ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ

ಯಕ್ಷಗಾನದ ವಾದ್ಯ, ಕುಣಿತಗಳಾದರೂ ಹಾಗೆಯೆ, ಗಂಭೀರವಾಗಿ 'ಧೀಂಗಿಣ' ಕುಣಿಯುತ್ತ ರಾಜನ ವೇಷದ ಪ್ರವೇಶ. ಅದು ರಾಜಗಾಂಭೀರ್ಯದ ನರ್ತನ ಕಲ್ಪನೆ. ಹಾಗೆಯೇ ಯುದ್ಧ, ಬೇಟೆ, ಪ್ರಯಾಣ, ಏಳು, ಬೀಳು, ಸಾವು — ಎಲ್ಲದಕ್ಕೂ ನಿಶ್ಚಿತವಾದ ಬಡಿತ,ಕುಣಿತಗಳಿವೆ; ಚೆಂಡೆ ಮದ್ದಳೆಗಳ ಬಾರಿಸುವಿಕೆಗೆ ನುಡಿಕಾರ (ಪೆಟ್ಟು)ಗಳ ನಿರ್ಣಯವಿದೆ.

ಒಂದು ವೇಷ ತನ್ನಷ್ಟಕ್ಕೆ ಮಾತಾಡುವಾಗ (ಪೀಠಿಕೆ, ಸ್ವಗತ) ಭಾಗತವನು ಹೂಂಗುಟ್ಟುತ್ತಾನೆ. ಮಧ್ಯೆ ಪಾತ್ರದೊಂದಿಗೆ ಸಂವಾದ ಮಾಡುತ್ತಾನೆ. 'ಏನಿದು? ರಾಜನೊಬ್ಬನೇ ಇರುವಾಗ ಈ ಭಾಗವತನೆಲ್ಲಿಂದ ಬಂದ' ಎನ್ನುತ್ತೇವೆಯೇ? ಇಲ್ಲ. ಭಾಗವತನು ಪಾತ್ರದ 'ಸ್ವಗತ'ಕ್ಕೆ ಸ್ಪಂದಿಸದಿದ್ದರೆ, ಹೂಂಗುಡದಿದ್ದರೆಯೆ ಅದು ತಪ್ಪೆನ್ನುತ್ತೇವೆ. ಯಾಕೆ? ಅವನು ಭಾಗವತನಾಗಿದ್ದೂ ಪ್ರದರ್ಶನವನ್ನು ಬೆಳಗಿಸುವ ಶಕ್ತಿಯಾಗಿ, ಪಾತ್ರಗಳೆಲ್ಲದರ ಆತ್ಮೀಯನಾಗಿ, ಪಾತ್ರದ ಆತ್ಮವಾಗಿ, ಮನಸ್ಸಾಗಿ, ಪ್ರೇಕ್ಷಕರ ಪರವಾದ ಪ್ರತಿನಿಧಿಯಾಗಿ ಮಾತಾಡುವುದೆಂದು ನಮಗೆ ಗೊತ್ತಿದ್ದರೆ ಮಾತ್ರ ಇದು ಅರ್ಥವಾಗುವುದು.

ಹೀಗೆಯೇ ರಂಗವನ್ನು, ವೇಷಗಳನ್ನು, ಕುಣಿತವನ್ನು, ಮಾತನ್ನು ಒಂದು ದೊಡ್ಡ ಯೋಜನೆಯ ಅಂಗವಾಗಿ ಬಳಸಿ ಕತೆ ಹೇಳುವುದು, ಸಂದೇಶ ಕೊಡುವುದು, ರಸಾನುಭವ ನೀಡುವುದು, ಇಲ್ಲಿಯ ವಿಧಾನ. ಈ ಕಾಲದ್ದಲ್ಲದ, ಕಾಲ್ಪನಿಕ ಕಾಲದ, ಕಾಲ್ಪನಿಕ ಲೋಕದ ವ್ಯಕ್ತಿಗಳನ್ನು ಸಾಮಾನ್ಯರ ಮಾತು ಕೃತಿಗಳಿಗಿಂತ ಭಿನ್ನವಾಗಿಸಿ ಚಿತ್ರಿಸಿ ಕಾಣಿಸುವುದು ಈ ಕಲೆಯ ಉದ್ದೇಶ. ಅದಕ್ಕಾಗಿ ಹುಟ್ಟಿದ ಅಂಗಗಳಿಂದ ಕೂಡಿದ ರಂಗಭಾಷೆ ಅದಕ್ಕಿದೆ. ಆದುದರಿಂದಲೇ, ಇಂದಿನ ಒಂದು ಸಾಮಾಜಿಕ ಕತೆಯನ್ನೊ, ಗಾಂಧೀಜಿಯವರ ವೇಷವನ್ನೂ ಈ ರಂಗದಲ್ಲಿ ತರುವುದಕ್ಕೆ ಆಗುವುದಿಲ್ಲ. ತರುವುದೇ ಆದರೆ, ತುಂಬ ಬದಲಿಸಿ ಯಕ್ಷಗಾನೀಕರಿಸಿ ತರಬೇಕು. ಇಲ್ಲವಾದರೆ, ಒಂದು ಭಾಷೆಯ ವಾಕ್ಯವನ್ನು ವಿಸ್ತರಿಸಲು ಹೋಗಿ ಯಾವ್ಯಾವುದೋ ಭಾಷೆಯಗಳ ಶಬ್ದಗಳನ್ನು ಎಲ್ಲೆಂದರಲ್ಲಿ ಮಿಶ್ರಮಾಡಿ ಅರ್ಥಹೀನ ವಾಕ್ಯಗಳನ್ನು ರಚಿಸಿದಂತೆ ಆಗುತ್ತದೆ.

ಯಕ್ಷಗಾನದ ಕಲಾವಿಧಾನ ಬೆಳೆದದ್ದು, ತಿದ್ದಿದ್ದು. ಅದನ್ನು ಇನ್ನೂ ಬೆಳೆಸಬಾರದೆ? ತಿದ್ದಬಾರದೆ? ಎನ್ನಬಹುದು. ನಿಜ, ತಿದ್ದಬಹುದು. ಬೆಳೆಸಬಹುದು. ಅದಕ್ಕೆ ಅವಕಾಶವೂ ಇದೆ. ಆದರೆ ಹೀಗೆ ಮಾಡಬೇಕಾದರೆ ಅದರ 'ಭಾಷೆ'ಯ ಹಿಡಿತ ಬೇಕು. ಅದರಲ್ಲಿ ಶ್ರದ್ಧೆ ಬೇಕು. ಪ್ರತಿಯೊಂದು ಕಲೆಯ ಸೌಂದರ್ಯ ನಿರ್ಣಯಕ್ಕೂ ಅದರದ್ದೇ ಆದ ನಿಕಷಗಳಿವೆ.ಮಾನದಂಡಗಳಿವೆ. ಈ ನಿಕಷಗಳ, ಮಾನದಂಡಗಳ 'ತಿಳಿವನ್ನೇ ಸೌಂದರ್ಯ ಪ್ರಜ್ಞೆ ಎನ್ನುತ್ತೇವೆ. ಸೌಂದರ್ಯ ಪ್ರಜ್ಞೆ 'ಭಾಷಾ' ಪರಿಜ್ಞಾನ ಇದ್ದಾಗ, ಇದ್ದವರಿಂದ, ಕಲೆಯ ಬೆಳವಣಿಗೆ, ಪರಿಷ್ಕಾರ ಸಾಧ್ಯವಾಗುತ್ತದೆ. ಯಶಸ್ವಿಯಾಗುತ್ತದೆ.

* ಡಾ. ಎಂ. ಪ್ರಭಾಕರ ಜೋಶಿ