್ಲಿ ಜಪಾನರು ಬ್ರಹ್ಮದೇಶಕ್ಕೆ ಮುತ್ತಿಗೆ ಹಾಕಿದಾಗ ಪ್ರತ್ಯಕ್ಷ ಅದರ ಅನುಭವವಾಯಿತು.

೧೯೩೫ನೆಯ ಶಾಸನವನ್ನು ಭಾರತದ ಎಲ್ಲ ರಾಜಕೀಯ ಪಕ್ಷದ ಜನರೂ ಪ್ರಬಲ ವಿರೋಧಿಸಿದರು. ಗೌರರ್ ಮತ್ತು ವೈಸರಾಯ್ಗೆ ಇದ್ದ ಅನೇಕ ವಿಶೇಷ ಅಧಿಕಾರ ಮತ್ತು ಮೀಸಲು ಹಕ್ಕುಗಳಿಗಾಗಿ ಪ್ರಾಂತ್ಯಾಡಳಿತ ವಿಧಾನವನ್ನು ಉಗ್ರವಾಗಿ ಟೀಕಿಸಿದರು; ಅದರ ಸಂಯುಕ್ತ ರಾಜ್ಯ ವಿಧಾನ ಇನ್ನೂ ಹೆಚ್ಚು ಖಂಡನೀಯವಿತ್ತು. ಸಂಯುಕ್ತ ರಾಜ್ಯ ವಿಧಾನ ಪದ್ದತಿಯನ್ನೇ ದ್ವೇಷಿಸಲಿಲ್ಲ. ಭಾರತಕ್ಕೆ ಸಂಯುಕ್ತ ರಾಜ್ಯವಿಧಾನವೇ ಉತ್ತಮವೆಂದು ಎಲ್ಲರೂ ಒಪ್ಪಿದರು. ಆದರೆ ಬ್ರಿಟಿಷರು ರಚಿಸಿದ 'ಸಂಯುಕ್ತ ರಾಜ್ಯ ವಿಧಾನ ಪದ್ದತಿಯ ಉದ್ದೇಶ, ಬ್ರಿಟಿಷರ ಆಡಳಿತ ಮತ್ತು ಪಟ್ಟದ ಹಕ್ಕುಗಳನ್ನು ಭದ್ರಪಡಿಸುವುದೇ ಆಗಿತ್ತು. ಪ್ರಾಂತ್ಯಾಡಳಿತ ನಿಧಾನ ಮಾತ್ರ ಆಚರಣೆಗೆ ಬಂದಾಗ ಚುನಾವಣೆಯಲ್ಲಿ ಕಾಂಗ್ರೆಸ್ ಭಾಗ ವಹಿಸಬೇಕೆಂದು ತೀರ್ಮಾನಿಸಿತು. ಆದರೆ ಶಾಸನದ ಪ್ರಕಾರ ಪ್ರಾಂತ್ಯಾಡಳಿತದ ಜವಾಬ್ದಾರಿ ಹೊರ ಬೇಕೇ ಬೇಡವೆ ಎಂಬ ವಿಷಯ ಕಾಂಗ್ರೆಸ್ಸಿನಲ್ಲಿ ಒಂದು ದೊಡ್ಡ ಸಮಸ್ಯೆಯಾಯಿತು. ಅನೇಕ ಪ್ರಾಂತ್ಯಗಳಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಅದ್ಭುತ ಬಹುಮತ ದೊರಕಿತ್ತು. ಆದರೂ ಗೌರರ್ ಮತ್ತು ವೈಸ್‌ರಾಯ್‌ರು ಆಡಳಿತದಲ್ಲಿ ಅಡ್ಡ ಬರುವುದಿಲ್ಲವೆಂಬ ಭರವಸೆ ಇಲ್ಲದೆ ಮಂತ್ರಿಮಂಡಲದ ಜವಾಬ್ದಾರಿ ಹೊರಬಾರದೆಂಬ ಅಭಿಮತವಿತ್ತು. ಕೆಲವು ತಿಂಗಳಮೇಲೆ ಒಂದು ಬಗೆಯ ಭರವಸೆ ದೊರೆತು, ೧೯೩೭ ರಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಿತು. ಹನ್ನೊಂದು ಪ್ರಾಂತಗಳ ಪೈಕಿ ಎಂಟು ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಮಂತ್ರಿ ಮಂಡಲಗಳೇರ್ಪಟ್ಟವು. ಸಿಂಧ, ಬಂಗಾಲ ಮತ್ತು ಪಂಜಾಬದಲ್ಲಿ ಇದು ಸಾಧ್ಯವಾಗಲಿಲ್ಲ. ಸಿಂಧ ಸಣ್ಣ ಹೊಸ ಪ್ರಾಂತ್ಯವಾಗಿ ಭದ್ರತೆ ಇರಲಿಲ್ಲ. ಬಂಗಾಲದ ಶಾಸನದ ಸಭೆಯಲ್ಲಿ ಕಾಂಗ್ರೆಸ್ ಪಕ್ಷವೇ ಅತಿ ದೊಡ್ಡದಾದರೂ ಬಹುಮತವಿರಲಿಲ್ಲ. ಆದ್ದರಿಂದ ಅಲ್ಲಿ ಮಂತ್ರಿಮಂಡಲ ರಚಿಸಲಿಲ್ಲ. ಬ್ರಿಟಿಷ್ ವರ್ತಕರಿಗೆ ಕಲ್ಕತ್ತ ನಗರವೇ ಮುಖ್ಯ ಕೇಂದ್ರವಾದ್ದರಿಂದ ಯೂರೋಪಿಯನರಿಗೆ ಬಂಗಾಲ ಶಾಸನ ಸಭೆಯಲ್ಲಿ ವಿಶೇಷ ಪ್ರಾತಿನಿಧ್ಯ ಕೊಡಲಾಗಿತ್ತು. ಸಂಖ್ಯೆಯಲ್ಲಿ ಕೆಲವು ಸಹಸ್ರಜನ ಮಾತ್ರ ಇದ್ದರೂ ಅವರಿಗೆ ಇಪ್ಪತ್ತೈದು ಸ್ಥಾನಗಳು, ಒಂದು ಕೋಟಿ ಎಪ್ಪತ್ತು ಲಕ್ಷ ಮುಸ್ಲಿಮೇತರರಿಗೆ ಐವತ್ತು ಸ್ಥಾನಗಳು ! ಆದ್ದರಿಂದ ಶಾಸನ ಸಭೆಯಲ್ಲಿ ಬ್ರಿಟಿಷ್ ಪ್ರತಿನಿಧಿಗಳ ಪಂಗಡಕ್ಕೆ ಬಂಗಾಲದ ಮಂತ್ರಿ ಮಂಡಲವನ್ನು ಉಳಿಸುವುದಕ್ಕೂ ಉರುಳಿಸುವುದಕ್ಕೂ ಶಕ್ತಿಯಿತ್ತು.

ಭಾರತದ ಸಮಸ್ಯೆಗೆ ತಾತ್ಕಾಲಿಕ ಪರಿಹಾರವೆಂದು ಸಹ ೧೯೩೫ ನೆಯ ಶಾಸನ ಒಪ್ಪಲು ಕಾಂಗ್ರೆಸ್ಸಿಗೆ ಸಾಧ್ಯವಿರಲಿಲ್ಲ. ಈ ಶಾಸನವನ್ನು ವಿರೋಧಿಸಿ ಸ್ವಾತಂತ್ರ ಸಾಧಿಸುವುದಾಗಿ ಪ್ರತಿಜ್ಞೆ ಮಾಡಿದ್ದೆವು. ಆದರೂ ಪ್ರಾಂತ್ಯಾಡಳಿತವನ್ನು ಕೈಗೆ ತೆಗೆದುಕೊಂಡು ನಡೆಸಬೇಕೆಂಬುದು ಬಹುಮತಾಭಿಪ್ರಾಯವಾಯಿತು. ಈಗ ಕಾಂಗ್ರೆಸ್ ನೀತಿ ದ್ವಿಮುಖವಾಯಿತು. ಹೊರಗೆ ಸ್ವಾತಂತ್ರ್ಯದ ಹೋರಾಟ ಮುಂದೆ ಸಾಗಿಸುವುದು ; ಶಾಸನ ಸಭೆಗಳ ಮೂಲಕ ರಚನಾತ್ಮಕ ಕಾರ್ಯಕ್ರಮ ಸಾಧಿಸುವುದು. ಮುಖ್ಯವಾಗಿ ರೈತರ ಸಮಸ್ಯೆಯನ್ನು ಶೀಘ್ರ ಪರಿಹಾರ ಮಾಡುವುದು ಅವಶ್ಯವಿತ್ತು.

ಕಾಂಗ್ರೆಸ್ಸಿಗೆ ಬಹುಮತವಿದ್ದುದರಿಂದ ಅವಶ್ಯಕತೆ ಇಲ್ಲದಿದ್ದರೂ ಇತರ ಪಕ್ಷಗಳನ್ನು ಸೇರಿಸಿಕೊಂಡು ಮಿಶ್ರ ಮಂತ್ರಿಮಂಡಲ ರಚಿಸುವ ಪ್ರಶ್ನೆಯನ್ನೂ ಯೋಚಿಸಲಾಯಿತು. ಸರಕಾರದ ಕಾರ್ಯನಿರ್ವಹಣೆಯಲ್ಲಿ ಆದಷ್ಟು ಜನರ ಸಹಾಯ ಪಡೆಯುವುದು ಅಪೇಕ್ಷಣೀಯವಿತ್ತು. ಮಿಶ್ರ ಮಂತ್ರಿ ಮಂಡಲ ರಚನೆ ತಪ್ಪು ಎಂಬ ಭಾವನೆ ಎಲ್ಲ ಸಮಯದಲ್ಲೂ ಇರಲಿಲ್ಲ. ವಾಯವ್ಯ ಪ್ರಾಂತ್ಯ ಮತ್ತು ಅಸ್ಸಾಂನಲ್ಲಿ ಒಂದು ಬಗೆಯ ಮಿಶ್ರ ಮಂತ್ರಿ ಮಂಡಲಗಳನ್ನೆ ಒಪ್ಪಲಾಗಿತ್ತು. ಹಾಗೆ ನೋಡಿದರೆ ಭಾರತಕ್ಕೆ ಸ್ವಾತಂತ್ರ, ಸಾಧನೆಯ ಬಲವತ್ತರ ಆಶೆಯಿಂದ ಕಾಂಗ್ರೆಸ್ಸೇ ಒಂದು ಮಿಶ್ರ ರಾಜಕೀಯ ಪಕ್ಷವಾಗಿತ್ತು. ಒಳಗೆ ಅನೇಕ ಅಭಿಪ್ರಾಯ ಭೇದಗಳಿದ್ದರೂ ಒಂದು ಶಿಸ್ತು, ಒಂದು ಸಾಮಾಜಿಕ ದೃಷ್ಟಿ, ಶಾಂತರೀತಿಯಲ್ಲಿ ಹೋರಾಟ ನಡೆಸುವ ಒಂದು ಶಕ್ತಿ ಬೆಳೆದಿತ್ತು. ಇದಕ್ಕೂ ಹೆಚ್ಚಿನ ಸೇರ್ಪಡೆ ಎಂದರೆ ಭಿನ್ನ ರಾಜಕೀಯ