ಈ ಪುಟವನ್ನು ಪ್ರಕಟಿಸಲಾಗಿದೆ
129

7

ಪ್ರಸಂಗದ ಪದ್ಯಗಳಲ್ಲಿರುವ ಪದ ಪ್ರಯೋಗಗಳೂ ಹಾಗೆಯೇ ಇವೆ 'ವಿನಯದಿಂಪೇಳಿದನು' ಎಂಬುದು ಭೀಷ್ಮನ ಮಾತಿನ ಆರಂಭ. ಅದು ಅವನ ಘನತೆ. ಅಂಬೆಯಾದರೂ "ವಸುಧಯೊಳೆರಗುತ್ತಲೆಂದಳು ದೈನ್ಯದಿ" ಅವಳು ಆತನನ್ನು ಕುರಿತಾಡುವ ಮಾತುಗಳಲ್ಲಿ "ಸರ್ತಿ ಸದ್ಗುಣ ಶೀಲ" "ಕರುಣನಿಧಿ ಅವಧರಿಸು ಸರ್ವಜ್ಞ ನೀನು ಚರಣ ಚಿತ್ತಂಗಳಂತೆಗೈಯ್ಯೊ ಪ್ರಾರ್ಥಿಪೆನು" "ಸತ್ಯ ಸಂಧ ನೀನೆಂಬುದಂ ಅರಿತಿರ್ಪೆ" ಎಂದಿದೆ. ವಾದಿಸಿ ಒಪ್ಪಿಸುವ ದಾರಿಗೂ, ಈ ಶಬ್ದಗಳಿಗೂ ಬಲು ದೂರ. ಮುಂದೆ ಸಾಲ್ವ-ಅಂಬೆಯರ ಸನ್ನಿವೇಶದಲ್ಲಾದರೂ ಒಂದಿಷ್ಟು ವಾದ, ಸಮರ್ಥನೆಗಳಿವೆ. ಅವರೊಳಗೆ ಸ್ಥಾನದ ಅಂತರ ಅಷ್ಟಿಲ್ಲ. ಪಾತ್ರ ಸಂಬಂಧ ಬೇರೆ ತೆರನಾದುದು. ಸಾಲ್ವನು ಅಂಬೆಗೆ ಪರಿಚಿತ, ಪ್ರಿಯಕರ. ಅವನಲ್ಲಿ ಅನುನಯ, ಒತ್ತಾಯ, ವಾದ, ಕೊನೆಗೆ ಸಿಟ್ಟು - ಎಲ್ಲವೂ ಒಂದು ಪ್ರಮಾಣದಲ್ಲಿ ಇವೆ. ಇರುವುದೆ ಸಹಜ.

8

ಭೀಷ್ಮ ಅಂಬೆಯರೊಳಗೆ ಬಿರುಸಿನ ಮಾತುಗಳಿರುವುದು, ಸಾಲ್ವನಿಂದ ತಿರಸ್ಕೃತಳಾಗಿ ಬಂದ ಅಂಬೆಯ ಮರು ಮಾತಿನ ಸಂದರ್ಭದಲ್ಲಿ. ಹತಾಶಳಾಗಿ, ಮನಸ್ಸು ಮುರಿದ ಸ್ಥಿತಿಗೆ ಬಂದ ಅಂಬೆ ಆ ಸನ್ನಿವೇಶದಲ್ಲಿ ವಿನಯ, ದೈನ್ಯ, ಸೌಮ್ಯಗಳನ್ನು ಬಿಟ್ಟು ಛಲಗಾತಿಯಾಗಿ "ಉರಿಯನುಗುಳುತ" ಮಾತಾಡುತ್ತಾಳೆ. ಕ್ರೂರಕರ್ಮಿ, ಪಾತಕಿ, ಅಪಹಾರಕ, ಶ್ವಾನನಂತೆ - ಎಂದು ಭೀಷ್ಮನನ್ನು ನಿಂದಿಸುತ್ತಾಳೆ. ಇಲ್ಲಿ ಛಲವಿದೆ, ಬಿರುಸಿದೆ, ಆದರೆ ವಾದ ಮಾಡಿ ಒಪ್ಪಿಸಿ ಮದುವೆ ಆಗುವ ಧಾಟಿ ಅದಲ್ಲ. ಆ ನಿರೀಕ್ಷೆಯೂ ಅವಳಿಗಿಲ್ಲ. ಅಲ್ಲಿರುವುದು ಹತಾಶ ಹೆಣ್ಣಿನ ಕಣ್ಣೀರು, ಬಿಸಿಯುಸಿರು ಅಷ್ಟೇ, ಕಿರಾತ ಏಕಲವ್ಯನ ಪರಾಭವದ ಬಳಿಕವಾದರೂ ಅಷ್ಟೆ. ಅಂಬೆಯದು ಛಲ, ಸೇಡು ಹೊರತು ಬೇರೆಯಲ್ಲ.
ವನ ಪ್ರದೇಶದಲ್ಲಿ ಅಂಬೆಯನ್ನು ಕಂಡ ಮುನಿಗಳು ಅವಳ ವಿಚಾರವನ್ನು ತಿಳಿದ ಆ ಕುರಿತು ಮಾತಾಡುವ ಸನ್ನಿವೇಶದಲ್ಲಿ ಹಿಂದಿನ ಪ್ರಕರಣದ ವಿಮರ್ಶೆ ನಡೆಯುತ್ತದೆ. ನಡೆದುದೇನು ? ಸಾಲ್ವ, ಭೀಷ್ಮರಲ್ಲಿ ಅಂಬೆಯ ಸ್ಥಿತಿಗೆ ಕಾರಣರಾರು, ಅವಳನ್ನು ಮರಳಿ ಅವಳ ತಂದೆಯ ಮನೆಗೆಯೆ ಕಳಿಸಬಹುದೇ, ಮೊದಲಾದ ವಿವೇಚನೆ ನಡೆದು ಕೊನೆಗೂ

ಪರಶುರಾಮನು ಅಂಬೆಯ ಪರವಾಗಿ ಭೀಷ್ಮನನ್ನು ವಿಚಾರಿಸಿ, ಶಿಕ್ಷಿಸುವ ಹೊಣೆ ಹೊರುತ್ತಾನೆ.

• ಡಾ. ಎಂ. ಪ್ರಭಾಕರ ಜೋಶಿ