ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
13

ಅರ್ಥವಂತೂ ದಕ್ಕಿರುತ್ತದೆ. ಹೀಗಾಗಿ ಸರಾಗವಾಗಿ ಮುಂದೆ ಹೋಗುತ್ತಾ ಅದಕ್ಕೆ ಸಂಬಂಧಿಸಿದ ವಿವರಗಳನ್ನು ಲೇಖಕರು ನೀಡಿದರಾಯಿತು. ಈ ಬಗೆಯ ಸಂಕ್ಷಿಪ್ತತೆಯು ಡಾ. ಜೋಶಿಯವರ ಬರಹಗಳ ಗುಣವೂ ಹೌದು, ದೌರ್ಬಲ್ಯವೂ ಹೌದು, ಕರಾವಳಿಯೇತರ ಜನರಿಗೆ ಈ ಸಂಪುಟವು ಸುಲಭವಾಗಿ ಸಂವಹನಗೊಳ್ಳದು.*

ಡಾ. ಜೋಶಿಯವರು ಯಕ್ಷಗಾನದ ಒಳಗಿನವರಾಗಿರುವುದರಿಂದಾಗಿ ಸಹಜವಾಗಿ ಅವರು ಕೆಲವು ನಿರ್ಣಯಗಳಿಗೆ ಬಂದು ಬಿಡುತ್ತಾರೆ. ಹಾಗೆ ನೋಡಿದರೆ ಒಂದಿಲ್ಲ ಒಂದು ಬಗೆಯ ನಿರ್ಣಯಗಳಿಲ್ಲದ ಲೇಖನಗಳೇ ಇಲ್ಲಿಲ್ಲ. 'ಇದನ್ನು ಮನ ಒಲಿಕೆ ಮತ್ತು ನಿಯಮಗಳ ಮೂಲಕ ಪರಿಹರಿಸುವುದು ಅಗತ್ಯ' (ಪುಟ : 20), 'ಔಚಿತ್ಯ ಮೀರಿದ ಅಭಿವ್ಯಕ್ತಿ ಯಾವುದಿದ್ದರೂ ಅದು ಅನುಚಿತ (ಪು: 27), ಅದರ ಕಲಾ ಸೌಂದರ್ಯವನ್ನು ಅಡೆತಡೆಗಳಿಲ್ಲದೆ, ರಗಳೆಗಳಿಲ್ಲದೆ ಸವಿಯಬೇಕಾದರೆ ಅಂತಹವುಗಳು ಇರಲೇಬಾರದು' (ಪುಟ 82), 'ಅದು ಪಾತ್ರದ ಅರ್ಥವೇನೋ ಆದೀತು. ಪ್ರಸಂಗದ ಅರ್ಥವಾಗದು' (ಪು: 111), ಎಂಬಂಥ ಮಾತುಗಳನ್ನು ಬಹುತೇಕ ಇಲ್ಲಿನ ಎಲ್ಲ ಲೇಖನಗಳಲ್ಲಿಯೂ ಕಾಣಬಹುದು. ಇದು ಡಾ. ಜೋಶಿಯವರ ಬರಹದ ಶೈಲಿಯೂ ಹೌದು.

ಹೀಗೆ ಪ್ರಭಾಕರ ಜೋಶಿಯವರು ತಮ್ಮ ಬರಹಗಳಲ್ಲಿ ಯಕ್ಷಗಾನದ ಅನನ್ಯತೆಯನ್ನು ಕಾಪಿಡಲು ಹೆಣಗಾಡುತ್ತಾರೆ. ಆಧುನಿಕತೆಯು ಯಕ್ಷಗಾನದ ಮೇಲೆ ಉಂಟು ಮಾಡಿದ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳ ವಿಶ್ಲೇಷಣೆ ನಡೆಸುತ್ತಾರೆ. ಅರ್ಥಗಾರಿಕೆಯ ಮಹತ್ತ್ವವನ್ನು ಮತ್ತು ತಾತ್ವಿಕ ಅಪೇಕ್ಷೆಗಳನ್ನು ಓದುಗರಿಗೆ ಸಾದರ ಪಡಿಸುತ್ತಾರೆ. ಯಕ್ಷಗಾನವನ್ನು ಇತರ ಕಲೆಗಳೊಡನೆ ಹೋಲಿಸಲು ಬೇಕಾದ ಚೌಕಟ್ಟನ್ನು ನಿರ್ಮಾಣ ಮಾಡಿಕೊಡುತ್ತಾರೆ. ಕಲಾವಿದನಾಗಿ ತಾನು ಪಡೆದ ಅನುಭವಗಳ ಆಧಾರದ ಮೇಲೆ ಕಲೆ ಮುನ್ನಡೆಯಬೇಕಾದ ರೀತಿಯ ಬಗ್ಗೆ ಕೆಲವು ಮಾರ್ಗದರ್ಶಿ ಮಾತುಗಳನ್ನು ಹೇಳುತ್ತಾರೆ.

ಕಲಾವಿದರೂ ವಿಮರ್ಶಕರೂ ಆಗಿರುವ ಜೋಶಿಯವರ ಮಾತುಗಳನ್ನು ನಾವೆಲ್ಲ ಗಂಭೀರವಾಗಿ ಸ್ವೀಕರಿಸಬೇಕು.

ಡಾ. ಪುರುಷೋತ್ತಮ ಬಿಳಿಮಲೆ
ನಿರ್ದೇಶಕರು, ಭಾರತೀಯ ಅಧ್ಯಯನದ ಅಮೇರಿಕನ್ ಸಂಸ್ಥೆ (AIIS), ನವದೆಹಲಿ



* .ಇದನ್ನು ಗಮನಿಸಿ, ತುಸು ಪರಿಭಾಷಾ ವಿವರಣೆ ಕೊಟ್ಟಿದೆ. ಲೇಖಕ
* ಡಾ. ಎಂ. ಪ್ರಭಾಕರ ಜೋಶಿ