ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
17

ನಾವು ನಗುವುದಿಲ್ಲ. ಒಪ್ಪುತ್ತೇವೆ. ಅಲ್ಲಿ ಕೇವಲ ಸಂಕೇತವಾಗಿರುವ ಪೀಠವನ್ನ ಸಿಂಹಾಸನ ಎನ್ನುತ್ತೇವೆ. ಸುತ್ತು ಬಂದಾಗ ಪ್ರಯಾಣವನ್ನೂ ತಿಳಿಯುತ್ತೇವೆ. ವಾಸ್ತವವಾಗಿ ಇಲ್ಲದ ಅಂಶಗಳನ್ನು ಕಲ್ಪನೆಯಿಂದ ತುಂಬಿಸಿಕೊಳ್ಳುತ್ತೇವೆ. ಇದು ಒಂದು ಕಲೆಯ ಭಾಷೆಯು ವರ್ಗಾವಣೆ ಆಗುವ ರೀತಿ, ನಾವು ಅದರಲ್ಲಿ ಒಳಗೊಳ್ಳುವ ರೀತಿ. ಅದೇ ಕಲಾಭಾಷೆಯ ಜ್ಞಾನ.

ಮೇಲೆ ಉದಾಹರಿಸಿದ ರಥ ಅಥವಾ ಪೀಠದ ಬಳಕೆಯನ್ನು ನೋಡಿ, ಅದು ಎಷ್ಟೊಂದು ರೀತಿಯಲ್ಲಿ ಸ್ಥಳ ಮತ್ತು ವಸ್ತುಗಳನ್ನು ಹೇಳುವ ಸಂಕೇತ ಅಥವಾ ಮಾಧ್ಯಮವಾಗುತ್ತದೆ! ಆ ಪೀಠವೇ ಸಂದರ್ಭಕ್ಕನುಸರಿಸಿ ಸಿಂಹಾಸನ, ಅದೇ ರಥ, ವಾಹನ, ಪರ್ವತ, ಆಕಾಶ ಮೊದಲಾಗಿ ಕಲ್ಪಿತವಾಗುತ್ತದೆ. 'ಈಗ ಗಗನಾಂಗಣವನ್ನೇರುತ್ತೇನೆ' ಎಂದು ಒಂದು ಪಾತ್ರವು ಹೇಳುವಾಗ ಅವನು ಹತ್ತುವುದು ಅದೇ ಪೀಠವನ್ನು. ಈಗ ಪರ್ವತವನ್ನೇರಿ ಬಿಡುತ್ತೇನೆ' - ಎಂದರೂ ಹಾಗೆಯೆ. ಇದು ಬಡತನವಲ್ಲ. ಈ ಕಲೆಯ ಶ್ರೀಮಂತಿಕೆ ಇದು. ಒಂದು ಚಿಕ್ಕ ವಸ್ತು ಹಲವಾಗುವ, ದೊಡ್ಡದಾಗುವ ಕಲ್ಪನಾ ಶ್ರೀಮಂತಿಕೆ. ಅದೇ Rich Visualisation. ಸಿಂಹಾಸನ, ರಥ, ಸ್ವರ್ಗ, ಆಕಾಶ, ವೈಕುಂಠಗಳನ್ನೆಲ್ಲ ನಿರ್ಮಿಸಿ ತೋರಿಸುವ ಸಿರಿತನ. ಅದನ್ನೇ ಸೆಟ್ಟಿಂಗ್‌'ಗಳಿಂದ ಕಾಣಿಸುವ ಕಲೆಗಳಿಗೆ ಈ ಶ್ರೀಮಂತಿಕೆ ಇಲ್ಲ. ನಮ್ಮ ಸಾಂಪ್ರದಾಯಿಕ ರಂಗಗಳೆಲ್ಲದರಲ್ಲಿ, ಈ ರೀತಿ ಒಂದು ಸರಳ ವಸ್ತುವನ್ನು ಬಳಸಿ ಅದರಲ್ಲಿ ಎಲ್ಲವನ್ನೂ ಭಾವದಿಂದ ಅವಾಹಿಸಿ ತೋರುವ ಕ್ರಮ ಬಳಕೆಯಲ್ಲಿದೆ. ಇದು ಯಕ್ಷಗಾನದಂತಹ ಕಲೆಗಳ ಒಂದು ಪ್ರಮುಖ ಅಂಶ; ಅದರ ರಂಗಭಾಷೆಯ ಮೌಲಿಕ ಅಂಶ.

ಇದನ್ನು ತಿಳಿಯದಿದ್ದರೆ ನಮಗೆ ಈ ಕಲೆ ತಿಳಿಯುವುದಿಲ್ಲ. ಆಟವನ್ನು 'ಚಂದ ಮಾಡಲು, 'ರೈಸುವಂತೆ' ಮಾಡಲು ಸಿಂಹಾಸನದ್ದೆ ಆಕೃತಿಯ ಪೀಠವನ್ನು, ದೇವಿಯ ಪಾತ್ರಕ್ಕೆ ತೊಟ್ಟಿಲನ್ನೂ ನಿರ್ಮಿಸುವ - ಹೀಗೆ ಹಲವು ಬಗೆಯ 'ವಾಸ್ತವತೆ'ಯನ್ನು ರಂಗಕ್ಕೆ ತರಲು ಯತ್ನಿಸುವ ಮನೋಧರ್ಮ, ಈ ಕಲೆಯ ಅಂತರಂಗವನ್ನು ತಿಳಿಯದ ಬರಡುತನವಾಗುತ್ತದೆ. ಮಾತ್ರವಲ್ಲ, ಕೆಲವು ಅಂಶಗಳನ್ನು ಮಾತ್ರ ಹಾಗೆ ತರಲು ಸಾಧ್ಯವಾದರೂ ಉಳಿದುವಕ್ಕೆ ಏನು ಗತಿ? ವಿಷ್ಣುವಿಗೆ ಹಾಲ್ಗಡಲು, ಬ್ರಹ್ಮನಿಗೆ ಕಮಲಪೀಠ, ಶಿವನಿಗೆ ಕೈಲಾಸಪರ್ವತ, ಯುದ್ಧ ದೃಶ್ಯಗಳನ್ನೆಲ್ಲ ವಾಸ್ತವವಾಗಿ ಹಾಗೆ ಮಾಡಿ ತೋರಿಸುತ್ತೇವೆಯೆ? ಇಲ್ಲ, ಸಾಧ್ಯವಿಲ್ಲ. ಅಲ್ಲ, ಅದಕ್ಕಿಂತ ಹೆಚ್ಚಾಗಿ, ಅಗತ್ಯವಿಲ್ಲ. ಹಾಗೆ ಮಾಡುವುದೇ ಅನರ್ಥ. ಇದು ನಮಗೆ ಗೊತ್ತಿರಬೇಕು.

ಯಕ್ಷಗಾನದ ಬಿಲ್ಲು ನೇರ | ಹೀಗಿದೆ. ಬಾಗಿದ ಈ } ರೂಪದ್ದಲ್ಲ. ಗದೆ ಕಡೆಗೋಲಿನಂತೆ ಚಿಕ್ಕದು. ದೊಡ್ಡ ತಲೆ ಉಳ್ಳದ್ದಲ್ಲ. ಹೀಗೇಕೆ? ಅದನ್ನು ರೂಪಿಸಿದವರಿಗೆ ಬಿಲ್ಲು ಬಗ್ಗಿರುತ್ತದೆ ಎಂದೋ, ಗಧೆಯ ತಲೆ ದೊಡ್ಡದಿರಬೇಕೆಂದೋ ತಿಳಿಯದೆ? ಹಾಗಲ್ಲ.

* ಡಾ. ಎಂ. ಪ್ರಭಾಕರ ಜೋಶಿ