ಈ ಪುಟವನ್ನು ಪ್ರಕಟಿಸಲಾಗಿದೆ
ಮಾಲತೀ

ಅವನ ಆಶ್ರಿತೆ ಮಾತ್ರವಾಗಿದ್ದಳೇ ಹೊರ್ತು ಅವರವರಿಗೆ ಪರಸ್ಪರ ರಕ್ತಸಂಬಂಧವಾವದೂ ಇಲ್ಲ―ಈ ಕಾರಣಗಳಿಂದಲೂ ಅವಳ ಹೃದಯದಲ್ಲಿ ವ್ಯಥೆಯುಂಟಾಗಿರಬಹುದು. ಆದರೆ ಆ ಕಾರಣಗಳೆಲ್ಲಾ ಅವಳ ಮನಸ್ಸಿಗೆ ಹೊಳಿಯಲಿಲ್ಲ.ತನಗೇನು ಕಷ್ಟ ಬಂದಿತೋ ರಮೇಶನು ನುಡಿದ ದುಃಖಕರವಾದ ಮಾತುಗಳಾವವೋ, ಅವಾವೂ ಅವಳಿಗೆ ಗೊತ್ತಾಗಲಿಲ್ಲ. ಅಕಾರಣವಾಗಿ ಮರ್ಮವನ್ನು ಭೇದಿಸುವ ತೀವ್ರವಾದಾವದೋ ಒಂದು ಯಾತನೆಯು ಅವಳ ಹೃದಯವನ್ನು ಪೀಡಿಸುತ್ತಿದ್ದಿತು.

ನೋಡುತ್ತಿದ್ದ ಹಾಗೆ ಚೌತಿಯ ಚಂದ್ರನು ಮೇಘದಲ್ಲಿ ಮುಚ್ಚಿ ಹೋದನು――ಉದ್ಯಾನವನ್ನೂ ನದಿಯನ್ನೂ ಪೃಥ್ವಿಯನ್ನೂ ಅವುಗಳೊಂದಿಗೆ ಚಿರಹಾಸ್ಯಮಯಿಯಾಗಿದ್ದಾ ಮಾಲತಿಯ ಹೃದಯವನ್ನೂ ಅಂಧಕಾರದಿಂದ ಮುಚ್ಚಿ ಚಂದ್ರನು ಅಸ್ತಮಿತನಾದನು. ಹುಡುಗಿಯು ದುಃಖಾತಿಶಯದಿಂದ ಜ್ಞಾನವಿಲ್ಲದವಳ೦ತೆ ಮೌನವಾಗಿ ಅಳುವುದಕ್ಕೆ ತೊಡಗಿದಳು.

ರಮೇಶನು ಅವಳ ಮನದ ಭಾವವನ್ನು ತಿಳಿದವನಾಗಿ, ಮಾಲತಿ! ಅಳುವುದೇಕೆ? ನೀನೆನಗೆ ಸೋದರಿಯಾಗದಿದ್ದರೂ ತಂಗಿಯಾಗಿರುತ್ತಿ? ನಾನು ನಿನಗೆ ಸೋದರನಾಗದಿದ್ದರೂ ಅಣ್ಣನಾಗಿದ್ದೇನೆ, ನಿನಗೂ ನನಗೂ ಸಂಬಂಧವಿಲ್ಲದಿದ್ದರೂ ಚಿಕ್ಕಂದಿನಿಂದ ಬೆಳೆದುಬಂದ ಸ್ನೇಹವಾವಾಗಲೂ ಹೋಗದು, ಅದು ಸಾಯುವತನಕ ಹೃದಯದಲ್ಲಿ ಬದ್ದ ಮೂಲವುಳ್ಳದು ದಾಗಿರುವುದು. ನೀನೆನಗೆ ಸೋದರಿಯಾಗಿದ್ದರೂ ನಾನೀಗ ನಿನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚು ಪ್ರೀತಿಸುತ್ತಿರಲಿಲ್ಲ, ಈಗ ನಿನ್ನ ಮೇಲಿರುವ ನನ್ನ ವಿಶ್ವಾಸವು ಶುದ್ಧವಾದುದು, ಎಂದಿಗೂ ವಿಚ್ಛೇದವಾಗತಕ್ಕುದಲ್ಲ,ದೇವತೆಗಳಲ್ಲಿಯೂ ಅಂತಹ ವಿಶ್ವಾಸವು ದುರ್ಲಭವಾದುದು ಎಂದು ಹೇಳಿದನು.

ಮಾಲತಿಯ ಕಣ್ಣೀರನ್ನೊರಸಿದನು. ದುಃಖಮಯವಾಗಿದ್ದ ಮಾಲತಿಯ ಮೂರ್ತಿಯು ಪುನಃ ಪ್ರಫುಲ್ಲವಾಯಿತು. ಮಾಲತಿಗೆ ಮತ್ತೇನು ಬೇಕಾಗಿದ್ದಿತು? ಮೊದಲಿನ ಸ್ನೇಹ-ಮೊದಲಿನ ಮಮತೆ ಅವಳಿಗೆ ಮತ್ತಾವದರ ದುಃಖ!