ಈ ಪುಟವನ್ನು ಪ್ರಕಟಿಸಲಾಗಿದೆ
೪೭೨
ಭಾರತ ದರ್ಶನ

ಅಸಂಬದ್ಧ, ಅದರಿಂದ ಮುಖ್ಯ ವಿಷಯವೇ ಮಸಕಾಗುತ್ತದೆ. ಐತಿಹಾಸಿಕ ದೃಷ್ಟಿಯಿಂದ ಜಾತಿಯ ಬೆಳೆವಣಿಗೆಯ ಅಭ್ಯಾಸಕ್ಕೆ ಸ್ವಲ್ಪ ಬೆಲೆ ಇದೆ. ಆದರೆ ಜಾತಿ ಪದ್ಧತಿ ಹುಟ್ಟಿದ ಯುಗಕ್ಕೆ ಮತ್ತೊಮ್ಮೆ ಹಿಂದಿರುಗಲು ಸಾಧ್ಯವಿಲ್ಲ. ಇಂದಿನ ಸಮಾಜ ರಚನೆಯಲ್ಲಿ ಅದಕ್ಕೆ ಸ್ಥಾನವಿಲ್ಲ. ಯೋಗ್ಯತೆಯೊಂದನ್ನೇ ಒರೆಗಲ್ಲಾಗಿ ಇಟ್ಟುಕೊಂಡು, ಸರ್ವರಿಗೂ ಅವಕಾಶಕೊಟ್ಟರೆ ಇಂದು ಜಾತಿಗಿರುವ ಪ್ರಾಮುಖ್ಯತೆ ಎಷ್ಟೋ ಕಡಮೆಯಾಗುತ್ತದೆ, ತಾನೇ ತಾನಾಗಿ ಹೋಗುತ್ತದೆ. ಜಾತಿಯ ಹೆಸರಿನಲ್ಲಿ ಹಿಂದಿನ ಕಾಲದಲ್ಲಿ ಕೆಲವು ಪಂಗಡಗಳನ್ನು ತುಳಿಯಲಾಯಿತು; ತಾತ್ವಿಕ ಮತ್ತು ಪಾಂಡಿತ್ಯ ಜ್ಞಾನವು ಉದ್ಯೋಗ ಧರ್ಮದಿಂದ ದೂರವಾಯಿತು; ದರ್ಶನ ಶಾಸ್ತ್ರಕ್ಕೂ ಪ್ರಸಕ್ತ ಜೀವನ ಮತ್ತು ಅದರ ಸಮಸ್ಯೆಗಳಿಗೂ ಸಂಬಂಧ ಕಡಿದು ಹೋಯಿತು. ಅದೊಂದು ಸಂಪ್ರದಾಯ ಶರಣ ತಳಹದಿಯನ್ನೇ ಅವಲಂಬಿಸಿದ ಕುಲೀನದ ಪಂಥವಾ ಯಿತು. ಆಧುನಿಕ ಸ್ಥಿತಿಗತಿಗಳಿಗೆ, ಪ್ರಜಾಪ್ರಭುತ್ವ ದೃಷ್ಟಿಗೆ ಇದು ಸಂಪೂರ್ಣ ವಿರುದ್ಧವಿರುವುದರಿಂದ ಈ ದೃಷ್ಟಿ ಇಂದು ಪೂರ್ಣ ಹೋಗಬೇಕು. ಸಮಾಜದ ಪಂಗಡಗಳ ಔದ್ಯೋಗಿಕ ರಚನೆ ಉಳಿಯಬಹುದು. ಆದರೆ ಆಧುನಿಕ ಕೈಗಾರಿಕೋದ್ಯಮದ ವೈಶಿಷ್ಟದಿಂದ ಅನೇಕ ಹೊಸ ಉದ್ಯೋಗಗಳಿಗೆ ಆಸ್ಪದ ದೊರಕಿ ಅನೇಕ ಹಳೆಯ ಉದ್ಯಮಗಳು ನಾಶವಾಗಿ ವಿಶೇಷ ಪರಿವರ್ತನೆ ಆಗಬಹುದು. ಈಗ ಎಲ್ಲಿ ನೋಡಿದರೂ ಉದ್ಯೋಗ ಧರ್ಮದಂತೆ ಸಮಾಜ ರಚಿಸುವ ಪ್ರಯತ್ನ ನಡೆಯುತ್ತಿದೆ. ಆಜನ್ಮಸಿದ್ಧ ಹಕ್ಕುಗಳ ಸ್ಥಾನ ದಲ್ಲಿ ಉದ್ಯೋಗ ಧರ್ಮದ ಹಕ್ಕುಗಳಿಗೆ ಪ್ರಾಧಾನ್ಯತೆ ದೊರೆಯುತ್ತಿದೆ. ಪ್ರಾಚೀನ ಭಾರತೀಯ ಆದರ್ಶದ ಧ್ವನಿಯೂ ಇದೇ ಇತ್ತು.

ಯುಗಧರ್ಮವು ಯೋಗ್ಯತೆಗೆ ಪ್ರಾಧಾನ್ಯತೆ ಕೊಟ್ಟಿದ್ದರೂ ಆಚರಣೆಯಲ್ಲಿ ಅದಕ್ಕೆ ಮನ್ನಣೆ ಇಲ್ಲ. ಒಬ್ಬ ಮನುಷ್ಯ ಇನ್ನೊಬ್ಬನ ಗುಲಾಮನಾಗಿರಬಾರದೆಂಬ ಸಂಕುಚಿತ ಅರ್ಥದಲ್ಲಿ ಗುಲಾಮಗಿರಿ ನಾಶ ಮಾಡಿದ್ದೇವೆ. ಆದರೆ ಹಳೆಯ ಗುಲಾಮಗಿರಿಗಿಂತ ಕಠಿಣವಾದ ಇನ್ನೊಂದು ಬಗೆಯ ಗುಲಾಮಗಿರಿ ಪ್ರಪಂಚದಲ್ಲಿ ಎಲ್ಲೆಡೆಯಲ್ಲೂ ತಾಂಡವವಾಡುತ್ತಿದೆ. ವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಆರ್ಥಿಕ ಮತ್ತು ರಾಜಕೀಯ ಪದ್ಧತಿಗಳು ಮಾನವ ಜನಾಂಗಗಳಮೇಲೆ ಅಧಿಕಾರ ಮಾಡುತ್ತ ಅವರನ್ನು ನಿರ್ಜಿವ ವಸ್ತುಗಳಂತೆ ಕಾಣುತ್ತಿವೆ; ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಆಸ್ತಿಯಾಗಲು ಅವಕಾಶವಿಲ್ಲದಿದ್ದರೂ ಒಂದು ದೇಶ ಅಥವ ಜನಾಂಗವೇ ಇನ್ನೊಂದರ ಆಸ್ತಿಯಾಗಬಹುದು. ಈ ರೀತಿ ಸಾಮೂಹಿಕ ಗುಲಾಮಗಿರಿಗೆ ಯಾವ ಆತಂಕವೂ ಇಲ್ಲ. ನಮ್ಮ ಕಾಲದ ಇನ್ನೊಂದು ವಿಶೇಷಲಕ್ಷಣವೆಂದರೆ ಜನಾಂಗ ದ್ವೇಷ, ಭರ್ತೃ ರಾಷ್ಟ್ರಗಳು ಮಾತ್ರವಲ್ಲದೆ ಭರ್ತೃ ಜನಾಂಗಗಳೂ ಇವೆ.

ಆದರೂ ಯುಗಧರ್ಮ ಗೆಲ್ಲಲೇಬೇಕು. ಭಾರತದಲ್ಲಿ ಸಮಾನತೆಯೇ ನಮ್ಮ ಗುರಿಯಾಗಬೇಕು. ಅಂದರೆ ಪ್ರತಿಯೊಬ್ಬ ವ್ಯಕ್ತಿಯೂ ದೈಹಿಕ ಬೌದ್ಧಿಕ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಸಮವೆಂದಾಗಲಿ ಅಥವ ಸಮಗೊಳಿಸಲು ಸಾಧ್ಯವೆಂದಾಗಲಿ ಅಲ್ಲ; ಆದರೆ ಎಲ್ಲರಿಗೂ ಸಮಾನ ಅವಕಾಶವಿರಬೇಕೆಂದು. ಯಾವ ವ್ಯಕ್ತಿ ಅಥವ ಪಂಗಡಕ್ಕೂ ರಾಜಕೀಯ, ಆರ್ಥಿಕ ಅಥವ ಸಾಮಾಜಿಕ ಪ್ರತಿಬಂಧವಿರಕೂಡದು. ಅಂದರೆ ಮಾನವೀಯತೆಯಲ್ಲಿ ವಿಶ್ವಾಸವಿರಬೇಕು; ಅವಕಾಶಕೊಟ್ಟರೆ ಮುಂದುವರಿಯದ ಅಥವ ತನಗೆ ಕಂಡ ಮಾರ್ಗದಲ್ಲಿ ವಿಕಾಸಗೊಳ್ಳದ ಯಾವ ಪಂಗಡ ಅಥವ ಜನಾಂಗವೂ ಇಲ್ಲವೆಂಬ ನಂಬಿಕೆ ಇರಬೇಕು. ಯಾವದೇ ಗುಂಪಿನ ಹಿನ್ನಡೆ ಅಥವ ಅಧೋಗತಿ ಅದರ ಅಂತರ್ಗತ ಅಶಕ್ತತೆಯಿಂದಲ್ಲ; ಆದರೆ ಮುಖ್ಯ ವಾಗಿ ಅವಕಾಶಗಳ ಅಭಾವದಿಂದ ಮತ್ತು ಇತರ ಪಂಗಡಗಳ ದುರುಪಯೋಗದಿಂದ ಎಂಬುದರ ಅರಿವು. ಆಧುನಿಕ ಪ್ರಪಂಚದಲ್ಲಿ ನಿಜವಾದ ಪ್ರಗತಿ ಮತ್ತು ಮುನ್ನಡೆ ಎಂದರೆ ರಾಷ್ಟ್ರೀಯವಿರಲಿ, ಅಂತರ ರಾಷ್ಟ್ರೀಯವಿರಲಿ-ವಿಶೇಷತಃ ಅದೊಂದು ಸಾಮೂಹಿಕ ವಿಷಯ, ಯಾವ ಒಂದು ಗುಂಪು ಹಿಂದೆ ಬಿದ್ದರೂ ಇತರರನ್ನೂ ಅದು ಹಿಂದಕ್ಕೆಳೆಯುತ್ತದೆ, ಎಂಬ ಜ್ಞಾನ. ಆದ್ದರಿಂದ ಎಲ್ಲರಿಗೂ ಸಮಾನ ಅವಕಾಶ ಮಾತ್ರ ಸಾಲದು, ವಿದ್ಯೆಯಲ್ಲಿ ಆರ್ಥಿಕ ಉನ್ನತಿಯಲ್ಲಿ ಸಂಸ್ಕೃತಿ ಪ್ರಗತಿಯಲ್ಲಿ ಹಿಂದುಳಿದವರು ತಮಗಿಂತ ಮುಂದಿರುವವರ ಜೊತೆಗೆ ಬಂದು ಸೇರಿಕೊಳ್ಳಲು ಅನುಕೂಲಿಸುವಂತೆ ಅವರಿಗೆ ವಿಶೇಷ ಅವಕಾಶ ಕಲ್ಪಿಸ ಕಲ್ಪಿಸಬೇಕು. ಭಾರತದಲ್ಲಿ ಎಲ್ಲರಿಗೂ ಈ ರೀತಿ ಅವಕಾಶದ ಮಹಾದ್ವಾರ ತೆರೆಯಲು ಪ್ರಯತ್ನ ಮಾಡಿದರೆ