ಈ ಪುಟವನ್ನು ಪ್ರಕಟಿಸಲಾಗಿದೆ

128

ಮುಡಿ

ಸರಿಯಾಗಿ ನೋಡಿದರೆ, ಅಂಬೆ ಭೀಷ್ಮರ ಸನ್ನಿವೇಶಗಳಾಗಲಿ, ಪಾತ್ರಗಳಾಗಲಿ ವಾದಗಳ, ಮಂಡನೆ-ಪ್ರತಿವಾದಗಳ ಸನ್ನಿವೇಶಗಳಲ್ಲ ವಾದದ ಸಂದರ್ಭಗಳಿರುವುದಾದರೆ - ಅದು ಅಂಬೆ-ಸಾಲ್ವ, ಋಷಿಗಳು-ಅಂಬೆ-ಪರಶುರಾಮ, ಗಂಗೆ-ಭೀಷ್ಮ-ಪರಶುರಾಮ, ಪರಶುರಾಮ-ಭೀಷ್ಮ ಸಂವಾದಗಳಲ್ಲಿ ಹೊರತು, ಅಂಬೆ-ಭೀಷ್ಮರ ಸಂವಾದದಲ್ಲಲ್ಲ. ಅಂಬೆ- ಭೀಷ್ಮ ಪ್ರಸಂಗದ ಕೇಂದ್ರ ಪಾತ್ರಗಳು, ಒಂದರ್ಥದಲ್ಲಿ ಇದಿರು ಪಾತ್ರಗಳು, binary characterಗಳು ಆದರೆ, ವಾದ ಅವರೊಳಗಲ್ಲ. ಇದೇ ಪ್ರಸಂಗದ ವೈಶಿಷ್ಟ್ಯ ಮತ್ತು ಸ್ವಾರಸ್ಯ. ಹೇಗೆಂದು ನೋಡೋಣ.

6

ಕಾಶೀರಾಜನ ಮಕ್ಕಳನ್ನು, ಸ್ವಯಂವರ ಮಂಟಪದಿಂದ ಬಲದಿಂದಲೇ ತಂದ ಭೀಷ್ಮನು ತನ್ನ ಸ್ಥಾನದ ನೆಲೆಯಿಂದ, ಆ ಕಾಲದ ಕ್ಷತ್ರಿಯರ ಮೌಲ್ಯಗಳಿಗೆ ವೈತಿರಿಕ್ತವಲ್ಲದ ಒಂದು ಬಗೆಯ (ಬಹುಶಃ ಇಂದಿನ ನಮಗೆ ಒಪ್ಪಿಗೆ ಆಗದಿರಬಹುದಾದ) ಸಮರ್ಥನೆಯನ್ನು ಮಾಡಿಕೊಂಡೇ ತಂದಿದ್ದಾನೆ. ಅದನ್ನು ಅವನು ಅಂಬೆಯ ಮುಂದೆ ಸಮಾನತೆಯಿಂದ ವಾದಿಸಿ ಸಮರ್ಥಿಸಬೇಕಾದುದಲ್ಲ, ಪ್ರಸಂಗದಲ್ಲೂ ಅಂತಹ ಸನ್ನಿವೇಶವಿಲ್ಲ.

ಮೊದಲ ಸನ್ನಿವೇಶದಲ್ಲಿ - "ನೀವು ನನ್ನ ತಮ್ಮನನ್ನು ವರಿಸಬೇಕು" ಎಂಬ ಭೀಷ್ಮನ ಮಾತಿಗೆ ಪ್ರತಿಯಾಗಿ ಅಂಬೆಯು ನೀನೇ ವಿವಾಹವಾಗದೆ, ತಮ್ಮನನ್ನು ವಿವಾಹವಾಗೆಂದು ನಮ್ಮಲ್ಲಿ ಹೇಳಿದ್ದೇಕೆ? ಎಂಬುದು, - ಹೀಗೇಕೆ? ಎಂಬ ಅರ್ಥದಿಂದಲೇ ಹೊರತು, ಆಕ್ಷೇಪ ಅಥವಾ ವಾದವಾಗಿ ಅಲ್ಲ. ಅದಕ್ಕೆ ಉತ್ತರ “ನಾನು ಬ್ರಹ್ಮಚರ್ಯ ವ್ರತಿ, ವಿವಾಹವಾಗಲಾರೆ, ಅದಕ್ಕೆ ಹಿಂದೆ ನಡೆದ ಘಟನೆ, ಸತ್ಯವತೀ ವಿವಾಹದ ಸಂದರ್ಭದ ಪ್ರತಿಜ್ಞೆಯು ಕಾರಣ" ಎಂದು ಭೀಷ್ಮನ ಉತ್ತರ. "ಹಾಗಿದ್ದರೆ ನಾನು ಸಾಲ್ವನಲ್ಲಿ ಅನುರಕ್ತ. ನನ್ನನ್ನು ಅಲ್ಲಿಗೆ ಕಳುಹಿಸು" ಎಂದು ಅಂಬೆಯ ಕೇಳಿಕೆ, ಭೀಷ್ಮನ ಒಪ್ಪಿಗೆ, ಇಲ್ಲಿ ಇಬ್ಬರ ನಿಲುವಿನ ಕುರಿತು ಇನ್ನೊಬ್ಬರಿಂದ ಆಕ್ಷೇಪ ರೂಪದ ತರ್ಕವೇ ಇಲ್ಲ.

ಪಾತ್ರಗಳೊಳಗಿನ ಅಂತರವನ್ನು ಗಮನಿಸಬೇಕು. ಭೀಷ್ಮನು ಹಸ್ತಿನಾವತಿಯ ಸಂಧಿವಿಗ್ರಹಿ, ಮಹಾನ್ ವರ್ಚಸ್ವಿ, ವಿಕ್ರಮಿ, ಅಂಬೆ ವಯಸ್ಸು, ವಿದ್ಯೆ, ಸ್ಥಾನಗಳಲ್ಲೆಲ್ಲ ಭೀಷ್ಮನ ಮುಂದೆ ಸಣ್ಣವಳು. ಹೆಣ್ಣು ಬೇರೆ. ಮೊತ್ತಮೊದಲ ಬಾರಿಗೆ, ಅಪರಿಚಿತನೊಬ್ಬನೊಂದಿಗೆ ಹಸ್ತಿನಾವತಿಯ ಅರಮನೆಗೆ ಬಂದಿದ್ದಾಳೆ. ಹೇಗೆ ನೋಡಿದರೂ - 'ವಾದಿಸುವ' ನೆಲೆ ಅವಳದಲ್ಲ. ತುಂಬ ವಿನಯದಿಂದ ನಾಲ್ಕು ಮಾತು, ಅಭಿಮತವಾಗಿ

ಮಂಡಿಸಿ, ಹೀಗಲ್ಲವೆ ಮಹಾನುಭಾವ? ಇದು ಸರಿಯೆ? ಎಂಬಂತೆ ಕೇಳಬಹುದು ಅಷ್ಟೆ.

• ಡಾ. ಎಂ. ಪ್ರಭಾಕರ ಜೋಶಿ