ಕಾಂಗ್ರೆಸ್ ಪ್ರತಿಬಿಂಬಿಸಿದ್ದು ಮಧ್ಯಮವರ್ಗದ ಹೊಸ ಪೌರತ್ವದ ಭಾವನೆ ಬೆಳೆದಂತೆ ಬೆಳೆದ ರಾಷ್ಟ್ರೀಯ ಭಾವನೆ ಮಾತ್ರವಲ್ಲ; ಸಾಮಾನ್ಯ ಜನತೆಯ ಸಾಮಾಜಿಕ ಸುಧಾರಣೆಯ ಅಭಿಲಾಷೆಯ ಆತುರವನ್ನೂ ಪ್ರತಿಬಿಂಬಿಸಿತು, ಜಮೀನುದಾರಿ ಪದ್ಧತಿಯಲ್ಲಿ ಕ್ರಾಂತಿಕಾರಕ ಪರಿವರ್ತನೆಯೇ ಅದರ ಮುಖ್ಯ ಗುರಿಯಾಗಿತ್ತು. ಇದರಿಂದ ಕೆಲವು ವೇಳೆ ಕಾಂಗ್ರೆಸ್ಸಿನಲ್ಲೇ ಒಡಕು ಹುಟ್ಟುತ್ತಿತ್ತು. ಜಮೀನುದಾರರು, ಬಂಡವಾಳಗಾರರು ರಾಷ್ಟ್ರೀಯ ಭಾವನೆಯುಳ್ಳವರಾಗಿದ್ದರೂ, ಸಾಮಾಜಿಕ ಸುಧಾರಣೆಗಳ ಭಯದಿಂದ ಕಾಂಗ್ರೆಸ್ಸಿನಿಂದ ದೂರನಿಲ್ಲುತ್ತಿದ್ದರು. ಕಾಂಗ್ರೆಸ್ಸಿನಲ್ಲಿ ಸಮಾಜವಾದಿಗಳೂ ಇದ್ದರು, ಸಮತಾ ವಾದಿಗಳೂ ಇದ್ದರು. ಕಾಂಗ್ರೆಸ್ ನೀತಿಯಮೇಲೆ ಅವರ ಪ್ರಭಾವವೂ ಇತ್ತು. ಕೋಮುವಾರು ಸಂಸ್ಥೆಗಳು ಹಿಂದೂ ಇರಲಿ, ಮುಸ್ಲಿ೦ ಇರಲಿ, ಬಂಡವಾಳಗಾರರು ಮತ್ತು ಜಮೀನುದಾರರನ್ನೇ ಆಶ್ರಯಿಸಿದ ಕಾರಣ ಯಾವ ಕ್ರಾಂತಿಕಾರಕ ಸಾಮಾಜಿಕ ಬದಲಾವಣೆಯೂ ಅವರಿಗೆ ಬೇಕಿರಲಿಲ್ಲ. ಆದ್ದರಿಂದ ನಿಜವಾದ ಹೋರಾಟಕ್ಕೂ ಧರ್ಮಕ್ಕೂ ಯಾವ ಸಂಬಂಧವೂ ಇರಲಿಲ್ಲ. ಮುಖ್ಯವಾಗಿ ಹೋರಾಟವೆಲ್ಲ ರಾಷ್ಟ್ರೀಯ ಭಾವನೆ- ಪ್ರಜಾಸತ್ತೆ-ಸಾಮಾಜಿಕ ಸುಧಾರಣೆ ಇವುಗಳ ಪರ ನಿಂತವರಿಗೂ ಧರ್ಮದ ಹೆಸರಿನಲ್ಲಿ ಸೋಗುಹಾಕಿಕೊಂಡ ನವಾಬಗಿರಿ ಸಂಪ್ರದಾಯ ಸಂರಕ್ಷಕರಿಗೂ ನಡೆಯುತ್ತಿತ್ತು. ಈ ಉತ್ಕಟ ಪರಿಸ್ಥಿತಿಯಲ್ಲಿ ಪ್ರತಿಗಾಮಿ ಶಕ್ತಿಗಳಿಗೆ ವಿದೇಶಿ ಆಡಳಿತಗಾರಠ ಬೆಂಬಲವೇ ಬಲ, ಆಡಳಿತಗಾರರಿಗೆ ಯಾವ ಪ್ರಗತಿಯೂ ಬೇಕಿಲ್ಲದಿದ್ದುದೇ ಅದಕ್ಕೆ ಕಾರಣ.
ಪ್ರಪಂಚದ ಎರಡನೆಯ ಯುದ್ಧ ಆರಂಭವಾದೊಡನೆ ಪ್ರಾಂತಗಳಲ್ಲಿ ಕಾಂಗ್ರೆಸ್ ಸರಕಾರಗಳು ರಾಜಿನಾಮೆ ಕೊಡಬೇಕಾಗಿ ಬಂದು ದೇಶದಲ್ಲಿ ಒಂದು ಉತ್ಕಟ ಪರಿಸ್ಥಿತಿ ಒದಗಿತು. ಅದಕ್ಕೆ ಮುಂಚೆ ಜನಾಬ್ ಜಿನ್ನಾ ಮತ್ತು ಮುಸ್ಲಿಂ ಲೀಗಿನೊಂದಿಗೆ ಒಪ್ಪಂದಕ್ಕೆ ಬರಲು ಕಾಂಗ್ರೆಸ್ ಮತ್ತೊಮ್ಮೆ ಪ್ರಯತ್ನ ಮಾಡಿತು. ಯುದ್ಧ ಆರಂಭವಾದೊಡನೆ ಸೇರಿದ ಮೊದಲನೆಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ಜನಾಬ್ ಜಿನ್ನಾರನ್ನೂ ಆಹ್ವಾನಿಸಿದೆವು. ಆದರೆ ಆತ ಬರಲಿಲ್ಲ. ಪ್ರಪಂಚದ ವಿಷಮ ಪರಿಸ್ಥಿತಿಯ ದೃಷ್ಟಿಯಿಂದ ಇಬ್ಬರಿಗೂ ಒಪ್ಪಿಗೆಯಾಗುವ ಕಾರನೀತಿ ರೂಪುಗೊಳಿಸಲು ಸಾಧ್ಯವೇನೋ ಎಂದು ನಾವೇ ಆಮೇಲೆ ನೋಡಿದೆವು. ಒಂದು ಹೆಜ್ಜೆ ಮುಂದುವರಿಯದಿದ್ದರೂ ಮಾತನ್ನು ಮುಂದುವರಿಸಬೇಕೆಂದು ನಿರ್ಧರಿಸಿದೆವು. ಈ ಮಧ್ಯೆ ರಾಜಕೀಯ ಪ್ರಶ್ನೆ ಗಾಗಿ ಕಾಂಗ್ರೆಸ್ ಸರಕಾರಗಳು ರಾಜಿನಾಮೆ ಕೊಟ್ಟವು. ಮುಸ್ಲಿಂ ಲೀಗಿಗೂ ಕೋಮುವಾರು ಪ್ರಶ್ನೆಗೂ ಈ ರಾಜಿನಾಮೆಗಳಿಗೂ ಯಾವ ಸಂಬಂಧವೂ ಇರಲಿಲ್ಲ. ಕಾಂಗ್ರೆಸ್ಸಿನಮೇಲೆ ಕೈಮಾಡಲು ಜಿನ್ನಾ ಇದೇ ಸಮಯ ಉಪಯೋಗಿಸಿಕೊಂಡು ಪ್ರಾಂತಗಳು ಕಾಂಗ್ರೆಸ್ ರಾಜ್ಯಭಾರದಿಂದ ಬಿಡುಗಡೆಯಾದುದಕ್ಕೆ “ ಬಿಡುಗಡೆಯ ದಿನ” ಆಚರಿಸಿರೆಂದು ತನ್ನ ಅನುಯಾಯಿಗಳಿಗೆ ಆಜ್ಞೆ ಮಾಡಿದ. ಇದರಜೊತೆಗೆ ಕಾಂಗ್ರೆಸ್ಸಿನಲ್ಲಿದ್ದ ರಾಷ್ಟ್ರೀಯ ಭಾವನೆಯ ಮುಸ್ಲಿಮರಮೇಲೂ, ಹಿಂದೂ ಮುಸ್ಲಿಮರಿಬ್ಬರ ಗೌರವಕ್ಕೆ ಪಾತ್ರರಾದ ಕಾಂಗ್ರೆಸ್ ಅಧ್ಯಕ್ಷ ಮೌಲಾನ ಅಬುಲ್ ಕಲಾಮ್ ಅಜಾದರ ಮೇಲೂ ತುಚ್ಚ ನಿಂದೆಯನ್ನೂ ಮಾಡಿದ. “ಬಿಡುಗಡೆಯ ದಿನ”ವು ಕಳೆಕಟ್ಟಲಿಲ್ಲ. ಕೆಲವು ಕಡೆ ಮುಸ್ಲಿಮರೇ ವಿರೋಧ ಪ್ರದರ್ಶನ ನಡೆಸಿದರು. ಆದರೆ ಮನಸ್ಸಿನ ಕಹಿ ಮಾತ್ರ ಇನ್ನೂ ಹೆಚ್ಚಿತು, ಮತ್ತು ಜಿನ್ನಾಗೆ, ಆತನ ನೇತೃತ್ವದ ಮುಸ್ಲಿಂ ಲೀಗಿಗೆ ಕಾಂಗ್ರೆಸ್‌ನೊಡನೆ ಯಾವ ಒಪ್ಪಂದ ಮತ್ತು ಭಾರತದ ಸ್ವಾತಂತ್ರ ಸಾಧನೆ ಬೇಕಿಲ್ಲವೆಂದು ಸ್ಪಷ್ಟವಾಯಿತು. ಇದ್ದಂತೆ ಇರುವುದೇ ಅವರಿಗೆ ಬೇಕಾಗಿತ್ತು.
೬. ರಾಷ್ಟ್ರೀಯ ಯೋಜನಾ ಸಮಿತಿ
೧೯೩೮ ರ ಆಖೈರು ಹೊತ್ತಿಗೆ ಕಾಂಗ್ರೆಸ್ ಪ್ರೇರಣೆಯಿಂದ ರಾಷ್ಟ್ರೀಯ ಯೋಜನಾ ಸಮಿತಿ ಒಂದು ರಚಿತವಾಯಿತು. ಅದರಲ್ಲಿ ಹದಿನೈದು ಜನರು ಸದಸ್ಯರೂ, ಪ್ರಾಂತಸರಕಾರಗಳ ಪ್ರತಿನಿಧಿಗಳೂ, ನಮ್ಮೊಂದಿಗೆ ಸಹಕರಿಸಲೊಪ್ಪಿದ ಸಂಸ್ಥಾನ ಪ್ರತಿನಿಧಿಗಳೂ ಇದ್ದರು. ಸದಸ್ಯರಲ್ಲಿ ಪ್ರಸಿದ್ದರಾದ ಕೈಗಾರಿ ಕೋದ್ಯಮಿಗಳು, ಶ್ರಮಜೀವಿ ಸಂಘಗಳ ಕಾಂಗ್ರೆಸ್ ಪ್ರತಿನಿಧಿಗಳು, ಗ್ರಾಮೋದ್ಯೋಗ ಸಂಘದ