ಮಾತುಗಾರಿಕೆಯಲ್ಲಿ ಪರಂಪರೆ-ಪ್ರಯೋಗ ಎಂಬ ವಿಚಾರವನ್ನು ಯೋಚಿಸುವಾಗ, ಪ್ರಧಾನವಾಗಿ ಬರುವಂತಹುದು ಆಶಯದ ವಿಚಾರ, ಪ್ರಸಂಗವು ಮತ್ತು ಅದರ ಪ್ರದರ್ಶನವು ಪ್ರತಿಪಾದಿಸುವ ಮೌಲ್ಯ, ವಿಷಯ ಅಭಿಪ್ರಾಯಗಳ ಪ್ರಶ್ನೆ, ಒಂದೇ ಕಥೆಯು, ಒಂದೇ ವಸ್ತುವು ಕಾಲ ದೇಶ ಪರಿಸ್ಥಿತಿಗಳಿಗೆ ಅನುಸಾರವಾಗಿ, ಭಿನ್ನವಾದ ಅರ್ಥವನ್ನು ಹೊಳೆಯಿಸುತ್ತದೆ. ಎಂಬುದು ಸರ್ವವಿದಿತವಷ್ಟೆ. ಅಂದರೆ, ಅಭಿವ್ಯಕ್ತಿಸುವ ಕಲಾವಿದನನ್ನು ಹೊಂದಿ, ಮಾಧ್ಯಮವನ್ನು ಹೊಂದಿ, ಕಾಲವನ್ನು ಹೊಂದಿ, ಸಾಮಾಜಿಕ ಆಪೇಕ್ಷೆಯನ್ನು ಅನುಸರಿಸಿ ಸಾಹಿತ್ಯಾರ್ಥವು ಬದಲಾಗುತ್ತ ಹೋಗುತ್ತದೆ.
ಯಕ್ಷಗಾನದ ಅರ್ಥದಾರಿಗೆ, ಆಕರವಾಗಿರುವುದು ಪ್ರಸಂಗವೆಂಬ ಹಾಡು ಗಬ್ಬದ ಪದ್ಯಗಳು. ಇದನ್ನು ಸ್ಥೂಲವಾಗಿ, ಆಧರಿಸ್ಸಿ ಮಾತು ಸಾಗುತ್ತದೆ. “ಪ್ರಸಂಗವನ್ನು ಬಿಟ್ಟು ಅರ್ಥ ಹೇಳಬಾರದು" "ಪದ್ಯವನ್ನು ಬಿಡದೆ ಅರ್ಥ ಹೇಳಬೇಕು” ಎಂಬ ತತ್ವಗಳು, ಯಕ್ಷಗಾನದಲ್ಲಿ, ಅಂಗೀಕೃತ ಕಾರ್ಯವಿಧಾನಕ್ಕೆ ಸೇರಿವೆ. ಆದರೆ, ತತ್ವವನ್ನು ಈ ಅತಿರೇಕಕ್ಕೆ ಕೊಂಡು ಹೋಗಬಾರದು. ಅರ್ಥ ದಾರಿಯು ಪ್ರಸಂಗದ ಅನುವಾದಕನಲ್ಲ. ಈ ಪ್ರಸಂಗವೆಂಬುದು, ಒಂದು ನೆಲೆ ಯಲ್ಲಿ ನಿಮಿತ್ತ ಮಾತ್ರ. - ಆಶು ಭಾಷಣದ ಮೂಲಕ, ಸಂಭಾಷಣೆ, ಸನ್ನಿವೇಶ: ಪಾತ್ರ, ಸಂದೇಶಗಳು ನಿರ್ಮಾಣವಾಗಿ ಅಭಿವ್ಯಕ್ತವಾಗುವಂತಹ ಯಕ್ಷಗಾನ - (ಹಾಗೂ ತತ್ಸಮಾನ ರಂಗಪ್ರಕಾರಗಳಲ್ಲಿ) ಮೂಲ ನಾಟಕಕಾರನ (ಅಂದರೆ ಪ್ರಸಂಗ ಕರ್ತೃ, ಹಾಡುಗಳ ಮೂಲಕ ಕಥೆಯನ್ನು ಹೇಳಿರುವವನು) ಸ್ಥಾನವು ಗೌಣವಾದುದೇ ಸರಿ, ತಾಳಮದ್ದಲೆಯ, ಅಥವಾ ಆಟದ ಮಾತುಗಾರಿಕೆ ಯನ್ನು ಕೇಳಿದ ಅನುಭವಿಗಳಿಗೆ ಇದ್ದು ವೇದ್ಯ.
ಪ್ರಸಂಗದ ಪದ್ಯಗಳು ಪ್ರದರ್ಶನದ 'ಸ್ಥಿರ ಪಾಠ, ಮಾತಾಡುವ 'ಅರ್ಥ'ವು 'ಚರಪಾಠ', ಹಾಗಾಗಿ ಒಂದೊಂದು ಪ್ರದರ್ಶನವೂ ಒಂದೊಂದು ಪಠ್ಯ (Text) ಆಗುತ್ತದೆ. ಹೀಗಾಗಿ, ಕಲಾವಿದನ ಪ್ರಯೋಗ ಭೂಮಿಯು ಬಹು ವಿಸ್ತಾರವಾದುದು. ಇದನ್ನು ಬಳಸಿಕೊಂಡು, ಯಕ್ಷಗಾನರಂಗ ಮಾತು ಗಾರರು ಆಟ, ತಾಳಮದ್ದಲೆಗಳೆರಡರಲ್ಲೂ ಅಸಾಧಾರಣವಾದ ಪ್ರಯೋಗ ಗಳನ್ನು ಮಾಡಿರುವುದನ್ನು ಕಾಣುತ್ತೇವೆ.