ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

147

ಅನಾಥಾಶ್ರಮಕ್ಕೆ ಒಂದು ಲಕ್ಷ ಸಹಾಯಧನ ಕೊಟ್ಟೆ. ಅಲ್ಲಿ ವಸತಿಶಾಲೆ
ನಡೆಯುತ್ತದೆ, ಅನಾಥ ಮಕ್ಕಳಿಗಾಗಿ. ನಿಮ್ಮ ತಂಡದ ನೃತ್ಯ ರೂಪಕ ಕಾರ್ಯ
ಕ್ರಮ ನಗರದ ನೂತನ ನಾಟ್ಯ ಮಂದಿರದಲ್ಲಿ ಏರ್ಪಡಿಸುತ್ತೇನೆ. ಸಾವಿರ ಸೀಟು
ಗಳಿವೆ. ಒಂದು ಟಿಕೆಟಿಗೆ ನೂರು ರೂಪಾಯಿ. ಸರಕಾರದ ಅಧಿಕಾರಿಗಳೇ
ಮಾರುತ್ತಾರೆ. నిಮ್ಮ ಪ್ರತಿಷ್ಠಾನದ ವಿನಂತಿಯನ್ನು ಆಧರಿಸಿ ಇಲ್ಲಿ ಪತ್ರಿಕಾ
ಪ್ರಚಾರ ನಡೆಯುತ್ತದೆ. ಕಾರ್ಯಕ್ರಮಕ್ಕೆ ರಾಜ್ಯಪಾಲರ ಅಧ್ಯಕ್ಷತೆ. ಮುಖ್ಯ
ಮಂತ್ರಿಯಿಂದ ಉದ್ಘಾಟನೆ.ಸಾಕೆ ?
ಈ ತಿಂಗಳು ನಾಲ್ಕನೆಯ ಭಾನುವಾರ ಕಾರ್ಯಕ್ರಮ ಇಟ್ಟುಕೊಂಡರೆ
ಅನುಕೂಲ. ಒಂದೆರಡು ದಿನ ಮುಂಚಿತವಾಗಿ ಬನ್ನಿ. ಒಪ್ಪಿಗೆ ಸೂಚಿಸಿ
ಟೆಲಿಗ್ರಾಮ್ ಕೊಡಿ. ಫೋನ್ ಮಾಡಿದರೆ ಇನ್ನಷ್ಟು ಒಳ್ಳೆಯದು, ನಾನು
ಸಿಗದಿದ್ದರೆ ನನ್ನ ಆಪ್ತಕಾರ್ಯದರ್ಶಿಗೆ ತಿಳಿಸಿಬಿಡಿ.
ಎಲ್ಲರಿಗೂ ಆದರದ ನಮಸ್ಕಾರ.

ವಿಶ್ವಾಸದ
ಸೌದಾಮಿನಿದೇವಿ
ಮುಖ್ಯಮಂತ್ರಿ, ಕಿಷ್ಕಿಂಧೆ

ಸೌದಾಮಿನಿ ಕೋರಿದ್ದಂತೆ ಟೆಲಿಗ್ರಾಮ್ ಬಂತು. 'ಒಪ್ಪಿಗೆ ವಿರಾಮ
ಉಪಕೃತರು' ಫೋನ್ ಸಂದೇಶವನ್ನು ಮುಖ್ಯಮಂತ್ರಿಯ ಸೂಚನೆಯಂತೆ ಪರಶು
ರಾಮನೇ ಬರೆದುಕೊಂಡ. "ಮುಖ್ಯಮಂತ್ರಿಯವರ ಓಲೆಯಿಂದ ಉತ್ತೇಜಿತರಾಗಿ
ದ್ದೇವೆ.ಮೂರು ದಿನ ಮುಂಚೆಯೇ ತಲಪುತ್ತೇವೆ. ಒಂದು ಕಂಪಾರ್ಟ್ ಮೆಂಟನ್ನೆ
ನಮಗಾಗಿ ರಿಸರ್ವ್ ಮಾಡಿಸುತ್ತೇವೆ. ಉಳಿದದ್ದೆಲ್ಲ ಸಮಕ್ಷಮ. ಸಹಸ್ರ ಸಹಸ್ರ
ಧನ್ಯವಾದ."
ಓದಿ ಹೇಳಿದಾಗ, "ನಾನು ಫೋನ್ ಎತ್ತಿಕೊಂಡಿದ್ದರೆ ಅವಳು ಮೂರು ಆರು
ಒಂಭತ್ತು ಮಿನಿಟುಗಳಾದರೂ ಎಳೀತಿದ್ಲು,"ಎಂದು ಸೌದಾಮಿನಿ ಪ್ರತಿಕ್ರಯಿಸಿ,
"ನಿಧಿ ಸಂಗ್ರಹ ಮೇಲ್ವಿಚಾರಣೆ-ಇವೆಲ್ಲದಕ್ಕೆ ಒಬ್ಬ ವಿಶೇಷ ಅಧಿಕಾರಿಯನ್ನು
ನೇಮಿಸಬಹುದು. ರಾಮರಾಜು ಆಗಬಹುದಾ ? (ಆಗಬಹುದು ಎಂದು ಪರಶು
ರಾಮ ತಲೆಯಾಡಿಸಲು) ಅವನಿಗೊಂದು ನೋಟ್ ರೆಡಿ ಮಾಡು. ಸಂಜೆಯೊಳಗೆ
ನನ್ನನ್ನು ನೋಡಬೇಕೂಂತ ಆ ಅನಾಥಾಶ್ರಮದ ಸುಲೋಚನಾಬಾಯಿಗೆ ಹೇಳಿ
ಕಳಿಸು" ಎಂದಳು.
...ಸುಲೋಚನಾಬಾಯಿ ಬಂದೊಡನೆ ಭಾರತಿ ಅನಾಥಾಶ್ರಮ ಪ್ರತಿಷ್ಠಾನದ
ಮನವಿಯನ್ನು ಮುಖ್ಯಮಂತ್ರಿ ಆಕೆಗೆ ಓದಲು ಕೊಟ್ಟಳು.
"ಭವ್ಯ ಯೋಜನೆ," ಎಂದಳು ಆಕೆ, ಓದಿದ ಬಳಿಕ.
ಮುಖ್ಯಮಂತ್ರಿ ಮಂದಹಾಸ ಸೂಸುತ್ತ, "ಇದಕ್ಕೆ ಪ್ರೇರಣೆ ನನ್ನದೇ.