ಈ ಪುಟವನ್ನು ಪ್ರಕಟಿಸಲಾಗಿದೆ
ಶರಸೇತು ಬಂಧನ
97

ಸೂಚನೆ ನೀಡುವುದಿಲ್ಲ. ಆಶು ಭಾಷಣದ ಸ್ವತಂತ್ರ ಪಾಠವನ್ನು ತಯಾರಿಸುವ ರಂಗವಾದ ಯಕ್ಷಗಾನ ರಂಗಪ್ರಯೋಗಕ್ಕೆ, ಹಿನ್ನೆಲೆಯಾಗಿರುವ ಪದ್ಯಪಾಠ ಹೀಗೆಯೇ ಇರಬೇಕು. ಅರ್ಜುನನು ಗರ್ವಿಸಿ ಮಾತಾಡಿದನೆಂಬ ವಿಚಾರವೂ ಕೂಡ, ಹನುಮಂತನ ಮಾತಿನಲ್ಲೆ ಇದೆ, ಕವಿ ನಿರೂಪಣೆಯಾಗಿ ಇಲ್ಲ, -“ಏನುವದೆಂದೆಯೋ । ಮಾನವ ಗರ್ವದಿ”-ಆಂತೆಯೇ ಅರ್ಜುನನ ಹನುಮಂತನ ಬಗೆಗೆ ಹೇಳುವನು “ಎಲವೊ ಮರ್ಕಟನೆ ಗರ್ವದಿ ನೀನು । ಸುಮ್ಮನುಲಿಯಲು”-ಅಂದರೆ ಗರ್ವವೆಂಬುದು ಪರಸ್ಪರ ಆರೋಪ, ಕವಿ ಇಲ್ಲಿ ತಟಸ್ಥ. ಹನುಮಂತನ ಪದ್ಯಗಳಲ್ಲಿ ರಾಮಾಯಣದ ಯಾವುದೇ ಘಟನೆಯ ಪ್ರಸ್ತಾಪವಿಲ್ಲ. ಇಂತಹ ಒಂದು ನಾಟಕೀಯ ಕೌಶಲ, ಮತ್ತು ರಚನಾ ವಿನ್ಯಾಸ ಯಕ್ಷಗಾನ ಪ್ರಸಂಗ ಸಾಹಿತ್ಯದಲ್ಲಿ ವಿಶಿಷ್ಟವಾದದ್ದು, ಅನನ್ಯವಾದದ್ದು.

ಉತ್ತಮ ಪ್ರಸಂಗ ರಚನೆಯ ಅಪೇಕ್ಷಿತ ಗುಣಗಳ ದೃಷ್ಟಿಯಿಂದಲೂ ಈ ಪ್ರಸಂಗ, ಅತ್ಯುತ್ತಮ ಕೃತಿಗಳಲ್ಲೊಂದಾಗಿದೆ. ಅರ್ಥಗಾರಿಕೆಗೆ ಸೂಕ್ತ ಅವಕಾಶ, ವಿವಿಧ ಗತಿಗಳ ಬಂಧ ವೈವಿಧ್ಯ, ಸಂವಾದ ತಂತ್ರ, ಸರಳವಾಗಿದ್ದು ಸಂಪುಷ್ಟವಾಗಿರಬೇಕಾದ ಹಾಡುಗಬ್ಬದ ಗುಣ, ಪದಬಂಧಗಳಿಂದ ಚಿತ್ರ ನಿರ್ಮಾಣ, ನೃತ್ಯಾಭಿನಯದ ಅನುಕೂಲ-ಇವೆಲ್ಲ ದೃಷ್ಟಿಗಳಿಂದಲೂ ಇದು ಉತ್ತಮ ಮಟ್ಟದ ಪ್ರಸಂಗ.

ಪದ್ಯರೂಪಗಳು : ಕತೆಯ ಆರಂಭದಲ್ಲಿ, ಕಥಾರಂಭಕ್ಕೆ ಬಳಸುವ ಸಂಪ್ರದಾಯದ ಝಂಪೆತಾಳದ ಬಂಧ, ನಂತರ ಹನುಮಂತನಿಗೆ ಅಷ್ಟತಾಳದ ಒಂದು ಬಂಧ, ಬಳಿಕ ವೀರ ರಸಕ್ಕೆ 'ಸೌರಾಷ್ಟ್ರ ರೈವುಡೆ' ಮಾರವಿಏಕ, ಭೈರವಿ ಅಷ್ಟದ ಮಟ್ಟುಗಳು, ಸೇತುಬಂಧ-ಭಂಗಗಳಿಗೆ ಮಾರವಿ ಏಕತಾಳದ ಬೇರೊಂದು ಮಟ್ಟು, ಹನುಮಂತನು ಮೂದಲಿಸುವಲ್ಲಿ ಆರ್ಯಾಸವಾಯ ಬಂಧ ಬ್ರಾಹ್ಮಣನ ಪ್ರವೇಶಕ್ಕೊಂದು ಭಾಮಿನಿ, ನಾಲ್ಕನೆಯ ಸೇತುವೆಯನ್ನು ಕಟ್ಟಲು ಮಟ್ಟೆತಾಳದ ಬಂಧ, ರಾಮನ ಸಾಂತ್ವನ ವಾಕ್ಯಗಳಿಗೆ ಅಷ್ಟತಾಳದ ರಚನೆ-ಹೀಗೆ ಈ ಚಿಕ್ಕ ಭಾಗದಲ್ಲಿ, ರಸ ಸನ್ನಿವೇಶಗಳನ್ನರಿತು ಸಾಕಷ್ಟು ವೈವಿದ್ಯ ಪೂರ್ಣವಾಗಿ ಪದ್ಯ ರಚನೆ ಮಾಡಿದುದು ಕಾಣುತ್ತಿದೆ.