ಈ ಪುಟವನ್ನು ಪ್ರಕಟಿಸಲಾಗಿದೆ
ಸೃಜನಶೀಲತೆಯ ಸಂದರ್ಭ
161

ಕೂಡಿ, ಸೃಷ್ಟಿಶೀಲ ಪ್ರಯೋಗಗಳ ಮೂಲಕ ಕಲೆಯನ್ನು ಶ್ರೀಮಂತಗೊಳಿಸುವುದಿಲ್ಲವಾದರೂ, ಕಲೆಯ ರೂಪವನ್ನು (Form) ಶುದ್ಧವಾಗಿ ಉಳಿಸಿಕೊಡುತಾನೆ. ಇದು ಒಂದು ಮುಖ್ಯವಾದ ಕೆಲಸ, ಏಕೆಂದರೆ ಪ್ರಯೋಗಶೀಲನಾದವನು ಪ್ರಯೋಗ ಮಾಡುವುದಕ್ಕೆ ರಂಗವು ಸಿದ್ಧವಾಗಿ ಇರಬೇಕಷ್ಟೆ? ಶ್ರೀಮಂತವಾದ ಮಾಧ್ಯಮವೊಂದು ಉಳಿದು ಬಾರದಿದ್ದಲ್ಲಿ, ಸೃಜನಶೀಲನು ಪ್ರಯೋಗಮಾಡುವುದು ಯಾವುದರಲ್ಲಿ? ಹಾಗಾಗಿ ಅನುಸರಣ ಶೀಲರು, ಪರಂಪರೆ ಉಳಿಯಲು ಕಾರಣರು. ಇವರಲ್ಲಿ 'ಸ್ವಂತಿಕೆ'ಯ ಅಂಶ ಇರುತ್ತದೆ. ಆದರೆ ಅದರ ಪ್ರಯೋಗ ಸ್ಪುಟವಾಗಿ ಸೃಷ್ಟಿಶೀಲವಾಗಿ ಆಗುವುದಿಲ್ಲ.

ಸೃಜನಶೀಲನಾದ ಕಲಾಕಾರ ಇವೆರಡೂ ಹಂತಗಳಿಗಿಂತ ಮುಂದೆ ಹೋಗಿ ಕಲೆಯ ಬೆಳವಣಿಗೆಯಲ್ಲಿ ತನ್ನದಾದ ಕೊಡುಗೆ ಕೊಡುತ್ತಾನೆ. ಒಂದು ಕಲಾ ಮಾಧ್ಯಮದ ಸದ್ಯದ ಸ್ಥಿತಿಗಿಂತಲೂ, ಅದರ ಸಾಧ್ಯತೆಯ ಬಗೆಗೆ ಅವನ ಗಮನ ಹೆಚ್ಚು ಇರುತ್ತದೆ. ಈಯೊಂದು ಮಾಧ್ಯವದ ಮೂಲಕ, ಏನನ್ನು ಸಾಧಿಸಬಹುದು ? ಅಭಿವ್ಯಕ್ತಿಯಲ್ಲಿ ನಯ ನಾಜೂಕುಗಳನ್ನು ತರಬಹುದು ? ಈ ಕಲೆಯ ಸಂವಹನ, ವಿನ್ಯಾಸ, ಪರಿಣಾಮಗಳನ್ನು ವಿಸ್ತರಿಸುವುದು ಹೇಗೆ ? ಇದು ಸೃಜನಶೀಲನ ದೃಷ್ಟಿ, ಅವನಿಂದಲೇ ಕಲೆಗೆ ಹೊಸ ಹೊಸ ಮುಖ ಮೂಡುತ್ತವೆ. ಪ್ರಾಯೋಗಿಕ ಮಾರ್ಗಗಳು ತೆರೆಯಲ್ಪಡುತ್ತವೆ. ಕಲೆ ಶ್ರೀಮಂತವಾಗುವುದು ಇಂತಹವರಿಂದ.

ಯಕ್ಷಗಾನದಂತಹ ಕಲೆಯ ಸಂದರ್ಭದಲ್ಲಿ ಸೃಜನಶೀಲತೆಯ ಪ್ರಶ್ನೆ ಜಟಿಲವಾದದ್ದು. ಒಂದು ಸಮಕಾಲೀನ ಮಾಧ್ಯಮಕ್ಕೆ (ಉದಾ : ಚಿತ್ರ, ನಾಟಕ ಇತ್ಯಾದಿ) ಮತ್ತು ಏಕಮಾಧ್ಯಮ (ಉದಾ : ಶಬ್ದ, ನಾದ, ದೃಶ್ಯ) ಕಲೆಗಳಿಗೆ ಇರುವ ಈ ರೀತಿಯ ಸೃಜನಶೀಲ ಸ್ವಾತಂತ್ರ್ಯ ಯಕ್ಷಗಾನಕ್ಕಿಲ್ಲ. ಅಂದರೆ, ಒಬ್ಬ ಕಾದಂಬರಿಕಾರನೋ, ಕವಿಯೋ, ಚಿತ್ರಕಾರ ಹೊಂದಿರುವ ಸ್ವಾತಂತ್ರದ ವ್ಯಾಪ್ತಿ ಯಕ್ಷಗಾನ ಕಲಾವಿದನಿಗಿಲ್ಲ. ಮೇಲಾಗಿ ಇಲ್ಲಿ ಗಾನ, ಚಿತ್ರ, ವೇಷ, ಸಾಹಿತ್ಯ-ಎಂಬ ನಾಲ್ಕು ಮಾಧ್ಯಮಗಳು ರಂಗಕಲೆಯಾಗಿ ಮೂಡಿಬರಬೇಕಾಗಿವೆ. ಅಷ್ಟೇ ಅಲ್ಲ ಯಕ್ಷಗಾನ, ಕಥಕಳಿ ಮುಂತಾದ