ಈ ಪುಟವನ್ನು ಪ್ರಕಟಿಸಲಾಗಿದೆ

118

ಮುಡಿ

ಯಕ್ಷಗಾನ ರಂಗ ಪ್ರಯೋಗದ ಮಾತುಗಾರಿಕೆಯು ಈಯೆರಡನ್ನೂ ಒಳಗೊಂಡಿದೆ. ಪದ್ಯಗಳನ್ನಾಧರಿಸಿ, ಕಲಾವಿದನು ನಾಟಕವನ್ನು ರಚಿಸುತ್ತ, ಪ್ರದರ್ಶಿಸುವಾಗ, ಪ್ರದರ್ಶಿಸುತ್ತಲೆ ರಚಿಸುವಾಗ, ಅವನು ಅರ್ಥವನ್ನು ಹೇಳುವುದಲ್ಲ', ಅರ್ಥವನ್ನು 'ಮಾತಾಡುವುದು'. ಪಾತ್ರಧಾರಿಯ ಮಾತು (ಅರ್ಥ)ಅವನು ಪ್ರಸಂಗವನ್ನು, ಸಂದರ್ಭವನ್ನು, ಮತ್ತು ತುರ್ತಾಗಿ ಅವನು ನಿರ್ವಹಿಸುತ್ತಿರುವ ಪದ್ಯವನ್ನು ಅರ್ಥೈಸುವ ರೀತಿಯನ್ನು ಹೊಂದಿಕೊಂಡಿದೆ.
ಅರ್ಥೈಸುವಿಕೆಗೆ ಅನೇಕಾನೇಕ ಸಾಧ್ಯತೆಗಳಿವೆ. ಅದನ್ನು ಅನುಸರಿಸಿ ಅರ್ಥಕ್ಕೂ ಅನಂತ ಸಾಧ್ಯತೆಗಳಿವೆ. ಈ ಸಾಧ್ಯತೆಗಳ ಶೋಧ, ಮತ್ತು ಪ್ರಯೋಗವೇ ಅರ್ಥಗಾರಿಕೆ. ಹೀಗೆ ಪ್ರಯೋಗಿಸುವಾಗ ಅದನ್ನು ಒಟ್ಟು ಕಲಾವಿದರು ಸೇರಿ ರೂಪಿಸುವ ಅರ್ಥನಾಟಕದೊಳಗೆ ಸಮನ್ವಯಗೊಳಿಸುವುದು, ನಿರ್ವಹಣೆಯ ಒಂದು ಮುಖ್ಯವಾದ ಅಂಶ. ಸಮರ್ಥರಾದ ಪಾತ್ರಾಧಾರಿಗಳೇನಕರು ಈ ಬಗೆಯ ನಿರ್ವಹಣೆಯನ್ನು ನೀಡಿದ ಮಾದರಿಗಳು ನಮ್ಮ ಮುಂದಿವೆ, ಮಾತ್ರವಲ್ಲ. ಎಲ್ಲ ಕಲಾವಿದರೂ ಅವರವರ ನೆಲೆಯಲ್ಲಿ ಈ ಕಾವ್ಯವನ್ನು ಮಾಡುತ್ತಿರುವುದರಿಂದ ದಿನದಿನವೂ ಅರ್ಥೈಸುವಿಕೆ, ಅರ್ಥರಚನೆಗಳು ನಡೆಯುತ್ತಲೆ ಇವೆ.
ಅರ್ಥ ಪರಂಪರ
ಅರ್ಥಗಾರಿಕೆಯು ಅಶುಭಾಷಣ ರೂಪಿಯಾಗಿದ್ದು, ಕಲಾವಿದನ ಸ್ವಂತ ರಚನೆಯಾಗಿದೆ, ಎಂಬುದು ಈಗ ಕ್ಲೀಶೆಯ ಮಾತು. ಅದು ನಿಜ, ಆದರೆ ಅಷ್ಟು ಪೂರ್ಣ ನಿಜವಲ್ಲ. ಪಾತ್ರಧಾರಿಯು, ಆಡುವ ಮಾತುಗಳ ಹಿಂದೆ, ದೊಡ್ಡದಾದ ಒಂದು ಅರ್ಥಪರಂಪರೆ ಇದೆ. ಅಂದರೆ ಒಂದೊಂದು ಪದ್ಯಕ್ಕೂ, ಪಾತ್ರಕ್ಕೂ ಕಾಲಕಾಲಗಳಲ್ಲಿ ಬೇರೆ ಬೇರೆ ಪಾತ್ರಧಾರಿಗಳು ರೂಪಿಸಿದ ಮಾತುಗಳೂ, ಕಲ್ಪನೆಗಳೂ ರಂಗದಲ್ಲಿ ಪರಂಪರೆಯಿಂದ ಬಂದವುಗಳು ಇರುತ್ತವೆ. ಉದಾ-ಬಯಲಾಟದಲ್ಲಿ ದೇವೇಂದ್ರನ ಪೀಠಿಕೆ, ರಾಜ-ದೂತ ಸಂಭಾಷಣೆ ಇತ್ಯಾದಿಗಳು ದತ್ತವಾಗಿ ಬಂದವು. ಮುಂದೆ, ನಾವು ಕೇಳುವಾಗ, ಆಡುವಾಗ ಇವು ಯಥಾವತ್ ಅದೇ ಶಬ್ದ ವಾಕ್ಯಗಳನ್ನೊಳಗೊಂಡೊ, ಅಥವಾ ತುಸು ರೂಪಾಂತರಗಳೊಂದಿಗೂ ಬರುತ್ತವೆ. ಇಂದು ಅರ್ಥಗಾರಿಕೆ ಎಂಬ ಆಶುನಾಟಕರೂಪವು ಇಷ್ಟು ಸುಪುಷ್ಟವಾಗಿ ರೂಪುಗೊಂಡಿರುವುದಕ್ಕೆ ಈ ಪರಂಪರೆಯ ಆಧಾರ. ಈ ಮಧ್ಯೆ, ಅನೇಕರು ಈ ಪರಂಪರೆಗೆ ಹೊಸ ಹೊಳಪು, ಪ್ರಕಾಶಗಳನ್ನು ನೀಡುತ್ತ ಉಜ್ವಲಗೊಳಿಸುತ್ತ ಬಂದಿದ್ದಾರೆ. ಇದು ಹೊಸ ಸಂಪ್ರದಾಯ ನಿರ್ಮಾಣ. ಪುನಃ ಅದೂ ಪ್ರವಾಹದ ಭಾಗವಾಗಿ ತುಸು ಉಳಿದು, ಸ್ವಲ್ಪ ಕಳೆದು ಹೋಗಿ, ಮುಂದುವರಿಯುತ್ತದೆ.

ಡಾ. ಎಂ. ಪ್ರಭಾಕರ ಜೋಶಿ