ಈ ಪುಟವನ್ನು ಪ್ರಕಟಿಸಲಾಗಿದೆ
ಪುನಃ ಅಹಮದ್ ನಗರದ ಕೋಟೆಯಲ್ಲಿ
೪೪೧

ವರದಿಗಳಿಂದ ನನಗೆ ಗೊತ್ತಿರುವ ಮಟ್ಟಿಗೆ ಭಾರತಾದ್ಯಂತ ನಡೆದ ಜನರ ಈ ದಂಗೆಯ ಫಲವಾಗಿ ಸುಮಾರು ಒಂದುನೂರು ಜನರು ಮಾತ್ರ ಮಡಿದರು. ಈ ದಂಗೆಗಳ ವ್ಯಾಪ್ತಿ, ದೇಶದ ವಿಸ್ತಾರ ಮತ್ತು ಪೋಲೀಸ ಹಿಂದಿನ ಹೋರಾಟಗಳನ್ನು ಗಮನಿಸಿದರೆ ಈ ಮರಣ ಸಂಖ್ಯೆಯು ಅತ್ಯಲ್ಪ. ಬಿಹಾರದಲ್ಲಿ ಮಾತ್ರ ಕೆನಡದೇಶದ ಇಬ್ಬರು ವೈಮಾನಿಕರನ್ನು ಜನರು ಅತಿ ಕೌರದಿಂದ ಕೊಲೆಮಾಡಿದರು. ಇದು ಬಿಟ್ಟರೆ ಸಾಮಾನ್ಯವಾಗಿ ಯಾವ ಜನಾಂಗದ್ವೇಷವೂ ಅವರಲ್ಲಿ ಇರಲಿಲ್ಲ.*

೧೯೪೨ರ ದಂಗೆಯಲ್ಲಿ ಸರಕಾರದ ಲೆಕ್ಕದಂತೆ ಪೊಲೀಸರ ಅಥವ ಸೈನಿಕರ ಗುಂಡಿನೇಟಿನಿಂದ ಮಡಿದವರು ೧೦೨೮, ಗಾಯಗೊಂಡವರು ೩೨೦೦. ಸರ್ಕಾರದ ವರದಿ ತಿಳಿಸುವಂತೆ ೯೩೮ ಬಾರಿ ಗುಂಡು ಹಾರಿಸಿರುವುದರಿಂದ ಮತ್ತು ಪೋಲೀಸರೂ ಸೈನಿಕರೂ ಚಲಿಸುತ್ತಿದ್ದ ಲಾರಿಗಳಲ್ಲಿ ಕುಳಿತು ಅನೇಕ ಬಾರಿ ಗುಂಡು ಹಾರಿಸುತ್ತಿದ್ದುದರಿಂದ ಈ ಸಂಖ್ಯೆ ಇನ್ನೂ ಅಧಿಕವಿರಬೇಕು; ಉದ್ದೇಶಪಟ್ಟು ಕಡಿಮೆ ಹೇಳಿರಬೇಕು. ಆ ಸಂಖ್ಯೆ ಇಷ್ಟೇ ಎಂದು ಖಚಿತ ಹೇಳಲು ಸಾಧ್ಯವಿಲ್ಲ. ಜನರ ಅಂದಾಜು ೨೫,೦೦೦ ಎಂದಿದ್ದರೂ, ಕೊನೆಯ ಪಕ್ಷ ಹತ್ತು ಸಾವಿರ ಜನರಾದರೂ ಮಡಿದಿರಬೇಕು.

ಅನೇಕ ಕಡೆ ನಗರಗಳಲ್ಲಿ ಮತ್ತು ಗ್ರಾಮಾಂತರಗಳಲ್ಲಿ ಸಹ ಬ್ರಿಟಿಷ್ ಆಡಳಿತವು ಹೇಗೆ ಕುಸಿದು ಬಿತ್ತು, ಪುನಃ ಸ್ಥಾಪಿಸಲು ಅನೇಕ ದಿನಗಳು ಮತ್ತು ವಾರಗಳು ಹಿಡಿಯಿತು ಎನ್ನುವುದೇ ಒಂದು ಆಶ್ಚರ್ಯ. ಬಿಹಾರದಲ್ಲಿ, ಬಂಗಾಲದ ಮಿಡ್ನಾಪುರ ಜಿಲ್ಲೆಯಲ್ಲಿ ಮತ್ತು ಯುಕ್ತ ಪ್ರಾಂತದ ಈಶಾನ್ಯ (South-east) ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇತ್ತು. ಪುನಃ ಗೆದ್ದ ಸಂಯುಕ್ತ ಪ್ರಾಂತದ ಬಲ್ಲಿಯ ಜಿಲ್ಲೆಯ ವಿಶೇಷ ನ್ಯಾಯಾಸ್ಥಾನಗಳ ಮುಂದೆ ಬಂದ ಅನೇಕ ಮೊಕದ್ದಮೆಗಳಲ್ಲಿ ಪ್ರಾಣಾಪಾಯದ ಅಥವ ಹಿಂಸೆಯ ಆರೋಪಣೆ ಯಾವುದೂ ಇರಲಿಲ್ಲ. ಸಾಮಾನ್ಯ ಪೋಲೀಸರಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು ಆಗಲಿಲ್ಲ. ೧೯೪೨ರ ಆರಂಭದಲ್ಲಿ ಶಸ್ತ್ರಸಜ್ಜಿತ ವಿಶೇಷ ಪೋಲಿಸ್ ಪಡೆಯೊಂದನ್ನು (Special Armed Constabulary) ನಿರ್ಮಿಸಲಾಯಿತು. ಜನರ ಪ್ರತಿಭಟನೆ ಮತ್ತು ದಂಗೆಗಳನ್ನು ಅಡಗಿಸಲು ಅವರಿಗೆ ವಿಶೇಷ ಶಿಕ್ಷಣ ಕೊಡಲಾಗಿತ್ತು. ಜನರನ್ನು ಹಿಂಸಿಸಿ ಅವರ ದಂಗೆ ಅಡಗಿಸುವುದರಲ್ಲಿ ಪ್ರಮುಖ ಪಾತ್ರವಹಿಸಿ ಈ ಪಡೆಯು ಐರ್ಲೆಂಡಿನ (Black and Taus) ಪಡೆಯಂತೆ ಅತಿ ಕ್ರೌರ್ಯದಿಂದ ವರ್ತಿಸಿತು. ಕೆಲವು ಗುಂಪು ಅಥವ ಪಂಗಡ ಬಿಟ್ಟು ಉಳಿದ ಭಾರತೀಯ ಸೈನ್ಯವನ್ನು ಈ ಕೆಲಸಕ್ಕೆ ಉಪಯೋಗಿಸಲಿಲ್ಲ. ಬ್ರಿಟಿಷ್ ಸೈನಿಕರು ಮತ್ತು ಗೂರ್ಖರನ್ನು ಮಾತ್ರ ಉಪಯೋಗಿಸಿದರು. ಇನ್ನು ಕೆಲವು ವೇಳೆ ಜನರ ಭಾಷೆ ತಿಳಿಯದ ದೂರದ ಪ್ರಾಂತಗಳಿಗೆ ಭಾರತೀಯ ಸೈನಿಕರನ್ನೂ, ವಿಶೇಷ ಪೋಲೀಸರನ್ನೂ ಕಳುಹಿಸುತ್ತಿದ್ದರು. ಅಲ್ಲಿ ಅವರು ಪರಕೀಯರಂತೆ ಜನರಿಂದ ದೂರ ಇರುತ್ತಿದ್ದರು.

ಜನಜಂಗುಳಿಯ ಪ್ರತಿಕ್ರಿಯೆ ಸ್ವಾಭಾವಿಕವಿದ್ದ ಪರಿಸ್ಥಿತಿಯಲ್ಲಿ ಸರಕಾರದ ಪ್ರತಿಕ್ರಿಯೆಯೂ
——————

* "British Soldier looks at India” ಎಂಬ ತನ್ನ ಗ್ರಂಥದಲ್ಲಿ ಕ್ಲೈವ್ ಬ್ರ್ಯಾನ್ಸನ್ ಒಂದು ಮಹತ್ವದ ವಿಷಯ ವಿವರಿಸಿದ್ದಾನೆ. ಬ್ರ್ಯಾನ್ಸನ್ ಒಬ್ಬ ಕಲಾವಿದ ಮತ್ತು ಸಾಮ್ಯವಾದಿ. ಸ್ಪೇನ್ ನಲ್ಲಿ ಅಂತರ ರಾಷ್ಟ್ರೀಯ ಪಡೆಯಲ್ಲಿ ಸೇವೆಮಾಡಿದ್ದ; ಮತ್ತು ೧೯೪೧ರಲ್ಲಿ ರಾಯಲ್ ಶಸ್ತ್ರ ಪಡೆಯಲ್ಲಿ ಸಾರ್ಜೆಂಟ್ ಆಗಿದ್ದ. ೧೯೪೨ರಲ್ಲಿ ತನ್ನ ರೆಟಿಮೆಂಟನೊಂದಿಗೆ ಭಾರತಕ್ಕೆ ಬಂದ. ೧೯೪೪ನೇ ಫೆಬ್ರುವರಿಯಲ್ಲಿ ಬರ್ಮದಲ್ಲಿ ಅರಕಾನ್ ಯುದ್ಧದಲ್ಲಿ ಆತನು ಮಡಿದ. ಕಾಂಗ್ರೆಸ್ ನಾಯಕರ ಬಂಧನವಾಗಿ ಮುಂಬೈ ನಗರದ ಜನರು ಕೋಪಾವೇಶದಿಂದ ಉದ್ರೇಕಗೊಂಡು ಗುಂಡಿನಬಾಯಿಗೆ ಆಹುತಿಯಾಗುತ್ತಿದ್ದಾಗ ೧೯೪೨ನೇ ಆಗಸ್ಟ್ ತಿಂಗಳಲ್ಲಿ ಆತನು ಮುಂಬೈಯಲ್ಲಿ ಇದ್ದ. ಬ್ರ್ಯಾನ್ಸನ್ "ನಿಮ್ಮ ರಾಷ್ಟ್ರೀಯ ಭಾವನೆ ಎಷ್ಟು ನಿರ್ಮಲವೂ, ಶುಭ್ರವೂ ಇದೆ. ಕಮ್ಯುನಿಸ್ಟ್ ಪಕ್ಷದ ಕಚೇರಿ ಎಲ್ಲಿದೆ ಎಂದು ನಾನು ಜನರನ್ನು ಕೇಳಿದೆ. ನಾನು ಸಮವಸ್ತ್ರ ಧರಿಸಿದ್ದೆ. ನನ್ನಂತೆ ಸಮವಸ್ತ್ರ ಧರಿಸಿದ್ದ ಸೈನಿಕರು ನಿಶ್ಯಸ್ತ್ರರಾದ ಭಾರತೀಯರನ್ನು ಗುಂಡಿಟ್ಟು ಕೊಟ್ಟುತ್ತಿದ್ದರು. ನನಗೂ ಸ್ವಲ್ಪ ಗಾಬರಿಯಾಗಿತ್ತು. ಜನರು ಏನುಮಾಡುತ್ತಾರೋ ಎಂದು ಸಂಶಯವಿತ್ತು. ಆದರೆ ನಾನು ಯಾರನ್ನು ಕೇಳಿದರೂ ಸಹಾಯಮಾಡಲು ಮುಂದೆ ಬಂದರೇ ವಿನಾ ಯಾರೂ ನನಗೆ ಅಗೌರವಮಾಡಲಿಲ್ಲ, ತಪ್ಪುದಾರಿ ತೋರಿಸಲಿಲ್ಲ” ಎಂದು ಹೇಳಿದ್ದಾನೆ.

33