ಈ ಪುಟವನ್ನು ಪ್ರಕಟಿಸಲಾಗಿದೆ

144

ಮುಡಿ


ಪಾಸುಗಳನ್ನು ನೀಡಿದ್ದಾರೆ. ಅದೇ ರೀತಿ ಕಲಾವಿದರಿಗೆ ಆಪತ್ಕಾಲದ ಸಹಾಯ, ಗೃಹ ನಿರ್ಮಾಣ ನೆರವು, ಶುಭ ಸಂದರ್ಭ ಸಹಾಯ ಮೊದಲಾದ ಯೋಜನೆಗಳು ಸೀಮಿತ ಮಟ್ಟದಲ್ಲಿ ಸಾಂಕೇತಿಕವಾಗಿ ಅನುಷ್ಠಾನಗೊಂಡಿವೆ. ಕಲಾವಿದರ ಮಕ್ಕಳಿಗಾಗಿ ಸ್ಕಾಲರ್ ಶಿಪ್ ನೆರವನ್ನೂ ಯಕ್ಷನಿಧಿ ಸಂಘಟಿಸಿದೆ. ಇದೆಲ್ಲದ ಹಿಂದೆ ಯಕ್ಷನಿಧಿಯ ಕಾರ್ಯಕಾರಿ ಸಮಿತಿ ಮತ್ತು ಕಾರ್ಯಕರ್ತರ ದೊಡ್ಡ ಶ್ರಮ ಇದೆ.
ನಾಯಕತ್ವ
ಇಂತಹ ಯಾವುದೇ ಕ್ಷೇಮಾಭಿವೃದ್ಧಿ ಸಂಘಟನೆಗಳಿಗೆ, ಮೊದಲ ಹಂತದಲ್ಲಿ ಆ ಕ್ಷೇತ್ರದ ಕುರಿತು ಪ್ರೀತಿ, ಕಾಳಜಿ ಇರುವ, ಕ್ಷೇತ್ರದ 'ಹೊರಗಿನ' (ಅಂದರೆ ಅದೇ ಕ್ಷೇತ್ರದ ಜೀವನ ವ್ಯವಸಾಯವಲ್ಲದ) ವ್ಯಕ್ತಿಗಳ ನೇತೃತ್ವ ಅಗತ್ಯವಾಗುತ್ತದೆ. ಹಂತ ಹಂತವಾಗಿ, ಕ್ರಮಶಃ ಇದರ ನಾಯಕತ್ವವನ್ನು ಅಯಾ ಕ್ಷೇತ್ರವನ್ನೇ ಜೀವನಾಧಾರವಾಗಿ ಹೊಂದಿರುವ ಕಲಾವಿದರೇ ಮುಂದೆ ನಿರ್ವಹಿಸುವಂತಹ ಸ್ಥಿತಿ ಒದಗಬೇಕು. ಅದು ಸಾರ್ಥಕ್ಯದ ಮುಂದಿನ ಹಂತ, ಕಲಾವಿದರು ಈ ಕುರಿತ ಯೋಚಿಸಬೇಕು
ಸುಧಾರಣೆ - ರಕ್ಷಣೆ
ಕಲಾ ಸುಧಾರಣೆ, ರಕ್ಷಣೆಗಳ ದ್ವಿಮುಖವಾದ ಹೊಣೆಯು, ದೇವಾಲಯಗಳು, ಮೇಳಗಳು, ಕಲಾವಿದರು ಮತ್ತು ಸಮಾಜದ ಮೇಲಿದೆ. ಸರಕಾರಕ್ಕೂ ಜವಾಬ್ದಾರಿ ಇರಬೇಕು. ಸುಧಾರಣೆ ಎಂಬುದು ವಿಕೃತಿಗಳಿಂದ ಬರುವುದಿಲ್ಲ. ರಕ್ಷಣೆಯು ನಾಮಮಾತ್ರ ಯತ್ನಗಳಿಂದಲೂ ಬರುವುದಿಲ್ಲ. ಕಲಾವಿದನ ಹೊಣೆ ಇಲ್ಲಿ ಮೊದಲು, ತನ್ನನ್ನು, ತನ್ನ ಕಲೆಯನ್ನು ತಾನು ರಕ್ಷಿಸಿಕೊಳ್ಳಬೇಕೆಂಬ ತೀವ್ರವಾದ ತುಡಿತ ಅವನಿಗಿಲ್ಲವಾದರೆ ಉಳಿದ ವಿಭಾಗಗಳ ನೆರವಿನಿಂದ ಫಲವಿಲ್ಲ. ಕಲಾವಿದನು ಸಮಾಜದಿಂದ ನಿರೀಕ್ಷಿಸಿ ಪಡೆದಷ್ಟು, ಆತನ ಹೊಣೆ ಕಲೆಯ ಬಗೆಗೂ ಹೆಚ್ಚುತ್ತದೆ. ಕಲಾವಿದ ತನ್ನನ್ನು ಸಮಾಜ ಹೇಗೆ ಕಾಣುತ್ತದೆ, ಕಾಣಬೇಕು ಎಂಬ ಕುರಿತೂ ಎಚ್ಚರದಿಂದಿದ್ದು, ಇಮೇಜ್ ಸುಧಾರಿಸಿಕೊಳ್ಳಬೇಕು. ಕಲಾವಿದನ ಸುಧಾರಣೆ ಜತೆ, ಮೇಳದ ಸಂಚಾಲಕನ ಸ್ಥಿತಿಗತಿಯ ಕಡೆಗೂ ಗಮನಹರಿಯಬೇಕು. ಮೇಳಗಳ ಸಂಚಾಲಕತ್ವವೂ ಕಠಿನ ಕಾರ್ಯವೇ. ಅವರ ಸ್ಥಿತಿಯೂ ಡೋಲಾಯಮಾನವಾಗಿದೆ.

ಡಾ. ಎಂ. ಪ್ರಭಾಕರ ಜೋಶಿ