ಈ ಪುಟವನ್ನು ಪರಿಶೀಲಿಸಲಾಗಿದೆ

ಉಷಃ ಕಾಲದಲ್ಲಿ ಭೇರಿಯ ಸದ್ದಾಯಿತು. ಅದರ ಅಲೆಗಳು ನದಿಯಾಚೆಗೆ
ನಗರಕ್ಕೂ ಇಂದ್ರಾವತಿಯುದ್ದಕ್ಕೆ ಮಹಾನದಿಯವರೆಗೂ ಸಂಚರಿಸಿದುವು. ಮೊದಲು
ಎಚ್ಚರುವುದು ಧರ್ಮೆಂದರ್ ಬಾಬಾರ ಆಶ್ರಮ ; ಬಳಿಕ ಜಗದಲಪುರ.
ರಾತ್ರಿ ಊಟದ ಬಳಿಕ, ಇನ್ನು ವಿಶ್ರಾಂತಿ ತಗೊ” ಎಂದಿದ್ದರು ಬಾಬಾಜಿ,
ಪುಟ್ಟವ್ವನಿಗೆ, ಈಗ ಭೇರಿಯ ಸದ್ದಿಗೆ ಅವಳು ಎದ್ದಳು. ಎಲ್ಲ ಆಧುನಿಕ ಅನುಕೂಲ
ಗಳೂ ಇದ್ದ ಅತಿಥಿ ಗೃಹ, ಕಿರಿಯ ಶಿಷ್ಯನೊಬ್ಬ ಬಂದು ಸಂದೇಶ ಮುಟ್ಟಿಸಿದ :
“ಬಾಬಾಜಿ ಸ್ನಾನಘಟ್ಟಕ್ಕೆ ಹೋಗ್ತಾರೆ. ನೀವು ಬರಬಹುದಂತೆ.”
“ಬಂದೆ.”
ಬಾಬಾಜಿ ನಿಧಾನವಾಗಿ ದಿಬ್ಬ ಇಳಿಯುತ್ತಿದ್ದರು. ಪುಟ್ಟವ್ವ ಧಾವಿಸಿ ಹೋಗಿ,
ಅವರಿಗಿಂತ ಒಂದು ಹೆಜ್ಜೆ ಹಿಂದಿದ್ದು ನಡೆದಳು. ನಿನ್ನೆಯ ವಿಗ್ರಹವೇ. ನದಿಗೆ
ಹೋಗುತ್ತಿದ್ದುದರಿಂದ ಒಂದು ಅಂಗವಸ್ತ್ರವಿತ್ತು ಭುಜದ ಮೇಲೆ.
“ಶಿಷ್ಯ ಎಲ್ಲವನ್ನೂ ವಿವರವಾಗಿ ಬರೆದಿದ್ದಾನೆ. ದಂತೇಶ್ವರಿ ಆದಿಶಕ್ತಿಯ
ಸಂಕೇತ. ಪ್ರಕೃತಿಯಲ್ಲಿ ಜೀವಸಂಚಾರವಾದಾಗಲೇ ಈ ದೇಶದ ಉದ್ದಾರ. ನಮ್ಮ
ಸನ್ನಿಧಿಯಲ್ಲಿ ನೀನು ಮರುಹುಟ್ಟು ಪಡೆಯುತ್ತೀಯೆ. ಇವತ್ತಿನ ಸಮಾಜ ವ್ಯವಸ್ಥೆ
ಯಲ್ಲಿ ರಾಜಕಾರಣ ಅನಿವಾರ್ಯ, ರಾಜ್ಯ ಆಳುವ ಸೂತ್ರಗಳು ಹೆಣ್ಣಿನ ಕೈಯಲ್ಲಿರ
ಬೇಕು. 'ರಾಮಾಯಣ' 'ಮಹಾಭಾರತ' ಓದಿದೀಯಾ ?”
“ಓದಿದೇನೆ ಬಾಬಾ.”
"ಇವು ಬರೇ ಕಥೆಯಲ್ಲ. ಇವುಗಳಲ್ಲಿ ಎಷ್ಟೋ ಮರ್ಮಗಳು ಅಡಗಿವೆ.
ವಿಮರ್ಶಾತ್ಮಕ ದೃಷ್ಟಿಯಿಂದ ಓದಬೇಕು. ಒಂದು ಪ್ರಶ್ನೆ ಕೇಳೇನೆ : ಗ್ರಹಛಿದ್ರ
ಬಯಸುವ ಒಬ್ಬ ಪಾಪಿ ಆಪ್ತ ಬಳಗದಲ್ಲಿದ್ದಾನೆ. ಅವನನ್ನು ಏನು ಮಾಡಬೇಕು?"
“ನಿಷ್ಕರುಣೆಯಿಂದ ಕೊಲ್ಲಬೇಕು.”
“ಭೇಷ್! ಆದರೆ, ಅಷ್ಟು ಸಾಲದು, ಕೊಂದಮೇಲೆ ಧಾರಾಕಾರವಾಗಿ ಕಣ್ಣೀರು
ಸುರಿಸಬೇಕು.... ನಾನು ಹೇಳಿದ ಈ ಮಾತಿಗೆ ಯಾವುದು ಆಧಾರ ?”
“ತಿಳೀದು ಬಾಬಾಜಿ”
“ಮಹಾಭಾರತ. ನಮ್ಮದು ಪ್ರಾಕೃತ ಭಾಷೆ, ಸಂಸ್ಕೃತದಲ್ಲೇ ಆ ಮಹಾಕಾವ್ಯ
ಗಳನ್ನು ಓದಿದ್ದೇವೆ.”
“ಜ್ಞಾನಕ್ಕೆ ಸಮನಾದದ್ದು ಬೇರೊಂದಿಲ್ಲ, ಅಲ್ಲವೆ ಬಾಬಾಜಿ?"