ಈ ಪುಟವನ್ನು ಪ್ರಕಟಿಸಲಾಗಿದೆ
ಪುನಃ ಅಹಮದ್ ನಗರದ ಕೋಟೆಯಲ್ಲಿ
೪೪೩

ಶಿಕ್ಷೆಯನ್ನೋ ಮರಣ ದಂಡನೆಯನ್ನೋ ವಿಧಿಸಿದ್ದರು. ೧೯೪೨ರ ದಂಗೆಗೆ ಮುಂಚೆ ಮತ್ತು ಅನಂತರ ಬಂಗಾಲದಲ್ಲಿ ತಾಮ್ಲುಕ್ ಮತ್ತು ಕಾಂತಾಯ್ ಸಬ್ ಡಿವಿರ್ಸಗಳಲ್ಲಿ ೧೯೩ ಕಾಂಗ್ರೆಸ್ ಶಿಬಿರಗಳನ್ನೂ ಕಚೇರಿಗಳನ್ನೂ ಸುಟ್ಟಂತೆ ಬಂಗಾಲ ಸರ್ಕಾರವೇ ಹೇಳಿತ್ತು. ಈ ಪ್ರಚಂಡ ಚಳವಳಿಯ ಅನಾಹುತದಿಂದ ಸರ್ವನಾಶವಾಗಿದ್ದರೂ ಸರಕಾರದ ನೀತಿಯಲ್ಲಿ ಯಾವ ವ್ಯತ್ಯಾಸವೂ ಆಗಲಿಲ್ಲ. ಹಳ್ಳಿಗಳ ಮೇಲೆ ಮಿತಿಮೀರಿ ಪುಂಡುಗಂದಾಯ ಹೇರಿ ಹಣ ವಸೂಲು ಮಾಡಿದರು. ಒಟ್ಟು ೯೦ ಲಕ್ಷ ರೂಪಾಯಿಗಳ ದಂಡ ವಿಧಿಸಲಾಯಿತೆಂದೂ ಅದರಲ್ಲಿ ೭೮,೫೦,೦೦೦ ದಂಡ ವಸೂಲಾಯಿತೆಂದೂ ಅಮೆರಿಯೇ ಕಾಮನ್ಸ್ ಸಭೆಯಲ್ಲಿ ಹೇಳಿದ್ದ. ಅರಹೊಟ್ಟೆಯ ತಿರುಕರಿಂದ ಇಷ್ಟು ಹಣ ಹೇಗೆ ವಸೂಲಾಯಿತೆಂಬುದೇ ಒಂದು ಆಶ್ಚರ್ಯ. ಆದರೆ ೧೯೪೨ ರಲ್ಲಿ ಆಗಲಿ ಅಥವ ಅನಂತರ ಆಗಲಿ ಪೊಲೀಸರು ಗುಂಡು ಹಾರಿಸಿದ್ದರಿಂದ ಅಥವ ಬೆಂಕಿಹಚ್ಚಿದ್ದರಿಂದ ಯಾವುದರಿಂದಲೂ ಈ ಸುಲಿಗೆಯಿಂದಾದಷ್ಟು ಸಂಕಟ ಆಗಲಿಲ್ಲ ವಿಧಿಸಿದ ದಂಡವನ್ನೆಲ್ಲ ವಸೂಲುಮಾಡಿದ್ದು ಒಂದೇ ಅಲ್ಲದೆ ಆ ವಸೂಲಿ ಕಾಲದಲ್ಲಿ ಹೆಚ್ಚಿನ ಹಣವೂ ಮಾಯವಾಗುತ್ತಿತ್ತು.

ಸರಕಾರದ ಕ್ರೌರ್ಯಕ್ಕೆ ಮುಚ್ಚು, ಮರೆ, ಮತ್ತು ಮುಸುಕು ಯಾವುದೂ ಇಲ್ಲವಾಯಿತು. ಸರಕಾರದ ಅಧಿಕಾರ ಮತ್ತು ಶಕ್ತಿಯ ಸಂಕೇತವಾಗಿ ನಗ್ನ ಪಾಶವೀ ಶಕ್ತಿಯೊಂದೇ ತಾಂಡವವಾಡ ತೊಡಗಿತು. ಈ ರೀತಿ ಬ್ರಿಟಿಷರ ಅಧಿಕಾರ ಸ್ಥಾನದಲ್ಲಿ ರಾಷ್ಟ್ರೀಯ ಅಧಿಕಾರ ಸ್ಥಾಪನೆಗೆ ಮಾಡಿದ ಅಹಿಂಸಾತ್ಮಕ ಮತ್ತು ಹಿಂಸಾತ್ಮಕ ಹೋರಾಟವೆಲ್ಲ ಸಧ್ಯಕ್ಕೆ ವ್ಯರ್ಥವಾಗಿ ಬ್ರಿಟಿಷರ ಶಕ್ತಿಗೆ ಜಯದೊರೆತು, ಅದನ್ನು ಎದುರಿಸುವವರೇ ಇಲ್ಲವಾಯಿತು. ಆದ್ದರಿಂದ ಅದಕ್ಕೆ ಯಾವ ಮುಚ್ಚು ಮರೆಯೂ ಬೇಕಿರಲಿಲ್ಲ, ಬೇರೆ ಎಲ್ಲವೂ ಅಸಂಬದ್ಧ ಪ್ರಲಾಪ ಮತ್ತು ಅನವಶ್ಯಕ ಚರ್ಚೆಯಾಗಿ ಪಾಶವೀಶಕ್ತಿ ಮತ್ತು ಸಾಮರ್ಥ್ಯಗಳಿಗೆ ಮಾತ್ರ ಬೆಲೆ ಇದ್ದ ಸಮಯದಲ್ಲಿ ಭಾರತವು ಸೋತು ಹೋಯಿತು. ಬ್ರಿಟಿಷರ ಶಸ್ತ್ರ ಸಿದ್ಧತೆ ಮತ್ತು ಯುದ್ಧ ಪರಿ ಸ್ಥಿತಿಯಿಂದ ಜನರ ಮನಸ್ಸಿನಲ್ಲಿ ಹುಟ್ಟಿದ ಮನೋವಿಕಲ್ಪಗಳು ಮಾತ್ರವಲ್ಲದೆ ಸ್ವಾತಂತ್ರ್ಯಸಿದ್ಧಿಗಾಗಿ ಅವಶ್ಯವಾದ ಅಂತಿಮ ತ್ಯಾಗಮಾಡಲು ಭಾರತೀಯರನೇಕರು ಸಿದ್ಧರಿಲ್ಲದ ಕಾರಣ ಭಾರತಕ್ಕೆ ಸೋಲಾಯಿತು. ಈ ರೀತಿ ಭಾರತದಲ್ಲಿ ಪುನಃ ತಮ್ಮ ಸ್ವಾಮ್ಯ ಸ್ಥಾಪಿಸಿರುವುದಾಗಿಯೂ, ಆ ಹಿಡಿತ ಸಡಿಲಿಸಲು ಯಾವ ಅವಶ್ಯಕತೆಯೂ ಇಲ್ಲವೆಂದೂ ಬ್ರಿಟಿಷರು ಭಾವಿಸಿದರು.

೪. ವಿದೇಶಗಳಲ್ಲಿ ಪ್ರತಿಕ್ರಿಯೆ

ಸುದ್ದಿ ಯಾವುದೂ ಹೊರಗೆ ಹೋಗದಂತೆ ಸರ್ಪಗಾವಲು ಹಾಕಿದ್ದರಿಂದ ಭಾರತದಲ್ಲಿ ನಡೆದ ಸಂಗತಿ ಯಾವುದೂ ಹೊರಗಿನ ಪ್ರಪಂಚಕ್ಕೆ ತಿಳಿಯಲಿಲ್ಲ. ಭಾರತದ ವರ್ತಮಾನಪತ್ರಿಕೆಗಳು ಸರಕಾರದ ಒಪ್ಪಿಗೆ ಪಡೆಯದೆ ನಿತ್ಯದ ಸಮಾಚಾರ ಸಹ ಪ್ರಕಟಿಸುವಂತೆ ಇರಲಿಲ್ಲ; ವಿದೇಶಗಳಿಗೆ ಹೋಗುವ ಸುದ್ದಿಗಳಮೇಲೆ ಇನ್ನೂ ಬಲವಾದ ನಿರ್ಬಂಧವಿತ್ತು. ಇದೇ ಸಮಯದಲ್ಲಿ ವಿದೇಶಗಳಲ್ಲಿ ಸರಕಾರದವರ ಪ್ರಚಾರ ಏರ್ಪಡಿಸಿ ಸರಕಾರವು ತನಗೆ ಬೇಕಾದ ಸುಳ್ಳು ಸುದ್ದಿ ಹರಡಲು ಆರಂಭಿಸಿತು. ಅಮೆರಿಕೆಯ ವಿಶ್ವಾಸ ಅತ್ಯವಶ್ಯವೆಂದು ಕಂಡದ್ದರಿಂದ ಸಂಯುಕ್ತ ಸಂಸ್ಥಾನದಲ್ಲಿ ಈ ಪ್ರಚಾರಕಾರ ಬಹು ಬಿರುಸಿನಿಂದ ನಡೆಯಿತು. ಆಂಗ್ಲ ಮತ್ತು ಭಾರತೀಯ ಉಪನ್ಯಾಸಕರು ಮತ್ತು ಪ್ರಚಾರಕರು ನೂರಾರು ಜನರನ್ನು ಕಳುಹಿಸಿ ಪ್ರಚಂಡ ಪ್ರಚಾರ ನಡೆಸಿದರು. ಯುದ್ಧದ ಭಯ ಮತ್ತು ಹೊರೆಯಿಂದ ನಿತ್ಯ ನರಳುತ್ತಿದ್ದ ಆಂಗ್ಲರಿಗೆ ತಮ್ಮ ಕಷ್ಟ ಸಮಯದಲ್ಲಿ ಭಾರತೀಯರು ಇನ್ನೂ ಹೆಚ್ಚು ಸಂಕಟಕೊಟ್ಟ ಕಾರಣ ಭಾರತೀಯರ ವಿರುದ್ಧ ಅಸಮಾಧಾನ ಹುಟ್ಟಲು ಯಾವ ಪ್ರಚಾರವೇ ಬೇಕಿರಲಿಲ್ಲ. ತಾವು ಮಾಡಿದುದೆಲ್ಲ ನ್ಯಾಯ ಎಂಬ ಭಾವನೆ ಬ್ರಿಟಿಷರಲ್ಲಿ ಬೇರೂರಿತ್ತು. ಏಕ ಪಕ್ಷೀಯ ಪ್ರಚಾರದಿಂದ ಈ ಅಸಮಾಧಾನಕ್ಕೆ ಇನ್ನೂ ಪುಟ ಕೊಟ್ಟಂತಾಯಿತು. ಬೇರೆ ದೃಷ್ಟಿ ಅರಿಯಲು ಅಸಮರ್ಥರಾಗಿದ್ದುದೇ ಅವರ ಸಾಮರ್ಥ್ಯವಾಯಿತು. ತಾವು ಮಾಡಿದುದೆಲ್ಲ ನ್ಯಾಯವೆಂದು ಸಾಧಿಸಿದರು; ಏನಾದರೂ ಅಚಾತುರ್ಯ ನಡೆದರೆ ಅದಕ್ಕೆ ಬ್ರಿಟಿಷರ ಸದುದ್ದೇಶ ಅರ್ಥ ಮಾಡಿಕೊಳ್ಳಲು ಅಸಮರ್ಥರಾದ ದಂಗೆಕೋರರೇ ಕಾರಣ ಎಂದು ದೂರಲಾರಂಭಿಸಿದರು. ಬ್ರಿಟಿಷರ