ಈ ಪುಟವನ್ನು ಪರಿಶೀಲಿಸಲಾಗಿದೆ

 ಮಿಂಚು 245

   ....ಬೆಳಗಿನಿಂದ ನಡೆದುದೆಲ್ಲ ಒಂದೊಂದಾಗಿ ಕಣ್ಣಿಗೆ ಕಟ್ಟಿತು. ಶಾಸಕಾಂಗ ಸಭೆಯಲ್ಲಿ ತನ್ನ ವರ್ತನೆ ಅದ್ಭುತವಾಗಿತ್ತು. ಯಾವ ಅಭಿನೇತ್ರಿಗೆ ಕಡಮೆ ತನ್ನ ನಟನೆ? ಯಾವ ವಕೀಲ ತನಗೆ ಸಾಟಿ ?... ಗಂಟೆಗಳು ಕಳೆದಿವೆ. ಆದರೂ ನಾಯಕನ ಆಯ್ಕೆಯನ್ನು ಸ್ಮರಿಸಿದಂತೆಲ್ಲ ಈಗಲೂ ಗು೦ಡಿಗೆ ಬಡಿತ ತೀವ್ರಗೊಳ್ಳುತ್ತಿದೆಯಲ್ಲ ?
   ರಾಜ್ಯಪಾಲರಲ್ಲಿ ಸಂತೋಷ ಕೂಟ ಮುಗಿದಿರಬಹುದು, ಸಂಪುಟದ ರಚನೆ - ಬಗ್ಗೆ ಆಪ್ತಾಲೋಚನೆ ಎಲ್ಲಿ ? ಇದನ್ನು ವಿಶ್ವಂಭರ ತನ್ನ ಮನೆಯಲ್ಲೇ ನಡೆಸುತ್ತಿರಬಹುದು. ಅದು ಹೆಚ್ಚುಗಾರಿಕೆಯಲ್ಲವೆ ? ಅಥವಾ, ರಾಷ್ಟ್ರ ಸಭಾ ಸಮಿತಿಯ ಕಾರ್ಯಾಲಯದಲ್ಲಿ ? ಚುನಾವಣೆಯ ಅನಂತರ ಈವರೆಗಿನ ಧೂಳಿನ ರಾಶಿಯನ್ನೆಲ್ಲ ಗುಡಿಸುವವರು ಯಾರು ?
   ಮಾಜಿ ಮುಖ್ಯಮಂತ್ರಿ__ಮಾತಾಜಿ ಮುಖ್ಯಮಂತ್ರಿ__ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಈಗ ಪುಕಾರು ಹಬ್ಬಿಸಿದರೆ ಯಾರೆಲ್ಲ ಬರಬಹುದೊ ತನ್ನನ್ನು ನೋಡಲು ? ರಾಜ್ಯಪಾಲ ? ವಿಶ್ವಂಭರ ? ಹಿಂದಿನ ತನ್ನ ಸಹೋದ್ಯೋಗಿಗಳು ? ನಕುಲದೇವ್ ? ಅವನು ಈ ಸಂಜೆ ಹೊರಡಲಾರ, ನಾಳೆ ಬೆಳಗ್ಗೆ ಸಂಪುಟದ ಸದಸ್ಯರಿಗೆ ರಹಸ್ಯ ಪ್ರತಿಜ್ಞಾ ಬೋಧನೆಯನ್ನೂ ಮಾಡಿಸಿ, ಉಳಿದ ಏರ್ಪಾಟಿನ (ಕ್ವೋಟಾ ಇತ್ಯಾದಿ) ಬಗ್ಗೆ ಚರ್ಚಿಸಿ ಹೊರಟಾನು... 
   ಯೋಚನೆಗಳ ಗುಂಯಾರವದಿಂದ ಕಿವಿ ಕಿವುಡಾದೀತೆಂದು ಸೌದಾಮಿನಿ ಎದ್ದಳು. ತಲೆಗೂದಲು ಸರಿಪಡಿಸಿಕೊಂಡು ಮೇಜಿನ ಬಳಿ ಕುಳಿತಳು.
   'ಟಕ್ ಟಕ ಟಕ್'
   ಮೆಲ್ಲನೆ ತಟ್ಟಿದವನು ಪರಶುರಾಮ.
   “ಒಳಗ್ಬನ್ನಿ.”
   “ನಾನು, ಮಾತಾಜಿ. ಗುಪ್ತಚಾರದಳದ ಮುಖ್ಯಸ್ಥ ಬಂದಿದ್ದಾರೆ, ಕರೀಲಾ?”
   “ಪಾಪ ! ಅವರಿನ್ನೂ ಬಂಧನದಲ್ಲೇ ಇದ್ದಾರಾ? ಬರಲಿ.”
   ಮುಖ್ಯಸ್ಥ ಒಳಬಂದ ಕೈ ಜೋಡಿಸಿದ.
   "ಶಾಸಕರ ಸಭೆಯ ಅನಂತರ ನಾನೇನು ಮಾಡಿದೆ ಅನ್ನೋ ವಿವರದಿಂದ ನಿಮ್ಮ ಟಿಪ್ಪಣಿ ಪುಸ್ತಕದ ಒಂದೆರೆಡು ಪುಟ ತುಂಬಿರಬಹುದು."
   “ತಾವು ತಪ್ಪ ತಿಳೀಬಾರದು. ಬರೇ ಕರ್ತವ್ಯ ಪಾಲನೆ.”
   “ನಿಮ್ಮ ಹೊಸ ಪುಟಗಳಲ್ಲಿ ಏನಿದೇಂತ ಹೇಳ್ಲಾ ? ಅನಾಥಾಶ್ರಮದ ವಸತಿ ಗೃಹದಲ್ಲಿ ಸ್ವಲ್ಪ ದಿನ ಇರೋ ಯೋಚನೆ ಮಾಡಿದ್ದು. ಉತ್ಕಲ ಪ್ರವಾಸದ ವಿಚಾರ. ಕಾವೇರಿ ಸ್ನಾನ. ಬ್ರಹ್ಮಗಿರಿ ಆಶ್ರಮದಲ್ಲಿ ಕೆಲ ದಿನಗಳ ಏಕಾಂತವಾಸ. ಮನೆ ಹುಡುಕಾಟ. ಮಾಹಿತಿ ಸಂಗ್ರಹಿಸಿದ್ದು ನಾನಾ ಜನರಿಂದ.”
   "ತಲೆಬಾಗಿದ"
   “ಇನ್ನು ಎತ್ತಿ."