ಅದೃಷ್ಟಹೀನ ಬಡವರನ್ನು ಕಡೆಗಣ್ಣಿನಿಂದ ನೋಡುವಂತೆ ಕೈಗಾರಿಕೋದ್ಯಮದಲ್ಲಿ ಪ್ರಗತಿಪಡೆದ ಧನಿಕ ರಾಷ್ಟ್ರಗಳು ಹಿಂದೆ ಬಿದ್ದು ಬಡತನದಲ್ಲಿ ನರಳುವ ರಾಷ್ಟ್ರಗಳನ್ನು ಅಲಕ್ಷೆ ಮಾಡುತ್ತವೆ. ತನ್ನ ಅಪಾರ ಹಣ ಮತ್ತು ಅವಕಾಶಗಳಿಂದ ಉನ್ನತಮಟ್ಟ ಏರಿ, ಉತ್ತಮ ಅಭಿರುಚಿ ಪಡೆದು ಶ್ರೀಮಂತ ಬಡವರನ್ನು ದುರಭ್ಯಾಸಿಗಳು, ಸಂಸ್ಕೃತಿಹೀನರು ಎಂದು ತೆಗಳುತ್ತಾನೆ. ಅವರ ಪರಿಸ್ಥಿತಿ ಅವರು ಉತ್ತಮಪಡಿಸಿಕೊಳ್ಳಲು ಅವಕಾಶ ಕೊಡದೆ ಅವರ ಬಡತನ ಮತ್ತು ಅದರ ಪರಿಣಾಮಗಳನ್ನೇ ಕಾರಣಮಾಡಿಕೊಂಡು ಪುನಃ ಆ ಅವಕಾಶ ನಿರಾಕರಿಸುತ್ತಾನೆ.
ಭಾರತ ದರಿದ್ರ ದೇಶವಲ್ಲ. ಒಂದು ದೇಶ ಸಂಪದ್ಯುಕ್ತವಿರಲು ಅವಶ್ಯವಾದ ಎಲ್ಲ ಪ್ರಕೃತಿ ಸಂಪತ್ತೂ ಭಾರತದಲ್ಲಿ ಇದೆ; ಆದರೂ ಭಾರತೀಯರು ಬಡವರು. ವಿಶ್ವತೋಮುಖ ಬೆಳೆದು ಹಬ್ಬಿದ ಶ್ರೇಷ್ಠ ಸಂಸ್ಕೃತಿ ಪರಂಪರೆ ಇದೆ. ಇನ್ನೂ ಅತ್ಯುನ್ನತಿ ಪಡೆಯಲು ಶಕ್ತಿಯೂ ಇದೆ. ಆದರೆ ಅನೇಕ ನವ ವಿಕಸನಗಳು, ಪೋಷಕ ವಸ್ತುಗಳು ಆ ಸಂಸ್ಕೃತಿಗೆ ಅವಶ್ಯವಿವೆ. ಈ ಅಭಾವಕ್ಕೆ ಕಾರಣ ಅನೇಕ ಇರಬಹುದು; ಆದರೆ ಉದ್ದೇಶಪಟ್ಟು ಅವಕಾಶ ಕೊಡದಿರುವುದೇ ಮುಖ್ಯ ಕಾರಣ. ಆದ್ದರಿಂದ ಜನರ ಆತ್ಮಶಕ್ತಿ ಕೆರಳಿ ಬಂಧನಗಳನ್ನೆಲ್ಲ ಕಳಚಿಕೊಂಡು ಅವಶ್ಯಕತೆ ಪೂರೈಸಬೇಕು. ಅದೇ ಇಂದು ಭಾರತದಲ್ಲಿ ನಡೆಯುತ್ತಿರುವುದು. ಭಾರತದಲ್ಲಿ ಪ್ರಕೃತಿದತ್ತ ಸಂಪತ್ಸಮೃದ್ಧಿ ಇದೆ, ಬುದ್ಧಿಶಕ್ತಿ ಇದೆ, ಅತ್ಯಲ್ಪ ಕಾಲದಲ್ಲಿ ಪ್ರಗತಿ ಪಡೆಯಲು ಕೌಶಲವೂ, ಶಕ್ತಿಯೂ ಇವೆ. ಯುಗಯುಗಗಳ ಸಂಸ್ಕೃತಿ ಮತ್ತು ಆತ್ಮಾನುಭವಗಳ ಸಂಪತ್ಸಮೃದ್ಧಿಯ ಹಿನ್ನೆಲೆ ಇದೆ. ತಾತ್ವಿಕ ಮತ್ತು ಪ್ರಾಯೋಗಿಕ ವಿಜ್ಞಾನಗಳೆರಡರಲ್ಲೂ ಪ್ರಗತಿಪಡೆದು ಕೈಗಾರಿಕೋದ್ಯಮದಲ್ಲಿ ಒಂದು ಮಹಾರಾಷ್ಟ್ರವಾಗಲು ಶಕ್ತಿ ಇದೆ; ಅನೇಕ ಬಂಧನಗಳಿಂದ ವಿಜ್ಞಾನ ಸಂಶೋಧನೆಗೆ ಭಾರತೀಯ ಯುವಕ ಯುವತಿಯರಿಗೆ ಅವಕಾಶಗಳು ಇಲ್ಲದಿದ್ದರೂ ವಿಜ್ಞಾನ ಪ್ರಪಂಚದಲ್ಲಿ ಸಹ ಭಾರತೀಯರ ಪಾತ್ರ ಆಗಲೇ ಸುಪ್ರಸಿದ್ಧ ಇದೆ. ದೇಶ ವೈಶಾಲ್ಯ ಮತ್ತು ದೇಶದ ಸಾಧ್ಯಾಸಾಧ್ಯತೆ ದೃಷ್ಟಿಯಿಂದ ಅದು ಹೆಚ್ಚಲ್ಲ. ಆದರೆ ದೇಶದ ಸಮಸ್ತ ಶಕ್ತಿಗಳನ್ನು ಅಣಿಗೊಳಿಸಿ ಅವಕಾಶ ಕಲ್ಪಿಸಿಕೊಟ್ಟರೆ ಏನು ಸಾಧಿಸಬಹುದು ಎಂಬುದರ ಕಿರುನೋಟ ಅದು. ಆದರೆ ಎರಡು ದೊಡ್ಡ ಆತಂಕ ಅದಕ್ಕೆ ಒದಗಬಹುದು, ಅಂತರ ರಾಷ್ಟ್ರೀಯ ಸಮಸ್ಯೆಗಳು ಮತ್ತು ಭಾರತದ ಮೇಲೆ ಹೊರಗಿನವರ ಒತ್ತಾಯ ಮೊದಲನೆಯದು, ದೇಶದಲ್ಲಿ ಒಮ್ಮತ ಧ್ಯೇಯದ ಅಭಾವ ಎರಡನೆಯದು. ಆದರೆ ದೇಶದ ಒಮ್ಮತ ದೃಷ್ಟಿಯೇ ಅಂತ್ಯದಲ್ಲಿ ಮುಖ್ಯ ನಿರ್ಧಾರಕ ವಸ್ತುವಾಗುತ್ತದೆ. ಭಾರತವನ್ನು ಎರಡು ಮೂರು ತುಂಡುಮಾಡಿ ಒಂದು ರಾಜಕೀಯ ಮತ್ತು ಆರ್ಥಿಕ ಕ್ಷೇತ್ರವಾಗಿ ಮುಂದುವರಿಯಲು ಅವಕಾಶ ಕೊಡದಿದ್ದರೆ ಅದರ ಪ್ರಗತಿ ಬಹಳ ಕ್ಷೀಣಿಸುತ್ತದೆ. ಪ್ರತ್ಯಕ ದೌರ್ಬಲ್ಯ ಹೆಚ್ಚುವುದಂತೂ ಸರಿ, ಅದಕ್ಕೂ ಹೆಚ್ಚಿನ ದುಷ್ಪರಿಣಾಮವೆಂದರೆ ಪುನಃ ಒಂದುಗೂಡಿಸ ಬೇಕೆನ್ನುವವರಿಗೂ ಅದನ್ನು ವಿರೋಧಿಸುವವರಿಗೂ ಒದಗುವ ವೈಮನಸ್ಸು ಮತ್ತು ಅಂತಃಕಲಹಗಳು. ಹೊಸ ಪ್ರತಿಗಾಮಿ ಶಕ್ತಿಗಳು ಹುಟ್ಟಿ ಎಲ್ಲ ಪರಿವರ್ತನೆ ಮತ್ತು ಪ್ರಗತಿಯನ್ನು ವಿರೋಧಿಸುತ್ತವೆ. ಒಂದು ಹೊಸ ದುಷ್ಕರ್ಮ ನಮ್ಮ ಭವಿಷ್ಯದ ಬೆನ್ನು ಹತ್ತುತ್ತದೆ. ಒಂದು ತಪ್ಪು ಹೆಜ್ಜೆಯಿಂದ ಮತ್ತೊಂದು, ಹಿಂದಿನ ಕಥೆಯೂ ಇದೇ; ಮುಂದೆಯೂ ಅದೇ ಪಾಡೋ ಏನೋ? ಆದರೂ ಇನ್ನೂ ಹೆಚ್ಚಿನ ಕೇಡಿನಿಂದ ಪಾರಾಗಲು ಕೆಲವುವೇಳೆ ತಪ್ಪು ಹೆಜ್ಜೆ ಇಡುವುದೇ ಅವಶ್ಯವಾಗುತ್ತದೆ. ರಾಜಕೀಯದಲ್ಲಿ ದೊಡ್ಡ ವಿರೋಧಾ ಭಾಸವೇ ಇದು. ಯಾವ ವಿಪತ್ತಿನಿಂದ ಪಾರಾಗಲು ಇಂದು ಒಂದು ತಪ್ಪು ಹೆಜ್ಜೆ ಇಡುವೆವೊ ಆವಿಪತ್ತನ್ನು ಎದುರಿಸುವುದು ಕ್ಷೇಮವೇ ಅಥವ ಈ ತಪ್ಪು ಹೆಜ್ಜೆ ಇಡುವುದು ಕ್ಷೇಮವೇ ಎಂದು ಕೇಳಿದರೆ ಯಾರೂ ಉತ್ತರ ಹೇಳಲಾರರು. ಅನೈಕ್ಯತೆಗಿಂತ ಐಕ್ಯತೆ ಉತ್ತಮ. ಆದರೆ ಬಲಾತ್ಕರದ ಐಕ್ಯತೆ ಒಂದು ನಟನೆ, ಬಹು ಅಪಾಯಕರ ಮತ್ತು ಎಂದಾದರೂ ಸಿಡಿದು ಒಡೆಯಬಹುದು. ಮನಸ್ಸು ಮತ್ತು ಹೃದಯಗಳು ಒಂದಾಗಿ, ನಾವೇ ಅವರು ಅವರೇ ನಾವು, ಐಕ್ಯತೆ ಒಡೆಯ ಬಂದ ಶತ್ರುವನ್ನು ಒಟ್ಟಿಗೆ ನಿಂತು ಎದುರಿಸಬೇಕು ಎಂಬ ಭಾವನೆ ಇದ್ದರೆ ಅದು ಐಕ್ಯತೆ, ಆ ಬಗೆಯ ಮೂಲ ಐಕ್ಯತೆ ಭಾರತದಲ್ಲಿ ಇದೆ ಎಂದು ನನ್ನ ಭಾವನೆ, ಆದರೆ ಇತರ ಶಕ್ತಿಗಳು ಅದರ ಮೇಲೆ ಕೋಟೆ ಕಟ್ಟಿ ಅದನ್ನು ಅದುಮಿವೆ, ಈ ಇತರ