ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

9

4. ಅರ್ಥಗಾರಿಕೆಯ ಪರಿಶೀಲನೆ
ಮತ್ತು
5. ಸಂಶೋಧನಾತ್ಮಕ ಹಾಗೂ ಯಕ್ಷಗಾನವನ್ನು ಇತರ ಕಲೆಗಳೊಡನೆ ಹೋಲಿಸುವಂಥ
ತೌಲನಿಕ ಬರಹಗಳು.
ಮೇಲಿನ ಐದು ಅಂಶಗಳು ಬೇರೆ ಬೇರೆ ಲೇಖನಗಳಲ್ಲಿ ಆಗಾಗ್ಗೆ ಪ್ರತ್ಯಕ್ಷವಾಗುತ್ತ ಡಾ. ಜೋಶಿಯವರು ಯಕ್ಷಗಾನವನ್ನು ಗ್ರಹಿಸಿದ ಬಗೆಗೆ ಓದುಗರಿಗೆ ತಿಳುವಳಿಕೆ ಮೂಡಿಸುತ್ತವೆ.
ಯಕ್ಷಗಾನದ ಭಾಷೆಯ ಕುರಿತಾದ ಮುಖ್ಯ ಚರ್ಚೆಗಳನ್ನು ಯಕ್ಷಗಾನ ಕಲಾಭಾಷೆ, ಕಲೆ, ಸ್ವತ್ವ ಮತ್ತು ಸತ್ಯ, ಒಡ್ಡೋಲಗ ವೈಭವ, ಪ್ರಸಂಗ ಮತ್ತು ಅರ್ಥ ಹಾಗೂ ಯಕ್ಷಗಾನೋಚಿತ ಶೈಲಿ ಮತ್ತು ಮುಕ್ತತೆ - ಈ ಲೇಖನಗಳಲ್ಲಿ ನಾವು ವಿಶೇಷವಾಗಿ ಕಾಣಬಹುದು. ಈ ಲೇಖಗಳಲ್ಲಿ ಡಾ. ಜೋಶಿಯವರು ಯಕ್ಷಗಾನದ ಅನನ್ಯತೆಯನ್ನು ಒಪ್ಪಿಕೊಂಡು ಅದನ್ನು ಸ್ಥಾಪಿಸುತ್ತಾರೆ. ಅವರ ಮಾತುಗಳು ಹೀಗಿವೆ - "ಯಕ್ಷಗಾನದ ವೇಷ, ಮಾತಿನ ರೀತಿ ನಾಟಕದ ಹಾಗಲ್ಲ, ಸಿನೆಮಾದ ಹಾಗೆ ಅಲ್ಲ, ನಮ್ಮ ನಿತ್ಯ ಜೀವನದ ಹಾಗೆ ಅಲ್ಲ, ಅದೇ ಅದರ ಪ್ರತ್ಯೇಕತೆ. ಅದರ 'ಭಾಷಾ ವಿಶೇಷ'. ಇದನ್ನು ತಿಳಿದು ಅರ್ಥವಿಸಿದರೆ ಮಾತ್ರ ನಮಗೆ ಆ ಕಲೆಯನ್ನು ಸವಿಯಲು, ತಿಳಿಯಲು ಸರಿ-ತಪ್ಪು ಭಾವಿಸಲು ಸಾಧ್ಯ. (ಯಕ್ಷಗಾನದ ಕಲಾ ಭಾಷೆ, ಪುಟ : 2]. ಕಲಾ ಪ್ರಕಾರವೊಂದರ ಸ್ವಭಾವ ವಿಶೇಷದ ಬಗ್ಗೆ ಅಪಾರ ಗೌರವ ಹೊಂದಿರುವ ಕಲಾ ವಿಮರ್ಶಕರಾಗಿ ಡಾ. ಜೋಶಿ ಅವರು ರೂಪುಗೊಂಡಿರುವುದರಿಂದ ಅವರ ಬರಹಗಳಿಗೆ ಅಧಿಕೃತತೆ ಪ್ರಾಪ್ತಿಸಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ, ಜೋಶಿಯವರು ಯಕ್ಷಗಾನದ ಭಾಷೆಯನ್ನು ಒಪ್ಪಿಕೊಂಡೂ ಕೂಡಾ ಅದನ್ನು 'ಸ್ಥಾವರ' ಅಥವಾ 'ಸ್ಥಿರೀಕೃತ' ಪಠ್ಯವಾಗಿ ನೋಡದಿರುವುದು. ಯಕ್ಷಗಾನದ ಚಲನಶೀಲತೆಯನ್ನು ಅವರು ಒಪ್ಪಿಕೊಳ್ಳುತ್ತಾರೆ. ಅವರ ಖಚಿತ ನಿಲುವು ಇಂತಿದೆ : "ಯಕ್ಷಗಾನ ಕಲಾ ವಿಧಾನ ಬೆಳೆದದ್ದು, ತಿದ್ದಿದ್ದು. ಅದನ್ನು ಇನ್ನೂ ಬೆಳೆಸಬಾರದೆ ? ತಿದ್ದಬಾರದೆ ? ಎನ್ನಬಹುದು. ನಿಜ, ತಿದ್ದಬಹುದು, ಬೆಳೆಸಬಹುದು. ಅದಕ್ಕೆ ಅವಕಾಶವೂ ಇದೆ. ಆದರೆ ಹೀಗೆ ಮಾಡಬೇಕಾದರೆ ಅದರ 'ಭಾಷೆ'ಯ ಹಿಡಿತಬೇಕು. ಅದರಲ್ಲಿ ಶ್ರದ್ಧೆ ಬೇಕು. ಪ್ರತಿಯೊಂದು ಕಲೆಯ ಸೌಂದರ್ಯ ನಿರ್ಣಯಕ್ಕೂ ಅದರದ್ದೇ ಆದ ನಿಕಷಗಳಿವೆ. ಮಾನದಂಡಗಳಿವೆ. ಈ ನಿಕಷಗಳ ಮಾನದಂಡಗಳ ತಿಳಿವನ್ನೇ ಸೌಂದರ್ಯ ಪ್ರಜ್ಞೆ ಎನ್ನುತ್ತೇವೆ. ಸೌಂದರ್ಯ ಪ್ರಜ್ಞೆ 'ಭಾಷಾ' ಪರಿಜ್ಞಾನ ಇದ್ದಾಗ, ಇದ್ದವರಿಂದ, ಕಲೆಯ ಬೆಳವಣಿಗೆ, ಪರಿಷ್ಕಾರ ಸಾಧ್ಯವಾಗುತ್ತದೆ, ಯಶಸ್ವಿಯಾಗುತ್ತದೆ" (ಪುಟ 6), ಈ ಎಚ್ಚರವನ್ನು ಲೇಖಕರು ಉದ್ದಕ್ಕೂ ಕಾಪಾಡಿಕೊಂಡು ಬರುತ್ತಾರೆ. "ವ್ಯಾಕರಣವು ಕಾವ್ಯವಲ್ಲ, ವ್ಯಾಕರಣ ಬದ್ಧತೆ ಒಂದು ಒಳ್ಳೆಯ ಕಾವ್ಯದ ಮಾನದಂಡವಾಗದು ನಿಜ. ಆದರೆ

ಡಾ. ಎಂ. ಪ್ರಭಾಶರ ಜೋಶಿ