ಈ ಪುಟವನ್ನು ಪರಿಶೀಲಿಸಲಾಗಿದೆ

ಪುನಃ ಅಹಮದ್‌ನಗರದ ಕೋಟೆಯಲ್ಲಿ

೫೦೬


ಇನ್ನೊಂದರಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಇಬ್ಬರೂ ಮರೆಯುತ್ತಾರೆ” ಎಂದು ಪ್ಲೇಟೋ
ಹೇಳಿದ್ದಾನೆ.
ಪ್ರಸಿದ್ದ ವಿಜ್ಞಾನಿಗಳಲ್ಲಿ ಅತ್ಯಂತ ಶ್ರೇಷ್ಠನಾದ ಐನ್‌ಸ್ಟೀನ್ “ ಇಂದು ಮಾನವ ಕುಟುಂಬದ
ಅದೃಷ್ಟ ನೈತಿಕ ಬಲವನ್ನು ಅವಲಂಬಿಸಬೇಕಾದಷ್ಟು ಅವಶ್ಯಕತೆ ಹಿಂದೆ ಯಾವಾಗಲೂ ಇರಲಿಲ್ಲ. ಮಾನವ
ಜೀವನದಲ್ಲಿ ಆನಂದ ಮತ್ತು ಸುಖಬೇಕಾದರೆ ಎಲ್ಲ ಕಡೆಯೂ ತ್ಯಾಗ ಮತ್ತು ಆತ್ಮಸಂಯಮ ಮನೋ
ಭಾವ ಬರಬೇಕು” ಎಂದಿದ್ದಾನೆ. 'ಗರ್ವದಿಂದ ಮೆರೆಯುವ ಈ ವಿಜ್ಞಾನ ಯುಗದಿಂದ ಏಕಾ ಏಕಿ
ಪೂರ್ವದ ಋಷಿಗಳ ಬಳಿಗೆ ಕರೆದೊಯ್ಯುತ್ತಾನೆ ; ಅಧಿಕಾರಮೋಹ ಮತ್ತು ಲಾಭದಾಸೆಯ ಬೆನ್ನು ಬಿಟ್ಟು
ಭಾರತಕ್ಕೆ ಚಿರಪರಿಚಯವಿದ್ದ ತ್ಯಾಗದೃಷ್ಟಿಯ ಕಡೆ ಕರೆದೊಯ್ಯುತ್ತಾನೆ. ಈ ಪ್ರಪಂಚದ ಅತುಲೈಶ್ವರ್ಯ
ವೆಲ್ಲ ಮಾನವ ಪ್ರಗತಿಗೆ ಕಾರಣವಾಗಲಾರದು; ಪರಮ ಶ್ರದ್ಧಾಳುಗಳಿಂದ ಸಹ ಅದು ಸಾಧ್ಯವಿಲ್ಲ.
ಮಹಾನುಭಾವರೂ ನಿರ್ಮಲ ಚಾರಿತ್ರರೂ ಆದ ಸತ್ಪುರುಷರ ಆದರ್ಶಮಾತ್ರ ಉನ್ನತ ಧೈಯಗಳನ್ನು
ಮಹಾಕಾರ್ಯಗಳನ್ನು ಸಾಧಿಸಬಹುದು. ಹಣ ಬೆಳೆಸುವುದು ಸ್ವಾರ್ಥದೃಷ್ಟಿ ಮಾತ್ರ. ಹಣವಿದ್ದವರನ್ನು
ಸದಾ ದುರ್ಮಾರ್ಗಕ್ಕೆಳೆಯುವುದೇ ಹಣದ ಕೆಲಸ ” ಎಂಬ ಐನ್‌ಸ್ಟೀನನ ಮಾತುಗಳು ಇಂದಿನ ಅನೇಕ
ವಿಜ್ಞಾನಿಗಳಿಗೆ ಪ್ರಾಯಶಃ ಒಪ್ಪಿಗೆಯಾಗಲಾರದು.
ನಾಗರಿಕತೆಯಷ್ಟೆ ಹಳೆಯದಾದ ಈ ಪ್ರಶ್ನೆ ಬಿಡಿಸುವುದರಲ್ಲಿ ಹಿಂದಿನ ದಾರ್ಶನಿಕರಿಗೆ ದೊರೆಯದ
ಅನೇಕ ಸೌಲಭ್ಯ ಸಲಕರಣೆಗಳು ಇಂದಿನ ವಿಜ್ಞಾನಿಗಳಿಗೆ ದೊರೆತಿದೆ; ಅನಾದಿಯಿಂದ ಸಂಗ್ರಹಿಸಿಟ್ಟ
ಅಪಾರ ಜ್ಞಾನಭಾಂಡಾರವಿದೆ. ತನ್ನ ಸಾರ್ಥಕತೆ ಸಾಧಿಸಿಕೊಟ್ಟ ಒಂದು ಮಾರ್ಗವಿದೆ. ಪ್ರಾಚೀನರಿಗೆ
ಅಗೋಚರವಾಗಿದ್ದ ಅನೇಕ ಕ್ಷೇತ್ರ ಪ್ರವೇಶಮಾಡಿ ನಿರ್ದಿಷ್ಟ ಮಾರ್ಗ ತೋರಿಸಿದೆ. ಮನುಷ್ಯನ ಜ್ಞಾನ
ವೃದ್ಧಿಗೊಳಿಸಿ ಅನೇಕ ವಿಷಯಗಳ ಮೇಲೆ ಅವನ ಅಧಿಕಾರ ಹೆಚ್ಚಿಸಿರುವುದರಿಂದ ಮಠಾಧಿಕಾರಿಗಳು
ಗಾಢರಹಸ್ಯಗಳೆಂದು ಅವುಗಳನ್ನು ದುರುಪಯೋಗಪಡಿಸುವಂತಿಲ್ಲ. ಆದರೆ ಅದರಲ್ಲಿ ಕೆಲವು ತೊಂದರೆ
ಗಳೂ ಇವೆ. ಈ ಜ್ಞಾನ ಸಂಪತ್ತಿನ ಹೊರೆಯೇ ಮನುಷ್ಯನನ್ನು ದುರ್ಬಲಗೊಳಿಸಿ ಅದರ ಪೂರ್ಣತೆಯ
ಸಂಯೋಜಕದೃಷ್ಟಿ ಪಡೆಯದಂತೆ ಅಂಧನನ್ನಾಗಿ ಮಾಡಿದೆ. ಯಾವುದೋ ಒಂದು ಭಾಗ ವಿಶ್ಲೇಷಣ
ಮಾಡಿ, ಅಭ್ಯಾಸದಲ್ಲಿ ಮಗ್ನನಾಗಿ, ಆ ಒಂದು ಭಾಗ ಮಾತ್ರ ಅರ್ಥಮಾಡಿಕೊಂಡು ಅದಕ್ಕೂ ಪೂರ್ಣ
ಜ್ಞಾನಕ್ಕೂ ಇರುವ ಸಂಬಂಧ ಕಾಣದೆ ಹೋಗುತ್ತಾನೆ. ವಿಜ್ಞಾನ ತನ್ನ ಕೈಗೆ ಕೊಟ್ಟ ಶಕ್ತಿಗಳಿಗೆ ತಾನೇ
ಬಲಿಯಾಗಿ ಅವುಗಳ ಸುಳಿಗೆ ಸಿಕ್ಕು ಎಳೆದು ತೇಲಿ ಯಾವುದೋ ಕಾಣದ ದಡ ಸೇರುತ್ತಾನೆ. ಆಧುನಿಕ
ಜೀವನದ ವೇಗ, ದುರ್ಘಟನೆಯ ಮೇಲೆ ದುರ್ಘಟನೆ ಇವುಗಳ ದೆಸೆಯಿಂದ ನಿಷ್ಪಕ್ಷಪಾತ ಸತ್ಯಾನ್ವೇಷಣೆ
ನಡೆಯುವಂತಿಲ್ಲ. ನಿಜವಾದ ಜ್ಞಾನಾನ್ವೇಷಣೆ, ಅತ್ಯಾವಶ್ಯಕ ಶಾಂತಿ ಮತ್ತು ನಿರ್ಲಿಪ್ತ ಭಾವನೆ ದೊರೆಯ
ದಂತೆ ಅವಸರದಲ್ಲಿ ಬುದ್ದಿ ಓಡಿಸಲಾಗುತ್ತಿದೆ. "ಜ್ಞಾನಮಾರ್ಗ ಶಾಂತಿಯುಕ್ತವಿದೆ. ಅದರ ಕಾವು
ಕಂಪಿಸುವುದಿಲ್ಲ.”
ನಾವು ಜೀವಿಸುವುದು ಪ್ರಾಯಶಃ ಮಾನವ ಕುಲದ ಒಂದು ಮಹಾಯುಗ, ಅದಕ್ಕೆ ಅವಶ್ಯವಾದ
ಬೆಲೆ ನಾವು ತರಲೇಬೇಕು. ಎಲ್ಲ ಯುಗಾಂತರಗಳಲ್ಲಿ ಜೀರ್ಣವಾದುದು ಬಿಟ್ಟು ಹೊಸದು ಸೃಷ್ಟಿಸುವ
ಪ್ರಯತ್ನ ನಡೆದಿದೆ. ಆ ಪ್ರಯತ್ನದಲ್ಲಿ ಘರ್ಷಣೆ, ಅಸ್ಥಿರತೆ ಕಂಡು ಬರುವುದು ಸಹಜ. ಜೀವನದಲ್ಲಿ
ಯಾವುದೂ ಶಾಶ್ವತವಲ್ಲ, ಸ್ಥಿರವಲ್ಲ, ಅಪರಿವರ್ತಿತವಲ್ಲ ; ಪರಿವರ್ತನೆ ಇಲ್ಲದೆ ಜೀವನವೇ
ಶೂನ್ಯವಾಗುತ್ತದೆ. ಹೆಚ್ಚೆಂದರೆ ಸಾಪೇಕ್ಷ ನಿತ್ಯತೆ ಕಾಣಬಹುದು, ಚಲನಾತ್ಮಕ ಸಮತೋಲನೆ ನೋಡ
ಬಹುದು. ಜೀವನವು ಮಾನವ ಮಾನವನಿಗೂ ಮಾನವನ ಸನ್ನಿವೇಶಗಳಿಗೂ ನೈಸರ್ಗಿಕ, ಬೌದ್ಧಿಕ
ಮತ್ತು ನೈತಿಕ ಮಟ್ಟದಲ್ಲಿ ನಿರಂತರ ನಡೆಯುವ ಒಂದು ಹೋರಾಟ, ಈ ಮಂಥನದಿಂದ ನೂತನ
ವಸ್ತುಗಳೂ, ಭಾವನೆಗಳೂ ರೂಪುಗೊಳ್ಳುತ್ತಿವೆ. ಮಾನವನಲ್ಲಿ, ಪ್ರಕೃತಿಯಲ್ಲಿ ಜನನ ಮರಣ ಒಂದರ
ಹಿಂದೆ ಒಂದು ಪ್ರಗತಿಯೇ ಜೀವನತತ್ವ, ನಿಶ್ಚಲತೆಯಲ್ಲ, ಪ್ರಗತಿ ಒಂದು ನಿರರ್ಗಳ ಅನಂತವಾಹಿನಿ.
ಇಂದಿನ ಪ್ರಪಂಚದ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳಲ್ಲಿ ಅಧಿಕಾರದಾಸೆ ಇದ್ದೇ ಇದೆ.