ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
21

ಸಂಸ್ಕೃತಿ ಎಂಬುದು ವಿಶಾಲಾರ್ಥದ ಒಂದು ಪದ. ಇದರಲ್ಲಿ ಭೌತಿಕ, ಬೌದ್ಧಿಕ, ತಾಂತ್ರಿಕವಾದ ಎಲ್ಲ ರಚನೆಗಳೂ, ಬದುಕಿಗಾಗಿ ನಾವು ರೂಪಿಸಿಕೊಂಡ ಎಲ್ಲ ಅಂಶಗಳೂ ಸೇರುತ್ತವೆ. ಸಂಸ್ಕೃತಿಯು ಮನಸ್ಸುಗಳನ್ನು ರೂಪಿಸುತ್ತದೆ. ಹಾಗೆಯೆ ಮನಸ್ಸುಗಳಿಂದ ರೂಪಿಸಲ್ಪಡುತ್ತದೆ. ಹಾಗಾಗಿ ಮಾನವ ಸಂವೇದನೆಯೆಂಬುದು ಕಾಲಾತೀತವಾಗಿ, ದೇಶಾತೀತವಾಗಿರುವ ಅಂಶಗಳನ್ನು ಹೊಂದಿದ್ದರೂ, ಕಾಲ, ದೇಶಾನುಗುಣವಾಗಿ ಭಿನ್ನತೆಗಳನ್ನು ಪಡೆದಿದೆ. ಮನಸ್ಸುಗಳ ರೂಪೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಸಾಂಸ್ಕೃತಿಕ ಪ್ರಕಾರಗಳು ಕಾರಕವೂ ಹೌದು. ಪ್ರತಿಫಲನಗಳೂ ಹೌದು. ನಮ್ಮ ಜನಪದ ರಂಗಭೂಮಿ ಕಾಲಕಾಲಕ್ಕೆ ಇವೆರಡೂ ಆಗಿ ರೂಪುಗೊಳ್ಳುತ್ತ, ರೂಪುಗೊಳಿಸುತ್ತ ಬಂದಿದೆ.
ಆದರೆ ಈ ವಿದ್ಯಮಾನವನ್ನು, ಅದು ಇದಿರಿಸಿರುವ, ಇದಿರಿಸಿ ಮೀರಿರುವ ಸವಾಲುಗಳ ನೆಲೆಯಲ್ಲಿ ಒಂದು ಸಾಂಸ್ಕೃತಿಕ ಪ್ರಕ್ರಿಯೆಯ ವರ್ತಮಾನ ಕಾಲೀನ ಪರಿಶೀಲನೆಯಾಗಿ ಇಲ್ಲಿ ವಿವೇಚಿಸಲು ಯತ್ನಿಸಿದೆ. ಇಲ್ಲಿ ಜನಪದ ರಂಗಭೂಮಿ ಎಂಬುದಕ್ಕೆ ಮುಖ್ಯವಾಗಿ ಯಕ್ಷಗಾನ ರಂಗದ ಆಗುಹೋಗುಗಳನ್ನು ಲಕ್ಷಿಸಿದೆ.
ಜನಪದ ರಂಗಭೂಮಿ ಅನ್ನುವಾಗ ಆ ಪದದ ನಿರ್ವಚನದ ಪ್ರಶ್ನೆಯೂ ಇದೆ. ಶಿಷ್ಟ-ಜಾನಪದ ಎಂಬ ವಿಭಾಗ ಮಾಡುವಾಗ, ಯಾರಿಗೆ ಯಾವುದು ಶಿಷ್ಟ, ಆ ಶಿಷ್ಟರು ಯಾರು, ಒಬ್ಬರ ಶಿಷ್ಟ ಇನ್ನೊಬ್ಬರ ಪರಿಶಿಷ್ಟ ಆಗಬಹುದು ಎಂಬ ವಿಚಾರ ಮೊದಲಾದುವನ್ನು ಗಮನಿಸಬೇಕಾಗುತ್ತದೆ. ಇನ್ನು ಆಚರಣಾ ರಂಗಭೂಮಿ ಅನ್ನಲಾಗುವ ಭೂತಾರಾಧನೆ, ಕರಂಗೋಲು, ಮಾದಿರ, ಸೋಮನ ಕುಣಿತ — ಮುಂತಾದವು ರಂಗಭೂಮಿಯೆ, ಆಚರಣೆಯ ರೂಪ ಮಾತ್ರವೆ? ಎಂಬ ಪ್ರಶ್ನೆಯೂ ಉಂಟು. ಭೂತಾರಾಧನೆಯಂತಹ ಪ್ರಕಾರಗಳು ರಂಗಾಂಶಗಳನ್ನು (Theatre elements) ಹೊಂದಿದ್ದರೂ, ಅವು ಜನಪದ ರಂಗಭೂಮಿಯ ಮೂಲದ್ರವ್ಯಗಳು ಮಾತ್ರ. ಮೂಲತಃ ಅವು ಆಚರಣಾತ್ಮಕ ಪ್ರದರ್ಶನಗಳು, ರಂಗಭೂಮಿಗಳಲ್ಲ ಅನ್ನಬಹುದು. "ಅವಸ್ಥಾನು ಕೃತಿಯೇ ನಾಟ್ಯ" ಎಂದು ಭರತನ ನಾಟ್ಯಶಾಸ್ತ್ರವು ಹೇಳುವಾಗಲೂ, ಪ್ರಾಯಃ, ನಾಟ್ಯವಾಗಿ, ಅರ್ಥಾತ್ ನಾಟಕವಾಗಿ ಕಲ್ಪಿಸಿಕೊಂಡ ಅವಸ್ಥಾನುಕೃತಿಯನ್ನೇ ಹೇಳಿದ್ದು ಹೊರತು, ಆಚರಣಾತ್ಮಕ ಅನುಕೃತಿಯನ್ನಲ್ಲ ಎಂದು ತೋರುತ್ತದೆ.
ನಮ್ಮ ಮಧ್ಯೆ ಇರುವ ಜಾನಪದ ರಂಗಭೂಮಿಗಳನ್ನೆಲ್ಲ ಒಟ್ಟಾಗಿ ಬಯಲಾಟಗಳೆನ್ನಬಹುದು. ಯಕ್ಷಗಾನ, ದೊಡ್ಡಾಟ, ಸಣ್ಣಾಟ, ಮೂಡಲಪಾಯ, ಪಾರಿಜಾತ,

* ಡಾ. ಎಂ. ಪ್ರಭಾಕರ ಜೋಶಿ